ಮಾಹೆಗೆ ಲಿಂಗ ಸಮಾನತೆ 4ನೇ, ಗುಣಮಟ್ಟದ ಶಿಕ್ಷಣದಲ್ಲಿ 25ನೇ ರ‍್ಯಾಂಕ್
ಟೈಮ್ಸ್ ಉನ್ನತ ಶಿಕ್ಷಣ ವಿಶ್ವ ವಿವಿ ಇಂಪಾಕ್ಟ್ ರ‍್ಯಾಂಕಿಂಗ್
ಮಣಿಪಾಲ, ಜೂ.3: ಉನ್ನತ ಶಿಕ್ಷಣದಲ್ಲಿ ಟೇಮ್ಸ್ ಜಾಗತಿಕ ವಿಶ್ವವಿದ್ಯಾನಿಲಯಗಳ 2023ನೇ ಸಾಲಿನ ಇಂಪಾಕ್ಟ್ ರ‍್ಯಾಂಕಿಂಗ್ ಪ್ರಕಟ ಗೊಂಡಿದ್ದು, ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಷನ್ (ಮಾಹೆ)ಗೆ ಲಿಂಗ ಸಮಾನತೆಯಲ್ಲಿ ವಿಶ್ವದಲ್ಲೇ 4ನೇ ಹಾಗೂ ಗುಣಮಟ್ಟದ ಶಿಕ್ಷಣದಲ್ಲಿ 25ನೇ ರ‍್ಯಾಂಕ್ ಪ್ರಾಪ್ತವಾಗಿದೆ.
ಇದು ಶಿಕ್ಷಣದಲ್ಲಿ ಲಿಂಗ ಸಮಾನತೆ, ಎಲ್ಲರನ್ನೂ ಒಳಗೊಳ್ಳುವ ಹಾಗೂ ಎಲ್ಲರಿಗೂ ಸಿಗುತ್ತಿರುವ ಸಮಾನವಾದ ಕಲಿಕೆಯ ವಾತಾವರಣ ಹಾಗೂ ಅವಕಾಶಗಳಿಗೆ ಸಾಕ್ಷಿಯಾಗಿದೆ ಎಂದು ಮಾಹೆ ಪ್ರಕಟಣೆಯಲ್ಲಿ ತಿಳಿಸಿದೆ. ಇದರೊಂದಿಗೆ ಮಾಹೆಯಲ್ಲಿ ಸಿಗುತ್ತಿರುವ ವಿಶ್ವಮಟ್ಟದ ಗುಣಮಟ್ಟ ಶಿಕ್ಷಣಕ್ಕೂ ಸಾಕ್ಷಿಯಾಗಿದೆ ಎಂದು ಅದು ಹೇಳಿದೆ.
2023ನೇ ಸಾಲಿನ ಐದನೇ ಇಂಪ್ಯಾಕ್ಟ್ ರ‍್ಯಾಂಕಿಂಗ್ ನಲ್ಲಿ ವಿಶ್ವದ 112 ದೇಶ ಹಾಗೂ ವಲಯಗಳ 1591 ವಿಶ್ವವಿದ್ಯಾನಿಲಯಗಳು ಪಾಲ್ಗೊಂಡಿದ್ದು, ಇವುಗಳಲ್ಲಿ ಮಾಹೆ ಉನ್ನತ ಸ್ಥಾನ ಪಡೆದಿದೆ.
ಮಾಹೆಯ ಈ ಸಾಧನೆ ಕುರಿತು ಹರ್ಷ ವ್ಯಕ್ತಪಡಿಸಿದ ಮಾಹೆ ಕುಲಪತಿ ಲೆ.ಜ.(ಡಾ.) ಎಂ.ಡಿ.ವೆಂಕಟೇಶ್, ಇದು ನಮಗೆ ಅತ್ಯಂತ ಖುಷಿ ಕೊಟ್ಟಿದೆ. ಉನ್ನತ ಶಿಕ್ಷಣದ ಟೈಮ್ಸ್ ಜಾಗತಿಕ ರ್ಯಾಂಕಿಂಗ್‌ನಲ್ಲಿ ಪಡೆದ 4 ಮತ್ತು 25ನೇ ಸ್ಥಾನಗಳು ‘ಟೀಮ್ ಮಾಹೆ’ಯ ಸತತ ಪ್ರಯತ್ನಗಳ ಫಲವಾಗಿದೆ. ಮಾಹೆ ಯಾವತ್ತೂ ಲಿಂಗ ಸಮಾನತೆ ಹಾಗೂ ಗುಣಮಟ್ಟದ ಶಿಕ್ಷಣಕ್ಕೆ ಆದ್ಯತೆ ನೀಡಿದೆ ಎಂದರು.
ಮಾಹೆಯ ಪ್ರೊ ಚಾನ್ಸಲರ್ ಡಾ.ಎಚ್.ಎಸ್.ಬಲ್ಲಾಳ್ ಹಾಗೂ ಮಾಹೆ ಟ್ರಸ್ಟ್‌ನ ಅಧ್ಯಕ್ಷ ಡಾ.ರಂಜನ್ ಆರ್. ಪೈ ಅವರು ಮಾಹೆಯ ಸಾಧನೆಯಿಂದ ರೋಮಾಂಚನವಾಗಿದೆ ಎಂದು ತಿಳಿಸಿದ್ದಾರೆ.