ಎಲ್ಲಾ ಪಕ್ಷಗಳು ಪ್ರಣಾಳಿಕೆಯಲ್ಲಿ ʼಮೇಕೆದಾಟು ಅಣೆಕಟ್ಟುʼ ಅನುಷ್ಠಾನ ವಿಚಾರವನ್ನು ಪ್ರಕಟಿಸಬೇಕು : ಎಚ್.ಡಿ.ದೇವೇಗೌಡ

All the parties should announce the implementation of ``Mekedatu Dam'' in the manifesto: HD Deve Gowda

Update: 2024-03-24 13:43 GMT

ಬೆಂಗಳೂರು: ರಾಜಧಾನಿ ಬೆಂಗಳೂರು ನಗರಕ್ಕೆ ಕುಡಿಯುವ ನೀರು ಪೂರೈಸುವ ಉದ್ದೇಶದ ‘ಮೇಕೆದಾಟು ಯೋಜನೆ’ಯನ್ನು ಅನುಷ್ಠಾನಗೊಳಿಸುವ ಭರವಸೆಯನ್ನು ಜೆಡಿಎಸ್ ಪ್ರಣಾಳಿಕೆಯಲ್ಲಿ ನೀಡಲಾಗುವುದು ಎಂದು ಜೆಡಿಎಸ್ ವರಿಷ್ಠ ಹಾಗೂ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಇಂದಿಲ್ಲಿ ಪ್ರಕಟಿಸಿದ್ದಾರೆ.

ರವಿವಾರ ನಗರದ ಜೆಡಿಎಸ್ ಕಚೇರಿ ಜೆಪಿ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅವರ ತಮ್ಮ ಪಕ್ಷದ ಪ್ರಣಾಳಿಕೆಯಲ್ಲಿ ಮೇಕೆದಾಟು ಅಣೆಕಟ್ಟು ವಿಚಾರವನ್ನು ಪ್ರಕಟಿಸಬೇಕು. ಈ ವಿಚಾರದಲ್ಲಿ ಭಯಪಡುವ ಅಗತ್ಯವಿಲ್ಲ. ಮೂರು ಪಕ್ಷಗಳು ಐಕ್ಯತೆಯಿಂದ ಹೋರಾಟ ಮಾಡಿ ಯೋಜನೆ ಅನುಷ್ಠಾನಗೊಳಿಸಬೇಕಿದೆ ಎಂದು ಕೋರಿದರು.

ಮೇಕೆದಾಟು ಯೋಜನೆಗೆ ಮಂಜೂರಾತಿ ನೀಡುವಂತೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಒತ್ತಾಯಿಸುತ್ತೇನೆ. ಮೇಕೆದಾಟು ಯೋಜನೆ ಕುರಿತ ವಿಸ್ತೃತವಾದ ಪತ್ರವನ್ನು ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಜಲಶಕ್ತಿ ಸಚಿವರಿಗೆ ಬರೆಯುತ್ತೇನೆ ಎಂದು ದೇವೇಗೌಡ ಇದೇ ಸಂದರ್ಭದಲ್ಲಿ ಮಾಹಿತಿ ನೀಡಿದರು. 

