ಈಶಾನ್ಯ ರಾಜ್ಯದಲ್ಲಿ ಉಂಟಾದ ಪರಿಸ್ಥಿತಿ ದಕ್ಷಿಣ ಭಾರತದಲ್ಲಿಯೂ ನಿರ್ಮಾಣ: ಪುರುಷೋತ್ತಮ ಬಿಳಿಮಲೆ

Update: 2024-02-25 16:33 GMT

ಪುರುಷೋತ್ತಮ ಬಿಳಿಮಲೆ

ಬೆಂಗಳೂರು : ನಮಗೆ ಸರಕಾರ ರಚಿಸಲು ಬೇಕಾದ ಶಕ್ತಿ ಹಿಂದಿ ಬೆಲ್ಟ್‍ನಲ್ಲಿದೆ ಎಂದು ದಕ್ಷಿಣ ಭಾರತವನ್ನು ಕಡೆಗಣಿಸಿದರೆ, ಇಂದು ಈಶಾನ್ಯ ರಾಜ್ಯದಲ್ಲಿ ಉಂಟಾದ ಪರಿಸ್ಥಿತಿ ದಕ್ಷಿಣ ಭಾರತದಲ್ಲಿಯೂ ನಿರ್ಮಾಣವಾಗಲಿದೆ ಎಂದು ಚಿಂತಕ ಪುರುಷೋತ್ತಮ ಬಿಳಿಮಲೆ ಎಚ್ಚರಿಕೆ ನೀಡಿದ್ದಾರೆ.

ರವಿವಾರ ಇಲ್ಲಿನ ಅರಮನೆ ಮೈದಾನದಲ್ಲಿ ಸಮಾಜ ಕಲ್ಯಾಣ ಇಲಾಖೆಯು ಆಯೋಜಿಸಿದ್ದ ‘ಸಂವಿಧಾನ ಮತ್ತು ರಾಷ್ಟ್ರೀಯ ಏಕತಾ ಸಮಾವೇಶ, ಭಾರತದ ಸಂವಿಧಾನ ರಚನೆಯ ಅಮೃತಮಹೋತ್ಸವ’ ಸಮಾರಂಭದ ‘ಕರ್ನಾಟಕದಲ್ಲಿನ ಅಭಿವೃದ್ಧಿ ಮಾದರಿಗಳು’ ವಿಚಾರಗೋಷ್ಠಿಯಲ್ಲಿ ಅವರು ಮಾತನಾಡಿದರು.

2027-28ರಲ್ಲಿ ಕ್ಷೇತ್ರ ಪುನಾರ್ ವಿಂಗಡನೆ ಮಾಡಿದರೆ, ಕರ್ನಾಟಕ ರಾಜ್ಯದ ಲೋಕಸಭಾ ಸದಸ್ಯತ್ವವು 28ರಿಂದ 38ಕ್ಕೆ ತಲುಪಲಿದೆ. ತಮಿಳಿನಾಡಿನದ್ದು 39 ರಿಂದ 43ಕ್ಕೆ ತಲುಪಿದರೆ, ಕೇರಳದ ಸದಸ್ಯತ್ವ 20ರಿಂದ 19ಕ್ಕೆ ಕುಸಿಯಲಿದೆ. ಉತ್ತರ ಪ್ರದೇಶ ಮತ್ತು ಬಿಹಾರದ ಲೋಕಸಭಾ ಸದಸ್ಯತ್ವ ಏರಿಕೆಯಾಗಲಿದ್ದು, ಈ ಎರಡು ರಾಜ್ಯಗಳ ಲೋಕಸಭಾ ಕ್ಷೇತ್ರಗಳು ಇಡೀ ದಕ್ಷಿಣ ಭಾರತ ಲೋಕಸಭಾ ಕ್ಷೇತ್ರಗಳನ್ನು ಪ್ರತಿನಿಧಿಸಲಿವೆ ಎಂದರು.

ಒಂದು ಕ್ಷೇತ್ರದಿಂದ ಉದಾಹರಣೆ ಲಕ್ಷದ್ವೀಪದಿಂದ ಒಬ್ಬ ಎಂಪಿಯಾಗಿ ಬಂದವನಿಗೆ ಉತ್ತರ ಪ್ರದೇಶದ 143 ಎಂಪಿಗಳಿಗೆ ನೀಡುವ ಗೌರವವನ್ನೇ ನೀಡಬೇಕು ಎನ್ನುವುದೇ ಒಕ್ಕೂಟ ವ್ಯವಸ್ಥೆಯ ಆಶಯವಾಗಿದೆ ಎಂದ ಅವರು, ಸಂವಿಧಾನವನ್ನು ಬದಲಿಸುತ್ತೇವೆ ಎಂದು ಘೋಷಿಸುವ ಜನರು ನಮ್ಮ ನಡುವೆ ಇದ್ದಾರೆ ಎಂದು ಎಚ್ಚರಿಕೆ ನೀಡಿದರು.

ವಚನಕಾರರು ಬರುವವರೆಗೂ ನಮ್ಮ ದೇವರುಗಳಿಗೆ ಸಂಸ್ಕೃತ ಮಾತ್ರ ಅರ್ಥವಾಗುತ್ತಿತ್ತು. ವಚನಕಾರರು ಕನ್ನಡವನ್ನು ದೇವರಿಗೆ ತಿಳಿಸಿದರು. ನಮ್ಮ ದೇಶದ ಸಂಸ್ಕೃತಿಯನ್ನು ಭಾಷೆಯಲ್ಲಿ ಮರುಸೃಷ್ಟಿಸಿ ಭಾರತವನ್ನು ಶ್ರೀಮಂತಗೊಳಿಸುವ ಕೆಲಸ ವಚಮಕಾರರು ಮಾಡಿದ್ದಾರೆ ಎಂದು ಅವರು ನೆನಪಿಸಿಕೊಂಡರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News