ಕೇಂದ್ರ ಸರಕಾರ ‘ಕಸ್ತೂರಿ ರಂಗನ್ ವರದಿ’ ತಿರಸ್ಕರಿಸಲು ಆಗ್ರಹಿಸಿ ಧರಣಿ
ಬೆಂಗಳೂರು : ಅವೈಜ್ಞಾನಿಕ ʼಕಸ್ತೂರಿ ರಂಗನ್ ವರದಿʼಯನ್ನು ರಾಜ್ಯ ಸರಕಾರ ತಿರಸ್ಕರಿಸಿದ್ದು, ಕೇಂದ್ರ ಸರಕಾರವೂ ತಿರಸ್ಕರಿಸಬೇಕು ಎಂದು ಆಗ್ರಹಿಸಿ, ‘ರಾಜ್ಯ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ’ಯ ನೇತೃತ್ವದಲ್ಲಿ ಗುರುವಾರ ನಗರದ ಫ್ರೀಡಂ ಪಾರ್ಕ್ನಲ್ಲಿ ಬೃಹತ್ ಧರಣಿ ಸತ್ಯಾಗ್ರಹ ನಡೆಸಲಾಯಿತು.
ಅರಣ್ಯ ಭೂಮಿಯಲ್ಲಿ ವಾಸವಿರುವ ಮತ್ತು ಕೃಷಿಗೆ ಸಂಬಂಧಿಸಿದ ಅರಣ್ಯವಾಸಿಗಳು ತಲಾತಲಾಂತರದಿಂದ ಜೀವನ ನಿರ್ವಹಣೆ ಮಾಡುತ್ತಿದ್ದಾರೆ. ಅರಣ್ಯ ಹಕ್ಕು ಕಾಯ್ದೆ ಅನುಷ್ಟಾನದಲ್ಲಿ ವೈಫಲ್ಯವಿರುವ ಕಾರಣದಿಂದ ಅರಣ್ಯ ಹಕ್ಕುಪತ್ರಕ್ಕಾಗಿ ನೀಡಿದ ಅನೇಕ ಅರ್ಜಿಗಳು ತಿರಸ್ಕಾರವಾಗಿವೆ. ಆದ್ದರಿಂದ ಅರಣ್ಯವಾಸಿಗಳನ್ನು ಕಾನೂನು ಬಾಹಿರ ಒಕ್ಕಲೆಬ್ಬಿಸುವ ಮತ್ತು ದೌರ್ಜನ್ಯ ಎಸಗುವ ಕ್ರಮವನ್ನು ನಿಯಂತ್ರಿಸಬೇಕು ಎಂದು ಧರಣಿ ನಿರತರು ಆಗ್ರಹಿಸಿದರು.
ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ಮಾತನಾಡಿ, ‘ಸುಪ್ರೀಂ ಕೋರ್ಟ್ನಲ್ಲಿ ಅರಣ್ಯ ಹಕ್ಕು ಕಾಯ್ದೆ ಅಡಿಯಲ್ಲಿ ತಿರಸ್ಕಾರವಾದ ಅರ್ಜಿಗಳನ್ನು ಒಕ್ಕಲೆಬ್ಬಿಸಬೇಕು ಎಂದು ಆದೇಶವಾದರೆ ರಾಜ್ಯದಲ್ಲಿ ಅರಣ್ಯವಾಸಿಗಳು ಅರಣ್ಯದಲ್ಲಿ ಬದುಕಲು ಸಾಧ್ಯವಿಲ್ಲ. ಎಲ್ಲ ಅರಣ್ಯವಾಸಿಗಳಿಗೆ ವಿದ್ಯುತ್, ನೀರು, ಪಡಿತರ ಚೀಟಿ, ಆಧಾರ್ ಕಾರ್ಡ್, ರಸ್ತೆ, ಶಾಲೆಗಳನ್ನು ನಿರ್ಮಾಣ ಮಾಡಿ, ಕಂದಾಯ ಕಟ್ಟಿಸಿಕೊಳ್ಳಲಾಗಿದೆ. ಎಲ್ಲ ರೀತಿಯ ನಾಗರಿಕ ಸೌಲತ್ತುಗಳನ್ನು ನೀಡಿ, ಇನ್ನೊಂದು ಕಡೆ ಅರಣ್ಯದಿಂದ ಹೊರಗೆ ಹಾಕಲಾಗುತ್ತಿದೆ ಎಂದು ಆಕ್ರೊಶ ವ್ಯಕ್ತಪಡಿಸಿದರು.