ತಮಿಳುನಾಡಿನ ಮುಖ್ಯಮಂತ್ರಿ ಅವರ ತಮ್ಮ ಪಕ್ಷದ ಪ್ರಣಾಳಿಕೆಯಲ್ಲಿ ಯಾವುದೇ ಕಾರಣದಿಂದಲೂ ಮೇಕೆದಾಟು ಯೋಜನೆ ಅನುಷ್ಠಾನಕ್ಕೆ ಬಿಡುವುದಿಲ್ಲ ಎಂದು ಹೇಳಿದ್ದಾರೆ. ಕಾವೇರಿ ನದಿಪಾತ್ರದಲ್ಲಿ ಬೆಂಗಳೂರು ಸೇರಿದಂತೆ 9 ಜಿಲ್ಲೆಗಳು, 22 ತಾಲೂಕುಗಳು ಬರುತ್ತವೆ. ಇವುಗಳ ಕುಡಿಯುವ ನೀರು ಪೂರೈಸಬೇಕಾದ ಅಗತ್ಯವಿದೆ. ಬೆಂಗಳೂರಿನಲ್ಲಿ 5 ತಿಂಗಳಿನಿಂದ ಕುಡಿಯುವ ನೀರಿನ ಸಮಸ್ಯೆ ಭೀಕರವಾಗಿದೆ. ಬಹಳಷ್ಟು ಜನರು ಬೆಂಗಳೂರಿನ ಮನೆಗಳಿಗೆ ಬೀಗ ಹಾಕಿ ಅವರವರ ಮನೆಗಳಿಗೆ ವಲಸೆ ಹೋಗಿದ್ದಾರೆ ಎಂದು ಎಚ್.ಡಿ.ದೇವೇಗೌಡ ತಿಳಿಸಿದರು.

ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರ ಒದಗಿಸಿಲ್ಲ. ಇಂತಹ ಸಂದರ್ಭದಲ್ಲೇ ತಮಿಳುನಾಡು ಮುಖ್ಯಮಂತ್ರಿ ನೀಡಿರುವ ವಿಚಾರ ಕಠೋರವಾಗಿದೆ. ಪರಿಸರವಾದಿಗಳು ಮೇಕೆದಾಟು ಯೋಜನೆ ಅನುಷ್ಠಾನಗೊಂಡರೆ 5 ಸಾವಿರ ಎಕರೆ ಮುಳುಗಡೆಯಾಗಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಈ ಯೋಜನೆಗೆ 5 ಸಾವಿರ ಎಕರೆ ಅರಣ್ಯಪ್ರದೇಶ ಮುಳುಗಡೆಯಾಗುವುದಿಲ್ಲ ಎಂದು ಎಚ್.ಡಿ.ದೇವೇಗೌಡ ಹೇಳಿದರು.

ಎರಡೂ ರಾಜ್ಯಗಳ ಸ್ಥಳೀಯ ವಾಸ್ತವತೆ, ನೀರಿನ ಲಭ್ಯತೆ, ಕುಡಿಯುವ ನೀರು ಹಾಗೂ ಬೆಳೆಗಳಿಗೆ ಬೇಡಿಕೆ ಮೊದಲಾದ ವಾಸ್ತವಿಕತೆಯ ಆಧಾರದ ಮೇಲೆ ಸಂಕಷ್ಟ ಸೂತ್ರವನ್ನು ರೂಪಿಸಲು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಪತ್ರದಲ್ಲಿ ಬರೆದಿರುವುದಾಗಿ ಎಚ್.ಡಿ.ದೇವೇಗೌಡ ತಿಳಿಸಿದರು. 

ಮೇಕೆದಾಟು ಯೋಜನೆ ಕುರಿತಂತೆ ಸಿದ್ದಪಡಿಸಲಾಗಿರುವ ಯೋಜನಾ ವರದಿ ಹಾಗೂ ಕಾವೇರಿ ನೀರು ನಿರ್ವಹಣಾ ಸಮಿತಿಯು, ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರಕ್ಕೆ ತೀರ್ಮಾನ ಕೈಗೊಳ್ಳಲು ವರ್ಗಾಯಿಸಿದೆ. 5 ವರ್ಷ ಕಳೆದರೂ ಇನ್ನು ಯಾವುದೇ ತೀರ್ಮಾನ ಹೊರಬಂದಿಲ್ಲ ಎಂದು ಎಚ್.ಡಿ.ದೇವೇಗೌಡ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷ ಜಿ.ಟಿ.ದೇವೇಗೌಡ, ಪರಿಷತ್ ಸದಸ್ಯರಾದ ಭೋಜೇಗೌಡ, ತಿಪ್ಪೇಸ್ವಾಮಿ, ಮಾಜಿ ಸದಸ್ಯ ರಮೇಶ್‍ಗೌಡ, ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಎ.ಪಿ. ರಂಗನಾಥ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News