ಗೃಹಲಕ್ಷ್ಮೀ ಯೋಜನೆ ಬಗ್ಗೆ ಒಂದೆರಡು ದಿನದಲ್ಲಿ ಅಧಿಸೂಚನೆ: ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ

ಉಡುಪಿಯಲ್ಲಿ ಶಕ್ತಿ ಯೋಜನೆ ಉದ್ಘಾಟಿಸಿದ ಲಕ್ಷ್ಮಿ ಹೆಬ್ಬಾಳ್ಕರ್

Update: 2023-06-11 14:28 GMT

ಉಡುಪಿ, ಜೂ.11: ಕಾಂಗ್ರೆಸ್ ಪಕ್ಷ ರಾಜ್ಯದ ಜನತೆಗೆ ನೀಡಿದ ಭರವಸೆಯಲ್ಲಿ ಮೊದಲನೇಯದಾದ ವಿದ್ಯಾರ್ಥಿನಿಯರು ಹಾಗೂ ಮಹಿಳೆಯರಿಗೆ ಉಚಿತ ಪ್ರಯಾಣ ಸೌಲಭ್ಯ ನೀಡುವ ಶಕ್ತಿ ಯೋಜನೆ ಇಂದು ಅನುಷ್ಠಾನಗೊಂಡಿದೆ. ಇನ್ನೊಂದು ಪ್ರಮುಖ ಗ್ಯಾರಂಟಿಯಾದ ಗೃಹಲಕ್ಷ್ಮೀ ಯೋಜನೆಯ ಬಗ್ಗೆ ಇನ್ನೆರಡು ದಿನಗಳಲ್ಲಿ ಅಧಿಸೂಚನೆ ಹೊರಡಿಸಿ ಆ.15ರಂದು ಜಾರಿಗೊಳಿಸುವ ಪ್ರಯತ್ನವನ್ನು ಸರಕಾರ ಮಾಡಲಿದೆ ಎಂದು ರಾಜ್ಯದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಅಂಗವಿಕಲರು ಮತ್ತು ಹಿರಿಯ ನಾಗರೀಕರ ಸಬಲೀಕರಣ ಇಲಾಖೆ ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದ್ದಾರೆ.

ಉಡುಪಿ ನಗರದ ಬನ್ನಂಜೆಯಲ್ಲಿರುವ ಕ.ರಾ.ರ.ಸಾ.ನಿಗಮದ ಡಾ.ವಿ.ಎಸ್.ಆಚಾರ್ಯ ಬಸ್ ನಿಲ್ದಾಣದಲ್ಲಿ ರಾಜ್ಯ ಸರಕಾರದ ಶಕ್ತಿ ಯೋಜನೆಗೆ ಚಾಲನೆ ನೀಡಿ, ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ರಾಜ್ಯ ಸರಕಾರ ರಾಜ್ಯದ ಮಹಿಳೆಯರು, ವಿದ್ಯಾರ್ಥಿನಿಯರು ಹಾಗೂ ಲಿಂಗತ್ವ ಅಲ್ಪಸಂಖ್ಯಾತರಿಗೆ ರಾಜ್ಯಾದ್ಯಂತ ನಿಗಮದ ನಗರ ಸಾರಿಗೆ, ಸಾಮಾನ್ಯ ಸಾರಿಗೆ ಹಾಗೂ ವೇಗದೂತ ಸರಕಾರಿ ಬಸ್‌ಗಳಲ್ಲಿ ಉಚಿತವಾಗಿ ಸಂಚರಿಸಲು ಜಾರಿಗೆ ತಂದಿರುವ ಈ ಶಕ್ತಿ ಯೋಜನೆಯು ಮಹಿಳೆಯರ ಸ್ವಾಭಿಮಾನಿ ಮತ್ತು ಸ್ವಾವಲಂಬಿ ಬದುಕಿಗೆ ನೆರವಾಗಲಿದೆ ಎಂದರು.

ಚುನಾವಣೆ ವೇಳೆ ಪಕ್ಷ ನೀಡಿದ 5 ಗ್ಯಾರಂಟಿಗಳಲ್ಲಿ ಮೊದಲನೇಯದನ್ನು ಅಧಿಕಾರಕ್ಕೇರಿದ ಒಂದು ತಿಂಗಳೊಳಗೆ ಜಾರಿಗೊಳಿಸುವ ಮೂಲಕ ಸರಕಾರ ರಾಜ್ಯದ ಜನತೆಗೆ ಕೊಟ್ಟ ಮಾತನ್ನು ಉಳಿಸಿಕೊಂಡಿದೆ. ಎಲ್ಲಾ ಮಹಿಳೆಯರ ನಾರೀಶಕ್ತಿಯ ಪ್ರತೀಕವಾಗಿ ಸ್ವಾಭಿಮಾನಿ, ಸ್ವಾವಲಂಬಿ ಬದುಕಿಗೆ ಗ್ಯಾರಂಟಿ ನೆರವಾಗಲಿದೆ ಎಂದು ಸಚಿವೆ ನುಡಿದರು.