ಕರ್ನಾಟಕದಲ್ಲಿ 2ಲಕ್ಷ 94 ಸಾವಿರ ಅರಣ್ಯವಾಸಿಗಳು ಇದ್ದು ಎಲ್ಲರೂ ಅರ್ಜಿಯನು ಸಲ್ಲಿಸಿದ್ದಾರೆ. 1ಲಕ್ಷದ 84 ಸಾವಿರ ಅರ್ಜಿಗಳು ತಿರಸ್ಕಾರವಾಗಿವೆ. ಜತೆಗೆ 15, 798 ಅರ್ಜಿಗಳಿಗೆ ಮಾತ್ರ ಮಾನ್ಯತೆ ಸಿಕ್ಕಿದೆ. ಇದರಿಂದ ಕರ್ನಾಟಕದಲ್ಲಿ ಅರಣ್ಯ ಹಕ್ಕು ಕಾಯ್ದೆ ಸಂಪೂರ್ಣವಾಗಿ ವಿಫಲವಾಗಿದೆ ಎಂದು ರವೀಂದ್ರ ನಾಯ್ಕ ತಿಳಿಸಿದರು.
ರಾಜ್ಯ ಸರಕಾರ ಕಸ್ತೂರಿ ರಂಗನ್ ವರದಿಯನ್ನು ತಿರಸ್ಕಾರ ಮಾಡಿದೆ. ಆದರೆ ಅದನ್ನು ಜಾರಿ ಮಾಡುವುದು ಕೇಂದ್ರ ಸರಕಾರವಾಗಿದೆ. ಅದಕ್ಕಾಗಿ ಕೇಂದ್ರ ಸರಕಾರವೂ ವರದಿಯನ್ನು ಸಂಪೂರ್ಣವಾಗಿ ತಿರಸ್ಕರಿಸಬೇಕು. ಇಲ್ಲವಾದರೆ ಬೃಹತ್ ಸಂಖ್ಯೆಯಲ್ಲಿ ‘ದಿಲ್ಲಿ ಚಲೋ’ ಹೋರಾಟ ಮಾಡಲಾಗುವುದು ಎಂದು ಅವರು ಎಚ್ಚರಿಕೆ ನೀಡಿದರು.
