ಗೂಂಡಾ ಕಾಯ್ದೆ ಮಾದರಿಯಲ್ಲಿ ಡ್ರಗ್ಸ್ ಪೆಡ್ಲರ್ ಗಳ ಮೇಲೆ ಕ್ರಮ : ಪೊಲೀಸ್ ಆಯುಕ್ತ ಬಿ.ದಯಾನಂದ್
ಬೆಂಗಳೂರು: ಗೂಂಡಾ ಕಾಯ್ದೆ ಮಾದರಿಯಲ್ಲೇ ಡ್ರಗ್ಸ್ ಪೆಡ್ಲರ್ ಗಳ ಮೇಲೆಯೂ ಪ್ರಿವೇಂಟಿವ್ ಡೆಟೆನ್ಷನ್ ಆಕ್ಟ್ ಹಾಕುವ ಅವಕಾಶ ಕಾನೂನಿನಲ್ಲಿದ್ದು, ಅದನ್ನು ಮುಂದಿನ ದಿನಗಳಲ್ಲಿ ಜಾರಿಗೊಳಿಸಲಾಗುವುದು ಎಂದು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ತಿಳಿಸಿದ್ದಾರೆ.
ಶನಿವಾರ ನಗರದ ದೊಡ್ಡಕಲ್ಲಸಂದ್ರದ ಶಂಕರ್ ಫೌಂಡೇಷನ್‍ನಲ್ಲಿ ಹಮ್ಮಿಕೊಂಡಿದ್ದ ಮಾಸಿಕ ಜನಸಂಪರ್ಕ ಸಭೆಯಲ್ಲಿ ಮಾತನಾಡಿದ ಅವರು, ಮಾದಕ ವಸ್ತುಗಳ ಬಳಕೆ ತಡೆಯಲು ಪೆಡ್ಲರ್ ಗಳ ಮೇಲೆ ಪ್ರಿವೆಂಟಿವ್ ಡಿಟೆನ್ಷನ್ ಆಕ್ಟ್ ಮೂಲಕ ಬಂಧಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.
ವಿದೇಶಿ ಸಂಸ್ಕೃತಿಯ ಪ್ರಭಾವಕ್ಕೆ ಒಳಗಾಗಿ ಇತ್ತೀಚಿನ ಯುವಪೀಳಿಗೆ ವೇಗವಾಗಿ ಮಾದಕ ವಸ್ತುಗಳಿಗೆ ಆಕರ್ಷಣೆಯಾಗುತ್ತಿದೆ. ದುರದೃಷ್ಟಕರ ಎಂದರೆ ಕೆಲವು ವಿದೇಶಗಳಲ್ಲಿ ಕೆಲ ಮಾದಕ ವಸ್ತುಗಳ ಬಳಕೆಗೆ ಅನುವು ಮಾಡಿಕೊಡಲಾಗಿದೆ. ಇದರಿಂದ ಪ್ರಭಾವಿತರಾಗಿ ಯುವಕರು ಫ್ಯಾಶನ್ ರೀತಿ ಇದನ್ನು ಬಳಕೆ ಮಾಡುತ್ತಿದ್ದಾರೆ ಎಂದು ಅವರು ಹೇಳಿದರು.
ಪೊಲೀಸ್ ಇಲಾಖೆಯು ಈ ಕಾಯ್ದೆಯ ಬಗ್ಗೆ ಸಾಕಷ್ಟು ಜಾಗೃತಿ ಮೂಡಿಸುತ್ತಿದೆ. ಡ್ರಗ್ಸ್ ಪೆಡ್ಲರ್ ಗಳ ಮೇಲೆ ಹೆಚ್ಚೆಚ್ಚು ಪ್ರಕರಣಗಳನ್ನು ದಾಖಲಿಸುತ್ತಿದ್ದು, ಸಾಕಷ್ಟು ಸಂಖ್ಯೆಯ ಮಾದಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.
ಕೇವಲ ಗಾಂಜಾ, ಡ್ರಗ್ಸ್ ಮಾತ್ರವಲ್ಲದೆ ಸಿಂಥೆಟಿಕ್ ಡ್ರಗ್ ಗಳಾದ ಕೊಕೇನ್, ಹೆರಾಯಿನ್, ಎಂಬಿಎಂಎನಂತಹ ಅತ್ಯಾಧುನಿಕ ಡ್ರಗ್ಸ್ ಗಳನ್ನು ಸಹ ಅಪಾರ ಪ್ರಮಾಣದಲ್ಲಿ ವಶಪಡಿಸಿಕೊಳ್ಳಲಾಗಿದೆ. ಮಾದಕ ವಸ್ತುಗಳ ಸೇವನೆಯಿಂದ ಬೇಡಿಕೆ ಹೆಚ್ಚಾಗಿರುವುದರಿಂದ ನಗರದಲ್ಲಿ ಹೆಚ್ಚು ಮಾರಾಟ ಜಾಲ ಹಬ್ಬಿದೆ. ಇದು ಕೇವಲ ಪೊಲೀಸ್ ಇಲಾಖೆಯಿಂದ ತಡೆಯಲು ಸಾಧ್ಯವಿಲ್ಲ. ಯುವ ಪೀಳಿಗೆಯಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನು ಸಮಾಜ ಮಾಡಬೇಕು ಎಂದು ಬಿ.ದಯಾನಂದ್ ಹೇಳಿದರು.
ಟ್ರಾಫಿಕ್ ಜಂಕ್ಷನ್‍ಗಳಲ್ಲಿ ಸಿಸಿ ಕ್ಯಾಮೆರಾಗಳ ಜೊತೆ ಲೌಡ್ ಸ್ಪೀಕರ್ ನಂತಹ ಡಿವೈಸ್‍ಗಳನ್ನು ಅಳವಡಿಸಲಾಗಿದ್ದು, ಸಂಚಾರಿ ನಿಯಮ ಉಲ್ಲಂಘನೆ ಮತ್ತು ದಟ್ಟಣೆ ನಿರ್ವಹಣೆಗೆ ಠಾಣೆಯಿಂದಲೇ ಮಾತನಾಡುವ ಮೂಲಕ ತಕ್ಷಣ ಸಮಸ್ಯೆ ಬಗೆಹರಿಯುವಂತೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಬಿ.ದಯಾನಂದ್ ತಿಳಿಸಿದರು.