ನ.23ಕ್ಕೆ ಮುಸ್ಲಿಮ್ ವೈಯಕ್ತಿಕ ಕಾನೂನು ಮಂಡಳಿ ಅಧಿವೇಶನ : ಮೌಲಾನಾ ಮುಹಮ್ಮದ್ ಫಝ್ಲುರ್ರಹೀಂ ಮುಜದ್ದಿದಿ
ಬೆಂಗಳೂರು : ಅಖಿಲ ಭಾರತ ಮುಸ್ಲಿಮ್ ವೈಯಕ್ತಿಕ ಕಾನೂನು ಮಂಡಳಿ (ಎಐಎಂಪಿಎಲ್‍ಬಿ)ಯು ನ.23 ಮತ್ತು 24ರಂದು ಬೆಂಗಳೂರಿನಲ್ಲಿ ತನ್ನ 29ನೆ ವಾರ್ಷಿಕ ಸಾಮಾನ್ಯ ಅಧಿವೇಶನವನ್ನು ಆಯೋಜಿಸಿದೆ ಎಂದು ಮಂಡಳಿಯ ಪ್ರಧಾನ ಕಾರ್ಯದರ್ಶಿ ಮೌಲಾನಾ ಮುಹಮ್ಮದ್ ಫಝ್ಲುರ್ರಹೀಂ ಮುಜದ್ದಿದಿ ತಿಳಿಸಿದ್ದಾರೆ.
ಗುರುವಾರ ನಗರದ ಪ್ರೆಸ್‍ಕ್ಲಬ್‍ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನ.23 ರಂದು ದಾರುಲ್ ಉಲೂಮ್ ಸಬೀಲುರ್ರಶಾದ್ ಕ್ಯಾಂಪಸ್‍ನಲ್ಲಿ ಬೆಳಗ್ಗೆ ಮಂಡಳಿ ಸದಸ್ಯರ ಸಭೆ ನಡೆಯಲಿದೆ. ಇಲ್ಲಿ ಕೇಂದ್ರ ಸರಕಾರ ಜಾರಿಗೊಳಿಸಲು ಮುಂದಾಗಿರುವ ವಕ್ಫ್ ತಿದ್ದುಪಡಿ ಮಸೂದೆ ಸೇರಿದಂತೆ ಹಲವು ಸಮಸ್ಯೆಗಳ ಕುರಿತು ಚರ್ಚೆ ನಡೆಯಲಿದೆ ಎಂದು ಮಾಹಿತಿ ನೀಡಿದರು.
24ರ ಸಂಜೆ ಮಿಲ್ಲರ್ಸ್ ರಸ್ತೆಯಲ್ಲಿರುವ ಖುದ್ದೂಸ್ ಸಾಹೇಬ್ ಈದ್ಗಾ ಮೈದಾನದಲ್ಲಿ ‘ಶರಿಯಾ ಮತ್ತು ಔಕಫ್’ ರಕ್ಷಣೆ ಹೆಸರಿನಲ್ಲಿ ಬೃಹತ್ ಸಾರ್ವಜನಿಕ ಸಭೆ ನಡೆಯಲಿದೆ. ಸಮಾವೇಶಕ್ಕೆ ರಾಜ್ಯದ ವಿವಿಧೆಡೆಯಿಂದ ಸಾವಿರಾರು ಸಂಖ್ಯೆಯಲ್ಲಿ ಜನರು ಭಾಗವಹಿಸಲಿದ್ದಾರೆ ಎಂದು ಅವರು ತಿಳಿಸಿದರು.
ಕೇಂದ್ರ ಸರಕಾರ ಶರಿಯಾ ಮತ್ತು ಇಸ್ಲಾಮಿಕ್ ಆಚರಣೆಗೆ ವಿರುದ್ಧವಾಗಿ ಉದ್ದೇಶಿತ ವಕ್ಫ್ ಮಸೂದೆಯಲ್ಲಿ 42 ತಿದ್ದುಪಡಿಗಳನ್ನು ತರಲು ಮುಂದಾಗಿದೆ. ಮುಸ್ಲಿಮ್ ವೈಯಕ್ತಿಕ ಕಾನೂನು ಮಂಡಳಿ, ಮುಸ್ಲಿಮ್ ಸಂಘಟನೆಗಳು, ಮುಖಂಡರ ನಡುವೆ ಯಾವುದೇ ಚರ್ಚೆ ನಡೆಸದೆ, ಅಭಿಪ್ರಾಯವನ್ನೂ ಸಂಗ್ರಹಿಸದೆ ವಕ್ಫ್ ಕಾಯ್ದೆಗೆ ತಿದ್ದುಪಡಿ ತರಲು ಮುಂದಾಗಿರುವುದು ಸರಿಯಲ್ಲ. ಇವುಗಳನ್ನು ತಿರಸ್ಕರಿಸುವ ನಿಟ್ಟಿನಲ್ಲಿ ಮಂಡಳಿಯ ಸಭೆಯಲ್ಲಿ ಚರ್ಚಿಸಿ ನಿರ್ಣಯ ಕೈಗೊಳ್ಳಲಾಗುವುದು ಎಂದು ಮುಹಮ್ಮದ್ ಫಝ್ಲುರ್ರಹೀಂ ಮುಜದ್ದಿದಿ ಹೇಳಿದರು.
ವಕ್ಫ್ ಕಾನೂನು ತಿದ್ದುಪಡಿ ಹೆಸರಿನಲ್ಲಿ ಸರಕಾರದ ಧಾರ್ಮಿಕ ಹಸ್ತಕ್ಷೇಪ ಸರಿಯಲ್ಲ. ಇದು ಸಂವಿಧಾನ ಬದ್ಧ ಧಾರ್ಮಿಕ ಹಕ್ಕುಗಳನ್ನು ಕಸಿಯುವ ಯತ್ನವಾಗಿದೆ. ಮಸೂದೆಗಳಿಗೆ ವಿರೋಧ ವ್ಯಕ್ತಪಡಿಸುವಂತೆ ಒತ್ತಾಯಿಸಿ ಹಲವು ರಾಜಕೀಯ ಮುಖಂಡರನ್ನು ಭೇಟಿಯಾಗಿ ಮನವಿ ಮಾಡಿಕೊಳ್ಳಲಾಗಿದೆ ಎಂದು ಅವರು ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಮಂಡಳಿ ಸದಸ್ಯ ಆಸಿಮ್ ಸೇಠ್ ಅಫ್ರೋಝ್, ಸಹ ಸಂಚಾಲಕರಾದ ಡಾ.ಮಕ್ಸೂದ್ ಇಮ್ರಾನ್ ರಶಾದಿ, ಮುಫ್ತಿ ಇಫ್ತಿಖಾರ್ ಅಹ್ಮದ್ ಖಾಸ್ಮಿ, ಸುಲೇಮಾನ್ ಖಾನ್, ಕೋರ್ ಕಮಿಟಿ ಸದಸ್ಯರಾದ ಫೈಝ್ ಶರೀಫ್, ಸೈಯ್ಯದ್ ಸೈಫುಲ್ಲಾ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.