ಲಂಡನ್‌ನ ವರ್ಲ್ಡ್ ಬುಕ್ ಆಫ್ ರೆಕಾರ್ಡ್‌ನಲ್ಲಿ ಪರ್ಕಳದ ಆರ್.ಮನೋಹರ್‌ರ ಬೈನಾಕುಲರ್

Update: 2024-09-12 16:38 GMT

ಉಡುಪಿ: ಮಣಿಪಾಲ ಎಂಐಟಿ ಕಾಲೇಜಿನ ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗದಲ್ಲಿ ತಂತ್ರಜ್ಞರಾಗಿರುವ ಪರ್ಕಳದ ಆರ್. ಮನೋಹರ್ ಅವರು ಅಭಿವೃದ್ಧಿ ಪಡಿಸಿದ ಎರಡು ದೂರದರ್ಶಕಗಳು (ಬೈನಾಕುಲರ್) ಲಂಡನ್‌ನ ವರ್ಲ್ಡ್ ಬುಕ್ ಆಫ್ ರೆಕಾರ್ಕ್ಸ್ ಹಾಗೂ ದಿ ಬ್ರಿಟಿಷ್ ವರ್ಲ್ಡ್ ರೆಕಾರ್ಡ್ಸ್‌ನಲ್ಲಿ ಸ್ಥಾನ ಪಡೆದುಕೊಂಡಿವೆ.

ಬುಧವಾರ ಉಡುಪಿಯಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಈ ಕುರಿತಂತೆ ಮಾಹಿತಿಗಳನ್ನು ಮನೋಹರ್ ಹಂಚಿಕೊಂಡರು. ಅಲ್ಲದೇ ಗಿನ್ನೆಸ್ ವಿಶ್ವ ದಾಖಲೆ, ಅಮೆರಿಕ್ ಬುಕ್ ಆಫ್ ರೆಕಾರ್ಡ್ಸ್ ಹಾಗೂ ಭಾರತದ ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್‌ನಲ್ಲೂ ಸ್ಥಾನ ಪಡೆಯುವ ಪ್ರಕ್ರಿಯೆ ಜಾರಿಯಲ್ಲಿದೆ ಎಂದು ಅವರು ತಿಳಿಸಿದರು.

‘ಮನೋಹರ್ ಅವರು ಅಭಿವೃದ್ಧಿ ಪಡಿಸಿ ನಿರ್ಮಿಸಿದ ವಿಶ್ವದ ಅತಿ ಶಕ್ತಿಶಾಲಿ ಹಾಗೂ ವಿಶಿಷ್ಟ, 200ರಿಂದ 240 ಮೆಗ್ನಿಫಿಕೇಷನ್ (ಅತಿದೂರದ ವಸ್ತುಗಳನ್ನು ಗಾತ್ರವರ್ಧಕವಾಗಿ ತೋರಿಸುವ ಸಾಮರ್ಥ್ಯ) ಬೈನಾವ್ಯೆವರ್ ಇರುವ ವರ್ಲ್ಡ್ ಬುಕ್ ಆಫ್ ರೆಕಾರ್ಡ್ಸ್‌ಗೆ ಸೇರ್ಪಡೆಗೊಳಿಸಲಾಗಿದೆ’ ಎಂದು ಸಂಸ್ಥೆ ಆರ್.ಮನೋಹರ್ ಅವರಿಗೆ ಜು.27ರಂದು ನೀಡಿರುವ ಮಾನ್ಯತಾ ಪತ್ರದಲ್ಲಿ ತಿಳಿಸಲಾಗಿದೆ.

