‘ಪಡಿತರ ಚೀಟಿ’ ಕೇಂದ್ರದ ಮಾನದಂಡ ಎಂದು ರಾಜ್ಯ ಸರಕಾರ ಭಿನ್ನ ರಾಗ ಹಾಡುತ್ತಿದೆ: ಎಚ್.ಡಿ.ಕುಮಾರಸ್ವಾಮಿ
ಬೆಂಗಳೂರು : ‘ಕೇಂದ್ರ ಸರಕಾರ ಮಾನದಂಡದ ಪಡಿತರ ಚೀಟಿ ರದ್ದುಪಡಿಸಲಾಗುತ್ತಿದೆ ಎಂದು ರಾಜ್ಯ ಸರಕಾರ ಹೇಳುತ್ತಿದೆ. ಆದರೆ, ಇಷ್ಟು ದಿನ ಏಕೆ ಇದನ್ನು ಹೇಳಲಿಲ್ಲ’ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.
ಗುರುವಾರ ಈ ಸಂಬಂಧ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಕೇಂದ್ರದ ಮಾನದಂಡ ಎಂದು ವರದಿ ಬಂದ ಮೇಲೆ ಸರಕಾರ ಭಿನ್ನರಾಗ ಹಾಡುತ್ತಿದೆ. ಆದರೆ, ಮೊದಲೇ ಇದನ್ನು ಏಕೆ ಹೇಳಲಿಲ್ಲ? ಆಗೆಲ್ಲಾ ಹೇಳಿದ್ದು ಏನು ಹಾಗಾದರೆ?. ಬಿಪಿಎಲ್ ಕಾರ್ಡು ವಿಚಾರದಲ್ಲಿ ರಾಜ್ಯ ಸರಕಾರ ಗೊಂದಲ ಉಂಟು ಮಾಡುತ್ತಿದೆ. ಅದಕ್ಕೆ ಜನತೆಗೆ ಉತ್ತರ ಕೊಡಲು ಸಾಧ್ಯ ಆಗುತ್ತಿಲ್ಲ ಎಂದು ಹೇಳಿದರು.
ಸಿಎಂ ಒಂದು ಹೇಳಿಕೆ ಕೊಡುತ್ತಾರೆ. ಸಚಿವರೇ ಇನ್ನೊಂದು ಹೇಳಿಕೆ ಕೊಡುತ್ತಾರೆ. ಇವರಲ್ಲೇ ಇವರಿಗೆ ಸ್ಪಷ್ಟತೆ ಇಲ್ಲ. ಗ್ಯಾರಂಟಿ ಯೋಜನೆಗಳ ಬಗ್ಗೆ ನಾನು ಲಘುವಾಗಿ ಮಾತಾಡಿಲ್ಲ. ಗ್ಯಾರಂಟಿ ಯೋಜನೆ ನೀಡಲು ಆರ್ಥಿಕವಾಗಿ ಸಮಸ್ಯೆ ಇಲ್ಲ ಎಂದು ಹೇಳಿದ್ದೇನೆ. ನಿರಂತರವಾಗಿ ತೆರಿಗೆ ಹೆಚ್ಚಳ ಮಾಡಿಕೊಂಡು ಖಜಾನೆ ತುಂಬಿಸಿಕೊಂಡಿದ್ದಾರೆ. ಆ ದುಡ್ಡು ಎಲ್ಲಿ ಹೋಗುತ್ತಿದೆ ಎಂದಷ್ಟೇ ಕೇಳಿದ್ದೇನೆ. ಹಣಕಾಸು ನಿರ್ವಹಣೆಯಲ್ಲಿ ಸಮಸ್ಯೆಯಿದೆ. ಅದನ್ನು ಸರಿಪಡಿಸಿಕೊಳ್ಳಿ ಎಂದು ಹೇಳಿದ್ದೇನೆ ಎಂದು ಕುಮಾರಸ್ವಾಮಿ ಹೇಳಿದರು.
ಎನ್‍ಡಿಎ ಅಭ್ಯರ್ಥಿ ಗೆಲುವು: ಚನ್ನಪಟ್ಟಣ ಕ್ಷೇತ್ರದ ಉಪಚುನಾವಣೆಯಲ್ಲಿ ಎನ್‍ಡಿಎ ಅಭ್ಯರ್ಥಿ ಗೆಲ್ಲುತ್ತಾರೆ. ನಾನೇ ಆ ಕ್ಷೇತ್ರದಲ್ಲಿ 15 ದಿನ ಪ್ರಚಾರದಲ್ಲಿ ಭಾಗವಹಿಸಿದ್ದೇನೆ. ಜನರ ಭಾವನೆ ಎನು ಎಂದು ಗೊತ್ತಿದೆ. ಗೆಲುವಿನಲ್ಲಿ ಯಾವುದೇ ಅನುಮಾನ ಇಲ್ಲ. ಎನ್‍ಡಿಎ ಅಭ್ಯರ್ಥಿ ಗೆದ್ದೇ ಗೆಲ್ಲುತ್ತಾರೆ. ಹಾಗೆಯೇ ಮಹಾರಾಷ್ಟ್ರ ಹಾಗೂ ಜಾಖರ್ಂಡ್ ರಾಜ್ಯಗಳಲ್ಲಿಯೂ ಬಿಜೆಪಿ ಅಧಿಕಾರಕ್ಕೆ ಬರಲಿದೆ’
-ಎಚ್.ಡಿ.ಕುಮಾರಸ್ವಾಮಿ ಕೇಂದ್ರ ಸಚಿವ