ನಿವೃತ್ತ ನ್ಯಾಯಾಧೀಶ ಎಚ್.ಎನ್.ನಾಗಮೋಹನ್ ದಾಸ್ ಮಾತನಾಡಿ, ‘2006ರಲ್ಲಿ ಅರಣ್ಯ ಹಕ್ಕು ಕಾಯ್ದೆಯನ್ನು ಸರಕಾರ ಜಾರಿ ಮಾಡಿದೆ. ಹಂತ-ಹಂತದ ಹೋರಾಟಕ್ಕೆ ಜಯ ಸಿಗುತ್ತದೆ. ಭಾರತದ ಸಂವಿಧಾನ ಹೋರಾಟಗಾರರಿಗೆ ಆಯುಧ ಸಂವಿಧಾನದ ಚೌಕಟ್ಟಿನಲ್ಲಿ ಹೋರಾಟವನ್ನು ಮುಂದುವರಿಸಿ. ಅರಣ್ಯವಾಸಿಗಳ ಭೂಮಿ ಸಂಬಂಧ ಸಮಸ್ಯೆಗಳನ್ನು ಇತ್ಯರ್ಥಪಡಿಸುವುದಿಲ್ಲವೋ ಅಲ್ಲಿಯ ವರೆಗೂ ಹೋರಾಟ ನಿಲ್ಲದ ಹೋರಾಟವಾಗಿದೆ ಎಂದು ಅಭಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ.ಮಹದೇವಪ್ಪ, ವಿಧಾನಸಭೆ ಉಪಸಭಾಪತಿ ರುದ್ರಪ್ಪ ಲಮಾಣಿ, ಗ್ಯಾರಂಟಿ ಸಮಿತಿ ಅಧ್ಯಕ್ಷ ಎಚ್.ಎಂ.ರೇವಣ್ಣ, ಸಾಮಾಜಿಕ ಹೋರಾಟಗಾರ ಭರಮಣ್ಣ ಮತ್ತಿತರರು ಹಾಜರಿದ್ದರು. ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಸಾವಿರಾರು ಅರಣ್ಯವಾಸಿಗಳು ಧರಣಿ ಸತ್ಯಾಗ್ರಹದಲ್ಲಿ ಪಾಲ್ಗೊಂಡಿದ್ದರು.
ವರದಿ ತಿರಸ್ಕಾರ ಮಾಡುವವರೆಗೂ ಬೆಂಬಲ :
ಕಸ್ತೂರಿ ರಂಗನ್ ವರದಿ ಕರ್ನಾಟಕದ ಅರಣ್ಯವಾಸಿಗಳಿಗೆ ಮಾತ್ರವಲ್ಲ, ಇನ್ನು ಹಲವು ಜನರಿಗೆ ಹೆಚ್ಚು ಅನ್ಯಾಯವಾಗುತ್ತದೆ ಎಂದು ರಾಜ್ಯ ಸರಕಾರ ಒಪ್ಪುವುದಿಲ್ಲ ಎಂದು ನಿರ್ಣಯ ತೆಗೆದುಕೊಳ್ಳಲಾಗಿದೆ. ಕೇಂದ್ರ ಸರಕಾರ ತಿರಸ್ಕಾರ ಮಾಡುವವರೆಗೆ ರಾಜ್ಯ ಸರಕಾರ ಅರಣ್ಯವಾಸಿಗಳ ಜತೆಗೆ ಇರುತ್ತದೆ ಎಂದು ಕಾನೂನು ಸಚಿವ ಎಚ್.ಕೆ.ಪಾಟೀಲ್ ಭರವಸೆ ನೀಡಿದ್ದಾರೆ.
ಧರಣಿ ನಿರತರನ್ನು ಉದ್ದೇಶಿಸಿ ಮಾನತಾಡಿದ ಅವರು, ಕರ್ನಾಟಕದಲ್ಲಿ ಅರಣ್ಯ ಸಾಗುವಳಿ ಹಕ್ಕು ಇದೆ. ಅದನ್ನು ಕೊಡಲು ಕಾನೂನು ಆಗಿದೆ. ಆ ಕಾನೂನಿನಲ್ಲಿ ಅನೇಕ ಬದಲಾವಣೆಗಳು ಆಗಬೇಕಿತ್ತು. ಆದರೆ ಇದುವರೆಗೆ ಆಗಿಲ್ಲ. ಶ್ರೀಮಂತರಿಗೆ ಅನುಕೂಲ ಮಾಡುವ ಕಾನೂನು ಒಂದೇ ದಿನಗಳಲ್ಲಿ ಅನುಷ್ಟಾನ ಮಾಡಲಾಗುತ್ತದೆ. ಆದರೆ ಬಡವರಿಗೆ ಬೇಕಾದ ಕಾನೂನು ಕಡತದಲ್ಲೇ ಉಳಿಯುತ್ತವೆ ಎಂದು ತಿಳಿಸಿದರು.