ಸುಮಾರು ಎರಡು ಕೆ.ಜಿ.ತೂಕದ 4 ಅಡಿ ಉದ್ದದ ಬೈನಾಕುಲರ್‌ನ್ನು ತಾವು ಸತತ ಪ್ರಯೋಗದ ಬಳಿಕ ಅಭಿವೃದ್ಧಿ ಪಡಿಸಿರುವುದಾಗಿ ಹೇಳಿಕೊಂಡ ಮನೋಹರ್, ಇದರಲ್ಲಿ ಎರಡೂ ಕಣ್ಣುಗಳ ಮೂಲಕ ನೇರವಾಗಿ ಚಂದ್ರನ ಮೇಲ್ಮೈಯನ್ನೂ ಸ್ಪಷ್ಟವಾಗಿ ವೀಕ್ಷಿಸಬಹುದು ಎಂದು ತಿಳಿಸಿದರು. ಇಂದು ಹೆಚ್ಚಿನ ದೂರದರ್ಶಕಗಳು ಬಗ್ಗಿ ನೋಡುವ ರೀತಿಯಲ್ಲಿದ್ದರೆ, ತಮ್ಮದು ನೇರವಾಗಿ ಎರಡೂ ಕಣ್ಣುಗಳ ಮೂಲಕ ನೋಡುವ ಸೌಲಭ್ಯ ಹೊಂದಿದೆ ಎಂದರು.

ತಾವು ಅಭಿವೃದ್ಧಿ ಪಡಿಸಿದ ಒಂದೂವರೆ ಅಡಿ ಉದ್ದದ 40ರಿಂದ 60 ಮೆಗ್ನಿಫಿಕೇಷನ್ ಹೊಂದಿರುವ ಸಣ್ಣ ದೂರದರ್ಶಕ ದಿ ಬ್ರಿಟಿಷ್ ವಲ್ಡ್ ರೆಕಾರ್ಡ್ಸ್‌ನಲ್ಲಿ ಸ್ಥಾನ ಪಡೆದಿದೆ. ತಾವು ತಯಾರಿಸಿದ ಎರಡು ದೂರದರ್ಶಕಗಳ ಮೂಲಕವೂ ಆಕಾಶಕಾಯಗಳನ್ನು ಆರಾಮವಾಗಿ ವೀಕ್ಷಿಸಬಹುದು ಎಂದವರು ತಿಳಿಸಿದರು.

ಆಕಾಶದಲ್ಲಿ ಆಗಾಗ ಸಂಭವಿಸುವ ವಿಶಿಷ್ಟ ವಿದ್ಯಮಾನಗಳನ್ನು ತಾವು ಅಭಿವೃದ್ಧಿ ಪಡಿಸಿದ ದೂರದರ್ಶಕಗಳ ಮೂಲಕ ಆರಾಮವಾಗಿ ಹೆಚ್ಚು ಸ್ಪಷ್ಟ ವಾಗಿ ನೋಡಬಹುದು. ಇವುಗಳಲ್ಲಿರುವ ಲೆನ್ಸ್‌ಗಳ ಸಾಮರ್ಥ್ಯವನ್ನು ಇನ್ನಷ್ಟು ಹೆಚ್ಚಿಸುವ ಮೂಲಕ ದೂರದ ವಸ್ತುಗಳು ಇನ್ನಷ್ಟು ಸ್ಪಷ್ಟವಾಗಿ ಗೋಚರಿಸುವಂತೆ ಮಾಡುವ ಪ್ರಯತ್ನ ನಡೆಸಿದ್ದೇನೆ ಎಂದರು.

ತಾವು ಅಭಿವೃದ್ಧಿ ಪಡಿಸಿದ 200-240 ಎಕ್ಸ್ ಎಲ್ ದೂರದರ್ಶಕಕ್ಕೆ ಭಾರತೀಯ ಸೇನೆಯಿಂದ ಬೇಡಿಕೆ ಬಂದಿದೆ. ಸೈನಿಕರ ಅಭ್ಯಾಸದ ವೇಳೆ ದೂರದ ಗುರಿಯ ನಿಖರತೆಯನ್ನು ತಿಳಿಯಲು ಇದನ್ನು ಬಳಸುವ ಸಾಧ್ಯತೆ ಇದೆ. ಸುಮಾರು 500ರಷ್ಟು ದೂರದರ್ಶಕಕ್ಕೆ ಅದು ಬೇಡಿಕೆ ಇಟ್ಟಿದೆ ಎಂದು ಮನೋಹರ್ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಸಮಾಜಸೇವಕ ಕೃಷ್ಣಮೂರ್ತಿ ಆಚಾರ್ಯ ಹಾಗೂ ಸಾಮಾಜಿಕ ಕಾರ್ಯಕರ್ತ ಗಣೇಶ್‌ರಾಜ್ ಸರಳೇಬೆಟ್ಟು ಉಪಸ್ಥಿತರಿದ್ದರು.


 



Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News