ಮಹಾಪ್ರಭುವಿಗೆ ಸೋಲು ಕಂಡಿದೆ, ಬಟ್ಟೆಯೊಳಗೆಯೇ ಬೆವರು ಬಂದಿದೆ : ನಟ ಪ್ರಕಾಶ್ ರಾಜ್

Update: 2024-04-23 15:29 GMT

ಬೆಂಗಳೂರು : ಮಹಾಪ್ರಭುವಿಗೆ ಸೋಲು ಕಾಣುತ್ತಿದೆ.ಹೀಗಾಗಿಯೇ, ಕೀಳು ಮಟ್ಟದ ಭಾಷೆಗೆ ಇಳಿದಿದೆ. ಜತೆಗೆ, ಬದಲಾವಣೆಯ ಗಾಳಿ ಕಂಡು ಬಟ್ಟೆಯೊಳಗೆಯೇ ಬೆವರು ಬಂದಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೆಸರು ಉಲ್ಲೇಖ ಮಾಡದೆ ಬಹುಭಾಷಾ ನಟ, ಚಿಂತಕ ಪ್ರಕಾಶ್ ರಾಜ್ ಟೀಕಿಸಿದ್ದಾರೆ.

ಮಂಗಳವಾರ ನಗರದ ಖಾಸಗಿ ಹೋಟೆಲ್‍ನಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಮಹಾಪ್ರಭುವಿಗೆ ಸೋಲು ಕಾಣುತ್ತಿದೆ. ಬದಲಾವಣೆಯ ಗಾಳಿ ಬೀಸುತ್ತಿದೆ.ಹೀಗಾಗಿ, ಮಹಾಪ್ರಭುಗಳು ಬಟ್ಟೆಯೊಳಗೆ ಬೆವರುತ್ತಿದ್ದು, ಕೀಳು ಮಟ್ಟಕ್ಕೆ ಇಳಿದು ಪ್ರಧಾನಿ ಮಾತನಾಡುತ್ತಿದ್ದಾರೆ. ಜತೆಗೆ, ಕಾಗಕ್ಕ ಗುಬ್ಬಕ್ಕನ ಕತೆ ಹೇಳಲು ಆರಂಭಿಸಿದ್ದಾರೆ ಎಂದು ಹೇಳಿದರು.

ಮೊದಲ ಸುತ್ತಿನ ಮತದಾನೋತ್ತರ ಸಮೀಕ್ಷೆಯಲ್ಲಿಯೇ ತಮ್ಮ ಬೇಳೆ ಕಾಳು ಬೇಯುತ್ತಿಲ್ಲ ಎನ್ನುವ ಅಂಶ ಮಹಾಪ್ರಭುಗಳಿಗೆ ಗೊತ್ತಾಗಿದೆ. ಹೀಗಾಗಿ ಇಂತಹ ಹೇಳಿಕೆಗಳನ್ನು ನೀಡಿದ್ದಾರೆ. ದೆವ್ವ ಬರುತ್ತೆ, ದೆವ್ವ ಬರುತ್ತೆ ಅಂತ ಹೆದರಿಸುತ್ತಿದ್ದಾರೆ. ಅದು ಅಲ್ಲದೆ, ದಿನನಿತ್ಯ ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದರೂ ಚುನಾವಣಾ ಆಯೋಗ ಗಮನಿಸುತ್ತಿಲ್ಲ. ಅದಕ್ಕೆ ಬಾಯಿಲ್ಲವೇ? ಎಂದು ಅವರು ಖಾರವಾಗಿ ಪ್ರಶ್ನಿಸಿದರು.

ಇನ್ನೂ, ಮಹಾಪ್ರಭುವಿಗೆ ರಾಜ್ಯದ ಪ್ರತಿನಿಧಿಗಳು ಅಗತ್ಯವಿಲ್ಲ. ಅವರಿಗೆ ಕೇವಲ ಹೊಗಳು ಭಟ್ಟ ವಿದೂಷಕರು ಬೇಕಾಗಿದ್ದಾರೆ ಎಂದ ಅವರು, ನಾಡಿನಲ್ಲಿ ಕೋತಿಗಳ ಕಾಟ ಜಾಸ್ತಿಯಾಗಿದೆ, ಹಾಗಾಗಿ ಕಾಡುಗಳಲ್ಲಿ ಹಣ್ಣು ಬೆಳೆಸಬೇಕು ಎನ್ನುವ ನಟಿ ಹೇಮಾಮಾಲಿನಿ ಮಹಾಪ್ರಭು ಆಯ್ಕೆ ಮಾಡಿರುವ ಅಭ್ಯರ್ಥಿ ಎಂದು ವ್ಯಂಗ್ಯವಾಡಿದರು.

