ಬೆಂಗಳೂರು | ಸರಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ದರ ಹೆಚ್ಚಳ ವಿರೋಧಿಸಿ ಪ್ರತಿಭಟನೆ

Update: 2024-11-21 16:33 GMT

ಬೆಂಗಳೂರು : ಸರಕಾರಿ ಆಸ್ಪತ್ರೆಗಳಲ್ಲಿ ರೋಗಿಗಳ ದಾಖಲಾತಿ ಮತ್ತು ಚಿಕಿತ್ಸೆ ದರ ಶೇ.20ರಷ್ಟು ಹೆಚ್ಚಿಸಿರುವುದನ್ನು ವಿರೋಧಿಸಿ, ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ನಗರದ ವಿಕ್ಟೋರಿಯಾ ಆಸ್ಪತ್ರೆ ಎದುರು ಪ್ರತಿಭಟನೆ ನಡೆಸಿದ್ದಾರೆ.

ಈ ವೇಳೆ ಮಾತನಾಡಿದ ಅವರು, ರಾಜ್ಯದ ಎಲ್ಲ ಸರಕಾರಿ ಆಸ್ಪತ್ರೆಗಳು ದರವನ್ನು ಹೆಚ್ಚು ಮಾಡಿದ್ದು, ಸರಕಾರಿ ಆಸ್ಪತ್ರೆಯನ್ನು ನಂಬಿರುವ ಬಡವರಿಗೆ ಭಾರಿ ತೊಂದರೆ ಉಂಟಾಗಿದೆ. ಸರಕಾರಿ ಆಸ್ಪತ್ರೆಗಳಲ್ಲಿ ಔಷಧಿಗಳ ಕೊರತೆ, ವೆಂಟಿಲೇಟರ್ಗಳ ಕೊರತೆ, ಡಯಾಲಿಸಿಸ್ ಯಂತ್ರಗಳ ಕೊರತೆ, ತುರ್ತು ನಿಗಾ ಘಟಕ (ಐಸಿಯು) ಕೊರತೆ ಇದೆ ಎಂದು ಹೇಳಿದರು.

ಸರಕಾರಿ ಆಸ್ಪತ್ರೆಗಳಲ್ಲಿ ಹಾಸಿಗೆಗಳಿಲ್ಲ, ದಿಂಬುಗಳಿಲ್ಲ. ಮಕ್ಕಳ ಆಸ್ಪತ್ರೆ ಅಧೋಗತಿಗೆ ಬಂದಿವೆ. ಮಹಿಳೆಯರ ಆಸ್ಪತ್ರೆ ಕಣ್ಣೀರಿನ ಕಥೆಯಾಗಿದೆ. ಕಣ್ಣಾಸ್ಪತ್ರೆಗೆ ದೃಷ್ಟಿಯೇ ಇಲ್ಲ. ಆಪರೇಷನ್ ಥಿಯೇಟರ್ಗೆ ಲೈಟ್ ಕೊರತೆ. ಔಷಧಿಗಳನ್ನು ತರಲು ಹೊರಗಡೆ ಚೀಟಿಯನ್ನು ಬರೆದುಕೊಡುತ್ತಾರೆ. ಶೌಚಾಲಯಗಳಂತೂ ಕೆಟ್ಟು ನಾರುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸರಕಾರಿ ಆಸ್ಪತ್ರೆಗಳನ್ನು ಸುಸಜ್ಜಿತಗೊಳಿಸಬೇಕು. ಸರಕಾರಿ ಆಸ್ಪತ್ರೆಯ ಉಗ್ರಾಣ, ಅಡಿಗೆ ಕೊಠಡಿಗಳಲ್ಲಿ ಇಲಿ, ಹೆಗ್ಗಣ, ಜಿರಳೆಗಳ ಸ್ಥಳವಾಗಿದೆ. ಆಸ್ಪತ್ರೆಗಳಲ್ಲಿ ಪರಿಣಿತರ ವೈದ್ಯರ ಕೊರತೆ ಇದೆ. ಸರಕಾರಿ ಆಸ್ಪತ್ರೆಗಳ ವೈದ್ಯರುಗಳು ಖಾಸಗಿ ಆಸ್ಪತ್ರೆಗೆ ಹೋಗಬಾರದು. ಈ ರೀತಿಯ ಎಲ್ಲ ಅವ್ಯವಸ್ಥೆ ಇರುವ ಸರಕಾರಿ ಆಸ್ಪತ್ರೆಗಳಲ್ಲಿ ಶುಲ್ಕ ಹೆಚ್ಚಿಗೆ ಮಾಡಿರುವುದು ಸರಿಯೇ ಎಂದು ಪ್ರಶ್ನಿಸಿದರು.

ಪ್ರತಿಭಟನೆಯಲ್ಲಿ ಕನ್ನಡ ಚಳವಳಿ ಪಕ್ಷದ ಕಾರ್ಯಕರ್ತರಾದ ಗಿರೀಶ್ ಗೌಡ, ಪಾರ್ಥಸಾರಥಿ, ನಾರಾಯಣ ಸ್ವಾಮಿ, ಮಾದೇವಪ್ಪ, ಮುಬಾರಕ್ ಪಾಷಾ, ಮುನ್ನವರ್, ಕಹಳೆ ಗೋವಿಂದು, ಮಣಿಕಂಠ, ವಿಜಯಲಕ್ಷ್ಮಿ, ಅಂಬುಜಾಕ್ಷಿ ಮತ್ತಿತರರು ಉಪಸ್ಥಿತರಿದ್ದರು.

Full View

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News