18,609 ಬಸ್‌ಗಳಲ್ಲಿ ಜಾರಿ: ಉಡುಪಿ ಜಿಲ್ಲೆಯ ಎಲ್ಲಾ ವಿದ್ಯಾರ್ಥಿನಿ ಯರು ಹಾಗೂ ಮಹಿಳೆಯರು ಇದರ ಸದುಪಯೋಗ ಪಡೆದುಕೊಳ್ಳಬೇಕು. ರಾಜ್ಯದಲ್ಲಿರುವ 20,000ಕ್ಕೂ ಅಧಿಕ ಸರಕಾರಿ ಬಸ್‌ಗಳಲ್ಲಿ 18,609 ಬಸ್ ಗಳಲ್ಲಿ ಶಕ್ತಿ ಯೋಜನೆಯಡಿ ಮಳೆಯರಿಗೆ ಉಚಿತ ಪ್ರಯಾಣಕ್ಕೆ ಅವಕಾಶ ದೊರೆಯಲಿದೆ. ರಾಜ್ಯದ ಒಟ್ಟು ಸರಕಾರಿ ಬಸ್‌ಗಳಲ್ಲಿ  ಶೇ.95  ಬಸ್‌ಗಳಲ್ಲಿ  ಪ್ರತಿದಿನ 41.8 ಲಕ್ಷ ಮಹಿಳೆಯರು ತಮ್ಮ ಪ್ರತಿದಿನದ ದೈನಂದಿನ ದುಡಿಮೆ ಮತ್ತಿತರ ಕಾರ್ಯಗಳಿಗೆ ಬಸ್‌ಗಳಲ್ಲಿ ಸಂಚರಿಸುತಿದ್ದು ಇದರ ಲಾಭ ಪಡೆಯಲಿದ್ದಾರೆ. ಕಾಂಗ್ರೆಸ್ ಸರಕಾರ ನೀಡಿರುವ ಉಚಿತ ಪ್ರಯಾಣ ಸೌಲಭ್ಯ ಮಹಿಳೆಯರ ಸ್ವಾಭಿಮಾನ ಮತ್ತು ಸ್ವಾವಲಂಬಿ ಜೀವನಕ್ಕೆ ನೆರವಾಗಲಿದೆ. ಈ ಯೋಜನೆಯಿಂದ ಸರಕಾರಕ್ಕೆ ವಾರ್ಷಿಕ 4051 ಕೋಟಿ ರೂ ವೆಚ್ಚ ಬರಲಿದೆ ಎಂದವರು ವಿವರಿಸಿದರು.

ರಾಜ್ಯ ಸರಕಾರ ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದ ಉಳಿದ 4 ಗ್ಯಾರಂಟಿಗಳನ್ನು ಹಂತ ಹಂತವಾಗಿ ಈಡೇರಿಸಲಾಗುವುದು ಎಂದ ಸಚಿವರು,  ಗೃಹಲಕ್ಷ್ಮಿ ಯೋಜನೆಗೆ ಆಗಸ್ಟ್ 15ರಂದು ರಾಜ್ಯಾದ್ಯಂತ  ಚಾಲನೆ ನೀಡಲಾಗುವುದು. ರಾಜ್ಯದ ಬಿಪಿಎಲ್ ಮತ್ತು ಎಪಿಎಲ್‌ನ ಎಲ್ಲಾ ಮಹಿಳೆಯರು ಇದರ ಪ್ರಯೋಜನ ಪಡೆಯ ಬಹುದಾಗಿದ್ದು, ಈ ಕುರಿತ ಅರ್ಜಿ ನಮೂನೆ ಯನ್ನು ಇನ್ನು 2 ದಿನಗಳಲ್ಲಿ ಬಿಡುಗಡೆ ಮಾಡಲಾಗುವುದು. ಆನ್‌ಲೈನ್ ಮೂಲಕ ಅಥವಾ ಸಿಡಿಪಿಓ ಗಳ ಮೂಲಕ , ಅಂಗನವಾಡಿ ಶಿಕ್ಷಕರ ಮೂಲಕ ಹಾಗೂ ಗ್ರಾಮ ಒನ್ ಮೂಲಕ ಸಹ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗುವುದು. ತಮ್ಮ ಇಲಾಖೆ ಯೋಜನೆಯನ್ನು ಜಾರಿಗೊಳಿ ಸಲಿದೆ ಎಂದರು.

ಉಡುಪಿ ಜಿಲ್ಲೆಯ ಉಸ್ತುವಾರಿ ಸಚಿವೆಯಾಗಿ,  ಜಿಲ್ಲೆಯ ಪರಿಸ್ಥಿತಿಯ ಬಗ್ಗೆ ಜಿಲ್ಲಾಧಿಕಾರಿ ಮತ್ತು ಇತರೇ ಅಧಿಕಾರಿ ಗಳೊಂದಿಗೆ ಚರ್ಚಿಸಿದ್ದು, ಜಿಲ್ಲೆಯ ಎಲ್ಲಾ ಸಾರ್ವಜನಿಕರು ಮತ್ತು ಎಲ್ಲಾ ಪಕ್ಷಗಳ ಸಹಕಾರದಿಂದ  ಬಸವಣ್ಣ ಅವರ ಕಾಯಕವೇ ಕೈಲಾಸ ಹಾಗೂ ದಯವೇ ಧರ್ಮದ ಮೂಲ ಎಂಬ ಸಂದೇಶದಂತೆ ತಾನು ಕಾರ್ಯ ನಿರ್ವಹಿಸಲಿದ್ದೇನೆ ಎಂದವರು ಜಿಲ್ಲೆಯ ಜನತೆಗೆ ಭರವಸೆ ನೀಡಿದರು.

