ಮುಸ್ಲಿಂ ಪರ್ಸನಲ್ ಲಾ ಬೋರ್ಡ್ ನ ಅಧ್ಯಕ್ಷ ಮೌಲಾನಾ ರಾಬೆಅ್ ಹಸನಿ ನದ್ವಿ ನಿಧನ
ಲಕ್ನೋ, ಎ 13 : ವಿಶ್ವವಿಖ್ಯಾತ ಇಸ್ಲಾಮಿಕ್ ಧಾರ್ಮಿಕ ವಿದ್ವಾಂಸ, ಅಖಿಲ ಭಾರತ ಮುಸ್ಲಿಂ ಪರ್ಸನಲ್ ಲಾ ಬೋರ್ಡ್ ನ ಅಧ್ಯಕ್ಷ ಹಾಗು ಲಕ್ನೋದ ದಾರುಲ್ ಉಲೂಮ್ ನದ್ವತುಲ್ ಉಲಮಾದ ಮುಖ್ಯಸ್ಥರಾದ ಮೌಲಾನಾ ಮೊಹಮ್ಮದ್ ರಾಬೆಅ್ ಹಸನಿ ನದ್ವಿ ಅವರು ಗುರುವಾರ ನಿಧನರಾಗಿದ್ದಾರೆ. ಅವರಿಗೆ 93 ವರ್ಷ ವಯಸ್ಸಾಗಿತ್ತು.
ಇಸ್ಲಾಮಿಕ್ ಧಾರ್ಮಿಕ ಶಿಕ್ಷಣ, ತತ್ವಶಾಸ್ತ್ರ, ನ್ಯಾಯಶಾಸ್ತ್ರ ಹಾಗು ಅಂತರ್ ಧರ್ಮೀಯ ಸಂವಾದ ಕ್ಷೇತ್ರಗಳಲ್ಲಿ ದೇಶ ವಿದೇಶಗಳಲ್ಲಿ ವಿಖ್ಯಾತರಾಗಿದ್ದ ಮೌಲಾನಾ ರಾಬೆ ಹಸನಿ ನದ್ವಿಹಲವಾರು ಮಹತ್ವದ ಕೃತಿಗಳನ್ನು ರಚಿಸಿದ್ದಾರೆ.
ಉತ್ತರ ಪ್ರದೇಶದ ರಾಯ್ ಬರೇಲಿಯಲ್ಲಿ 1929 ರಲ್ಲಿ ಜನಿಸಿದ ಅವರು ನದ್ವತುಲ್ ಉಲಮಾದಲ್ಲಿ ಶಿಕ್ಷಣ ಪಡೆದು ಅಲ್ಲೇ ಶಿಕ್ಷಕರಾಗಿ ವೃತ್ತಿ ಜೀವನ ಪ್ರಾರಂಭಿಸಿದರು. 2011 ರಲ್ಲಿ ಮೌಲಾನಾ ಅಬುಲ್ ಹಸನ್ ಅಲಿ ನದ್ವಿ ಅವರ ನಿಧನದ ಬಳಿಕ ಅವರನ್ನು ಆ ಸಂಸ್ಥೆಯ ಮುಖ್ಯಸ್ಥರನ್ನಾಗಿ ನೇಮಿಸಲಾಯಿತು.
ಇಸ್ಲಾಮಿಕ್ ಕರ್ಮಶಾಸ್ತ್ರ ಹಾಗು ಕುರ್ ಆನ್ ವ್ಯಾಖ್ಯಾನಕ್ಕೆ ಸಂಬಂಧಿಸಿ ಅಗಾಧ ಅಧ್ಯಯನ ಮಾಡಿರುವ ಅವರು ಹಲವಾರು ಮಹತ್ವದ ಕೃತಿಗಳನ್ನು ಅವರು ರಚಿಸಿದ್ದಾರೆ. ವಿವಿಧ ಧರ್ಮಗಳ ನಡುವೆ ಅರ್ಥಪೂರ್ಣ ಸಂವಾದ ಬಹಳ ಅತ್ಯಗತ್ಯ ಎಂದು ಬಲವಾಗಿ ಪ್ರತಿಪಾದಿಸುತ್ತಿದ್ದ ಅವರು ದೇಶ ವಿದೇಶಗಳಲ್ಲಿ ಅಂತಹ ನೂರಾರು ಕಾರ್ಯಕ್ರಮಗಳು, ಸಮಾವೇಶಗಳು ಹಾಗು ಸೆಮಿನಾರ್ ಗಳಲ್ಲಿ ಭಾಗವಹಿಸಿದ್ದಾರೆ.
ಅಖಿಲ ಭಾರತ ಮುಸ್ಲಿಂ ಪರ್ಸನಲ್ ಬೋರ್ಡ್ ನ ಪ್ರಧಾನ ಕಾರ್ಯದರ್ಶಿಯಾಗಿದ್ದ ಮೌಲಾನಾ ರಾಬೆಅ್ ನದ್ವಿ ಅವರು ತಮ್ಮ ಸೋದರ ಮಾವ ಮೌಲಾನಾ ಅಬುಲ್ ಹಸನ್ ನದ್ವಿ ಅವರ ನಿಧನದ ಬಳಿಕ ಅದರ ಅಧ್ಯಕ್ಷರಾಗಿ ಜವಾಬ್ದಾರಿ ನಿರ್ವಹಿಸಿದರು.
ದೇಶದ ಮುಸ್ಲಿಂ ಸಂಘಟನೆಗಳ ಒಕ್ಕೊಟವಾದ ಆಲ್ ಇಂಡಿಯಾ ಮುಸ್ಲಿಂ ಮಜ್ಲಿಸೆ ಮುಶಾವರತ್ ನಲ್ಲೂ ಅತ್ಯಂತ ಸಕ್ರಿಯ ಪಾತ್ರ ವಹಿಸಿದ್ದ ಮೌಲಾನಾ ಹಿಂದೂ ಮುಸ್ಲಿಂ ಐಕ್ಯತೆ ಹಾಗು ಸೌಹಾರ್ದದ ಅತ್ಯಂತ ಪ್ರಬಲ ಪ್ರತಿಪಾದಕರಾಗಿದ್ದರು. ಆ ನಿಟ್ಟಿನಲ್ಲಿ ದೇಶದ ಪ್ರಮುಖ ವಿವಿಧ ಧರ್ಮೀಯ ವಿದ್ವಾಂಸರು ಹಾಗು ನಾಯಕರೊಂದಿಗೆ ಸೇರಿಕೊಂಡು ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದರು.