ನಿವೃತ್ತ ಸರಕಾರಿ ನೌಕರರು ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವುದು ಅಗತ್ಯ: ಕೃಷ್ಣಾಪುರ ಶ್ರೀ

Update: 2023-06-02 12:27 GMT

ಉಡುಪಿ : ಪರ್ಯಾಯ ಕೃಷ್ಣಾಪುರ ಮಠದ ಆಶ್ರಯದಲ್ಲಿ ಉಡುಪಿ ಜಿಲ್ಲಾ ಸರಕಾರಿ ನಿವೃತ್ತ ನೌಕರರ ಸಂಘದ ವಾರ್ಷಿಕ ಸಭೆಯನ್ನು ಉಡುಪಿ ಶ್ರೀಕೃಷ್ಣಮಠದ ರಾಜಾಂಗಣದಲ್ಲಿ ಶುಕ್ರವಾರ ಆಯೋಜಿಸಲಾಗಿತ್ತು.

ಸಭೆಯನ್ನು ಉದ್ಘಾಟಿಸಿದ ಪರ್ಯಾಯ ಕೃಷ್ಣಾಪುರ ಮಠಾಧೀಶ ಶ್ರೀವಿದ್ಯಾ ಸಾಗರತೀರ್ಥ ಸ್ವಾಮೀಜಿ ಮಾತನಾಡಿ, ಇದುವರೆಗೆ ಸರಕಾರಿ ಸೇವೆಯಲ್ಲಿದ್ದು ನಿವೃತ್ತಿ ಹೊಂದಿದ ನೌಕರರು ಪ್ರವೃತ್ತಿಯಲ್ಲಿ ತಮ್ಮನ್ನು ಸಮಾಜಮುಖಿ ಕೆಲಸಗಳಲ್ಲಿ ತೊಡಗಿಸಿಕೊಳ್ಳಬೇಕು. ಆ ಮೂಲಕ ಅವರು ದೈಹಿಕ ದೃಢತೆ, ಮಾನಸಿಕ ಸ್ಥೈರ್ಯ ವನ್ನು ಕಾಪಾಡಿಕೊಳ್ಳಬೇಕು ಎಂದು ಹೇಳಿದರು.

ಉಡುಪಿ ಜಿಲ್ಲಾಧಿಕಾರಿ ಕೂರ್ಮಾ ರಾವ್ ಮಾತನಾಡಿ, ಸರಕಾರಿ ನೌಕರರು ಸರಕಾರದ ಅನೇಕ ಯೋಜನೆ ಗಳನ್ನು ಜನರಿಗೆ ತಲುಪಿಸುವಲ್ಲಿ, ಚುನಾವಣಾ ಕಾರ್ಯವನ್ನು ಯಶಸ್ವಿಯಾಗಿ ನಡೆಸುವಲ್ಲಿ ಸಹಕರಿಸಿದ್ದಾರೆ. ಹಲವಾರು ಉತ್ತಮ ಕಾರ್ಯಗಳನ್ನು ನಿರ್ವಹಿಸುವ ಮೂಲಕ ಅನುಭವ ಪಡೆದಿದುಕೊಳ್ಳುತ್ತಾರೆ. ನಿವೃತ್ತಿ ನಂತರ ಇಂತಹ ಸಂಘಟನೆ ಮೂಲಕ ತಮ್ಮ ಅನುಭವವನ್ನು ಹಂಚಿಕೊಳ್ಳುವಂತಾಗಬೇಕು ಎಂದರು.

ಈ ಸಂದರ್ಭದಲ್ಲಿ ಕುಂದಾಪುರ ಮತ್ತು ಕಾರ್ಕಳ ತಾಲೂಕು ಸಂಘದ ಅಧ್ಯಕ್ಷರುಗಳನ್ನು ಮತ್ತು ೮೦ ವಯಸ್ಸು ದಾಟಿರುವ ಹಿರಿಯ ಸದಸ್ಯರನ್ನು ಗೌರವಿಸಲಾಯಿತು. ಕಳೆದ ವರ್ಷದಲ್ಲಿ  ಅಗಲಿದ ಸಂಘದ ಸದಸ್ಯರ ವಿವರ ವನ್ನು ಸಂಘದ ಸದಸ್ಯ ರಘುರಾಮ್ ಶೆಟ್ಟಿ ವಾಚಿಸಿ, ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಸಂಘದ ಅಧ್ಯಕ್ಷ ಎಂ.ನಾರಾಯಣ ಭಟ್ ಸ್ವಾಗತಿಸಿದರು. ಉಪಾಧ್ಯಕ್ಷರಾದ ಹರಿಕೃಷ್ಣ ಶಿವತ್ತಾಯ ವಂದಿಸಿದರು. ಸಂಘದ ಕಾರ್ಯದರ್ಶಿ ಆನಂದ ಗಾಣಿಗ ಸಂಘದ ವರದಿಯನ್ನು ವಾಚಿಸಿ, ಕಾರ್ಯಕ್ರಮ ನಿರೂಪಿಸಿದರು.

Similar News