ಮಹಾಪ್ರಭುವಿನ ಗ್ಯಾರಂಟಿಗೆ ವಾರಂಟಿ ಇದೆಯಾ?, ಈ ಹಿಂದೆ ನೂರು ಸ್ಮಾರ್ಟ್ ಸಿಟಿ ಕಟ್ಟುತ್ತೇವೆ ಎಂದಿದ್ದರು.ಆದರೆ, ಹತ್ತು ಸ್ಮಾರ್ಟ್ ಸಿಟಿಗಳನ್ನಾದರೂ ತೋರಿಸಲಿ. ಪ್ರತಿ ಕ್ಷೇತ್ರದಲ್ಲಿ ಒಂದು ಮಾದರಿ ಗ್ರಾಮ ಮಾಡುತ್ತೇವೆ ಎಂದರು. ಒಂದೇ ಒಂದು ಉದಾಹರಣೆ ಕಾಣಬಹುದೇ. 2 ಕೋಟಿ ಉದ್ಯೋಗ ಸೃಷ್ಟಿ ಮಾಡುತ್ತೇವೆ ಎಂದರು. ವಾಸ್ತವದಲ್ಲಿ ಹತ್ತು ಸಾವಿರ ಉದ್ಯೋಗಕ್ಕೆ ಐವತ್ತು ಲಕ್ಷ ಯುವಕರು ಅರ್ಜಿ ಹಾಕಿದ್ದಾರೆ ಎಂದು ಪ್ರಕಾಶ್ ರಾಜ್ ಬೇಸರ ವ್ಯಕ್ತಪಡಿಸಿದರು.

ಬರ ಪರಿಹಾರದ ಬಗ್ಗೆ ನಮ್ಮ ಸಂಸದರು ದನಿ ಎತ್ತಲಿಲ್ಲ. ಸಂಸದ ತೇಜಸ್ವಿ ಸೂರ್ಯ ಕೋವಿಡ್ ಕಾಲದಲ್ಲಿ ಮುಸ್ಲಿಮರ ಹೆಸರು ಹಿಡಿದುಕೊಂಡು ತಿರುಗುತ್ತಿದ್ದ ಮನುಷ್ಯ. ಈಗ ರಾಘವೇಂದ್ರ ಬ್ಯಾಂಕ್ ಹಗರಣದಲ್ಲಿ ಸಿಕ್ಕಿ ಬಿದ್ದಿದ್ದಾನೆ. ಹೀಗಾಗಿಯೇ, ಭಾರತದ ಇತಿಹಾಸದಲ್ಲೇ ಮೊದಲ ಬಾರಿಗೆ ಬರ ಪರಿಹಾರಕ್ಕಾಗಿ ರಾಜ್ಯ ಸರಕಾರವೊಂದು ಸುಪ್ರೀಂಕೋರ್ಟ್ ಮೆಟ್ಟಿಲೇರಬೇಕಾಯಿತು. ಮತ್ತೊಂದೆಡೆ, ಕರ್ನಾಟಕಕ್ಕೆ ಚೊಂಬು ಕೊಟ್ಟರೂ ಅದನ್ನು ದೇವೇಗೌಡರು ಅಕ್ಷಯ ಪಾತ್ರೆ ಎನ್ನುತ್ತಿದ್ದಾರೆ. ಇವರಿಗೆ ಚುನಾವಣೆಯಲ್ಲಿ ಚೊಂಬು ಕೊಟ್ಟು ಕಳುಹಿಸಿ ಎಂದು ನುಡಿದರು.

ಈಗಾಗಲೇ ಕಾಂಗ್ರೆಸ್ ಪಕ್ಷವೂ ತನ್ನ ಪ್ರಾಣಾಳಿಕೆ ಬಿಡುಗಡೆ ಮಾಡಿದೆ. ಇದಕ್ಕೆ ಪ್ರಧಾನಿ ನರೇಂದ್ರ ಮೋದಿ, ಮುಸ್ಲಿಮ್ ಲೀಗ್‍ನ ಪ್ರಾಣಾಳಿಕೆ ಎನ್ನುತ್ತಾರೆ. ಆದರೆ, ಅವರದ್ದೇ ಪಕ್ಷದ ಪ್ರಾಣಾಳಿಕೆ ಕುರಿತು ಮಾತನಾಡಪ್ಪ ಎಂದರೆ ಊಟದ ಪಟ್ಟಿ ತೋರಿಸುತ್ತಾರೆ. ಏನು ತಿನ್ನಬೇಕು, ಏನು ತಿನ್ನಬಾರದು ಎಂದು ಮಹಾಪ್ರಭು ಮಾತನಾಡುತ್ತಾರೆ ಎಂದು ಕುಟುಕಿದರು.

ಪತ್ರಿಕಾಗೋಷ್ಠಿಯಲ್ಲಿ ಜನಶಕ್ತಿ ಸಂಘಟನೆಯ ಗೌರಿ ಇದ್ದರು.

ದೋಣಿಗೆ ತೂತು ಬಿದ್ದಿದೆ, ರಕ್ಷಿಸಿಕೊಳ್ಳೋಣ..!

ಬಲ ಪಂಥೀಯರೋ ಎಡ ಪಂಥೀಯರೋ ನಾವೆಲ್ಲ ಒಂದು ದೋಣಿಯಲ್ಲಿ ಹೋಗುತ್ತಿದ್ದೇವೆ. ದೋಣಿಗೆ ತೂತು ಬಿದ್ದಿದೆ. ದೋಣಿಯನ್ನು ರಕ್ಷಿಸಬೇಕಾಗಿರುವುದು ನಮ್ಮ ಜವಾಬ್ದಾರಿ. ಆದರೆ, ಹಿಂದೂ-ಮುಸ್ಲಿಮ್ ಎಂಬುದೇ ಅವರ ಚುನಾವಣಾ ವಿಚಾರವನ್ನು ಮುಕ್ತವಾಗಿ ವಿರೋಧಿಸೋಣ ಎಂದು ಪ್ರಕಾಶ್ ರಾಜ್ ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News