ಜಿಲ್ಲಾಡಳಿತವು  ಜಿಲ್ಲೆಯ ಜನರ ಸಮಸ್ಯೆಗಳಿಗೆ ದಿನದ 24 ಗಂಟೆಗಳ ಕಾಲವೂ ಸ್ಪಂದಿಸುವಂತೆ ಮತ್ತು ಎಲ್ಲಾ ಅಧಿಕಾರಿಗಳು ತಮ್ಮ ಜವಾಬ್ದಾರಿ ಗಳನ್ನು ಅರಿತು ಕಾರ್ಯ ನಿರ್ವಹಿಸಿ ಜಿಲ್ಲೆಯ ಪ್ರಗತಿಗೆ ಎಲ್ಲಾ ರೀತಿಯ ಸಹಕಾರ ನೀಡುವಂತೆ ಸಚಿವರು ಮನವಿ ಮಾಡಿದರು. 

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಕರ್ನಾಟಕ ರಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೆ. ಜಯ ಪ್ರಕಾಶ್ ಹೆಗ್ಡೆ ಮಾತನಾಡಿ,  ಶಕ್ತಿ ಯೋಜನೆ ರಾಜ್ಯದ ಆರ್ಥಿಕತೆಗೆ ಹೊರೆ ಎಂಬ ಟೀಕೆಯನ್ನು ಖಂಡಿಸಿ, ಇದು ಮಹಿಳಾ ಸಬಲೀಕರಣ ಯೋಜನೆಯಾಗಿದೆ ಎಂದು ವಿವರಿಸಿದರು. ಇದೇ ರೀತಿ ಚುನಾವಣೆಗೆ ಮುನ್ನ ನೀಡಿದ ಎಲ್ಲಾ ಭರವಸೆಗಳನ್ನು ಈಡೇರಿಸುವುದು ಸರಕಾರದ ಜವಾಬ್ದಾರಿ ಎಂದರು. 

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಉಡುಪಿ ಶಾಸಕ ಯಶ್ಪಾಲ್ ಸುವರ್ಣ ಮಾತನಾಡಿ, ಇದೊಂದು ಒಳ್ಳೆಯ ಯೋಜನೆಯಾಗಿದ್ದು, ಸರಕಾರದ ಸೌಲಭ್ಯವನ್ನು ಜನರ ಮನೆಮನೆಗೆ ತಲುಪಿಸಲು ಅಧಿಕಾರಿಗಳು ಶ್ರಮಿಸಿ ಯೋಜನೆಯ ಯಶಸ್ಸಿಗೆ ಕಾರಣರಾಗಬೇಕು ಎಂದರು.

ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ ಅವರೂ ಮಾತನಾಡಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಪ್ರಸನ್ನ ಹೆಚ್, ಜಿಲ್ಲಾ ಪೊಲೀಸ್ ಅಧೀಕ್ಷಕ ಅಕ್ಷಯ್ ಎಂ.ಹಾಕೆ, ಅಪರ ಜಿಲ್ಲಾಧಿಕಾರಿ ವೀಣಾ ಬಿ.ಎನ್, ತರಬೇತಿ ನಿರತ ಐಎಎಸ್ ಅಧಿಕಾರಿ ಯತೀಶ್, ಕುಂದಾಪುರ ಉಪ ವಿಭಾಗಾಧಿಕಾರಿ ರಶ್ಮಿ, ಮತ್ತಿತರರು ಉಪಸ್ಥಿತರಿದ್ದರು. ಇದೇ ವೇಳೆ ಜಿಲ್ಲಾಡಳಿತದ ವತಿ ಯಿಂದ ಜಿಲ್ಲಾ ಉಸ್ತುವಾರಿ ಸಚಿವರನ್ನು ಸನ್ಮಾನಿಸಲಾಯಿತು.

ಜಿಲ್ಲಾಧಿಕಾರಿ ಕೂರ್ಮಾ ರಾವ್ ಎಂ ಸ್ವಾಗತಿಸಿದರು. ಕ.ರಾ.ರ.ಸಾ. ನಿಗಮ ಮಂಗಳೂರು ವಿಭಾಗದ ಯಾಂತ್ರಿಕ ಅಭಿಯಂತರ ಎಂ.ಜಿ.ಜಯಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾನೂನು ಅಧಿಕಾರಿ ಸಹನಾ ಎಂ. ವಂದಿಸಿ ಪ್ರಶಾಂತ್ ಹಾವಂಜೆ ಕಾರ್ಯಕ್ರಮ ನಿರೂಪಿಸಿದರು.

Similar News