ಪಿಪಿಸಿಯಲ್ಲಿ ‘ರಾಮಾಯಣದಲ್ಲಿ ಜೀವನಮೌಲ್ಯ’ ಉಪನ್ಯಾಸ
ಉಡುಪಿ, ಜೂ.2:ರಾಮಾಯಣವನ್ನು ಆಳವಾಗಿ ಅಧ್ಯಯನ ಮಾಡಿ ಶ್ರೀರಾಮನ ಆದರ್ಶವನ್ನು ಜೀವನವನ್ನು ಅಳವಡಿಸಿಕೊಳ್ಳಬೇಕು ಎಂದು ಉಡುಪಿ ಶ್ರೀಅದಮಾರು ಮಠ ಶಿಕ್ಷಣ ಮಂಡಳಿಯ ಅಧ್ಯಕ್ಷರಾದ ಶ್ರೀ ಈಶಪ್ರಿಯ ತೀರ್ಥರು ಹೇಳಿದ್ದಾರೆ.
ಉಡುಪಿಯ ಪೂರ್ಣಪ್ರಜ್ಞ ಕಾಲೇಜಿನ ಸಂಸ್ಕೃತ ವಿಭಾಗ ಹಾಗೂ ಪ್ರಜ್ಞಾ ಮಂಥನದ ವತಿಯಿಂದ ನಡೆದ ಶ್ರೀರಾಮಾಯಣದಲ್ಲಿ ಜೀವನಮೌಲ್ಯಗಳು ಎಂಬ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿ ಮಾತನಾಡುತಿದ್ದರು.
ರಾಮನು ರಾಜನಾಗಿ ಆಡಳಿತವನ್ನು ನಡೆಸುವಾಗ ಪ್ರತಿಯೊಬ್ಬರ ಬಗ್ಗೆಯೂ ತಿಳಿದುಕೊಳ್ಳುತ್ತಿದ್ದ. ಕಷ್ಟಸುಖಗಳಿಗೆ ಮನಃ ಪೂರ್ವಕವಾಗಿ ಸ್ಪಂದಿಸುತ್ತಿದ್ದ. ಉತ್ಕೃಷ್ಟವಾಗಿ ರಾಜ್ಯಭಾರ ಮಾಡಿದ್ದ ಎಂದ ಸ್ವಾಮೀಜಿ, ರಾಮಾಯಣ ವನ್ನು ಅವಲೋಕಿಸಿದಾಗ ಸ್ತ್ರೀಯರ ಕುರಿತು ವಿಶೇಷ ವಿಚಾರಗಳು ಬರುತ್ತವೆ ಎಂದರು.
ವಿಶೇಷ ಉಪನ್ಯಾಸಕರಾಗಿ ಆಗಮಿಸಿದ ಆದಿಚುಂಚನಗಿರಿಯ ಕಾಲಭೈರವೇಶ್ವರ ಸಂಸ್ಕೃತ ಮಹಾವಿದ್ಯಾಲಯದ ಪ್ರಾಧ್ಯಾಪಕ ವಿದ್ವಾನ್ ಡಾ. ಮಧುಸೂದನ ಅಡಿಗರು ಮಾತನಾಡಿ, ರಾಮಾಯಣದ ಎಲ್ಲಾ ಪಾತ್ರಗಳೂ, ಕಥಾಭಾಗಗಳೂ, ಘಟನೆಗಳೂ ಒಂದಲ್ಲೊಂದು ರೀತಿಯಲ್ಲಿ ಮೌಲ್ಯಯುತವಾಗಿವೆ. ರಾಮನಲ್ಲಿ ಕಂಡುಬರುವ ಸಹನೆ, ತ್ಯಾಗ ಹಾಗೂ ಧೃಡತೆ ಇವುಗಳನ್ನು ತಿಳಿದುಕೊಂಡಾಗ ಅದರ ಮೌಲ್ಯವು ತಿಳಿಯುತ್ತದೆ ಎಂದರು.
ಕಾಲೇಜಿನ ಪ್ರಾಚಾರ್ಯರಾದ ಡಾ.ರಾಘವೇಂದ್ರ ಎ. ಅಧ್ಯಕ್ಷತೆ ವಹಿಸಿದ್ದರು. ಉಡುಪಿ ಅದಮಾರು ಮಠ ಶಿಕ್ಷಣ ಮಂಡಳಿ ಆಡಳಿತಾಧಿಕಾರಿ ಡಾ. ಎ.ಪಿ ಭಟ್ ಹಾಗೂ ಕಾಲೇಜಿನ ಸಂಸ್ಕೃತ ವಿಭಾಗದ ಮುಖ್ಯಸ್ಥರಾದ ಡಾ. ರಮೇಶ ಟಿ ಎಸ್. ಉಪಸ್ಥಿತರಿದ್ದರು.
ವಿದ್ಯಾರ್ಥಿನಿ ಅನುಷಾ ಸಿ.ಎಚ್ ಸ್ವಾಗತಿಸಿದರು. ಗುರುರಾಜ ಭಟ್ ಕಾರ್ಯಕ್ರಮ ನಿರ್ವಹಿಸಿ ಸ್ನೇಹಾ ನಾಯಕ್ ವಂದಿಸಿದರು.