ಖಾಸಗಿ ಬ್ಯಾಂಕ್‍ನಿಂದ ಕಿರುಕುಳ ಆರೋಪ: ವಿಧಾನಸೌಧದ ಮುಂದೆ ದಂಪತಿ ಆತ್ಮಹತ್ಯೆಗೆ ಯತ್ನ
ಬೆಂಗಳೂರು: ಖಾಸಗಿ ಬ್ಯಾಂಕ್‍ನಿಂದ ನಿರಂತರ ಕಿರುಕುಳ ನೀಡಲಾಗುತ್ತಿದೆ ಎಂದು ಆರೋಪಿಸಿ ರಾಜ್ಯದ ಆಡಳಿತದ ಶಕ್ತಿಕೇಂದ್ರ ವಿಧಾನಸೌಧದ ಮುಂದೆ ಸೀಮೆ ಎಣ್ಣೆ ಸುರಿದು ದಂಪತಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ವರದಿಯಾಗಿದೆ.
ಜ.10ರ ಬೆಳಗ್ಗೆ 11.45ರ ಸುಮಾರಿಗೆ ವಿಧಾನಸೌಧ ಮೂರನೆ ಗೇಟ್ ಬಳಿ ಈ ಘಟನೆ ನಡೆದಿದ್ದು, ಜೆ.ಜೆ.ನಗರದ ಗೋರಿಪಾಳ್ಯ ನಿವಾಸಿಗಳಾದ ಮುಹಮ್ಮದ್ ಇನಾಯತ್ ಉಲ್ಲಾ(55) ಅವರ ಪತ್ನಿ ಶಾಹಿಸ್ತಾಬಾನು ಕುಟುಂಬ ಸೀಮೆ ಎಣ್ಣೆ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಈ ವೇಳೆ ಸ್ಥಳದಲ್ಲಿದ್ದ ವಿಧಾನಸೌಧ ಠಾಣೆ ಪೊಲೀಸರು ಅವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಈ ದಂಪತಿ ಚನ್ನಪಟ್ಟಣದಲ್ಲಿರುವ ತಮ್ಮ ಜಮೀನಿನಲ್ಲಿ ಶುಂಠಿ ಬೆಳೆಯಲು ‘ದಿ ಬೆಂಗಳೂರು ಸಿಟಿ ಕೋ-ಆಪರೇಟಿವ್ ಬ್ಯಾಂಕ್ ಲಿ.’ ಚಾಮರಾಜಪೇಟೆ ಶಾಖೆಯಲ್ಲಿ 50ಲಕ್ಷ ರೂ.ಸಾಲ ತೆಗೆದುಕೊಂಡಿದ್ದರು. ಅದಕ್ಕೆ ಪ್ರತಿಯಾಗಿ ಈವರೆಗೂ ಸುಮಾರು 97ಲಕ್ಷ ರೂ.ಹಣವನ್ನು ಬ್ಯಾಂಕ್‍ಗೆ ಪಾವತಿಸಿದರೂ, ಸಾಲ ಬಾಕಿ ಇದೆ ಎಂದು ತಿಳಿಸಿದ ಬ್ಯಾಂಕ್‍ನವರು ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡಿದ್ದಾರೆ. ಮನೆಯನ್ನು ಹರಾಜು ಮಾಡಿದ್ದಾರೆ. ಇದರಿಂದ ನಮಗೆ ಅನ್ಯಾಯವಾಗಿದೆ ಎಂದು ಆತ್ಮಹತ್ಯೆಗೆ ಯತ್ನಿಸಿದ ದಂಪತಿ ಆರೋಪಿದ್ದಾರೆ.
ಈ ಬಗ್ಗೆ ಹಲವು ಬಾರಿ ಸ್ಥಳೀಯ ಶಾಸಕರೂ ಆಗಿರುವ ಸಚಿವ ಝಮೀರ್ ಅಹ್ಮದ್ ಖಾನ್ ಅವರ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ಅದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ನ್ಯಾಯ ಕೇಳಲು ವಿಧಾನಸೌಧ ಬಳಿ ಬಂದಿದ್ದೇವೆ ಎಂದು ದಂಪತಿಗಳು ಮಾಧ್ಯಮ ಪ್ರತಿನಿಧಿಗಳ ಮುಂದೆ ತಮ್ಮ ಅಳಲು ತೋಡಿಕೊಂಡರು.
ಮುಖ್ಯಮಂತ್ರಿ ಭೇಟಿಗೂ ಮುನ್ನ ಸೀಮೆಎಣ್ಣೆ ಕ್ಯಾನ್ ಸಮೇತ ವಿಧಾನಸೌಧದ ಮೂರನೆ ಗೇಟ್ ಬಳಿ ಬಂದ ದಂಪತಿ, ಏಕಾಏಕಿ ಸೀಮೆಎಣ್ಣೆ ಸುರಿದುಕೊಂಡಿದ್ದಾರೆ. ತಕ್ಷಣ ಸ್ಥಳದಲ್ಲಿದ್ದ ಇನ್‍ಸ್ಪೆಕ್ಟರ್ ಕುಮಾರಸ್ವಾಮಿ ಗಮನಿಸಿದ್ದು, ಸೀಮೆಎಣ್ಣೆ ಕ್ಯಾನ್ ಕಿತ್ತುಕೊಂಡು, ದಂಪತಿಯನ್ನು ವಶಕ್ಕೆ ಪಡೆದಿದ್ದಾರೆ. ದಂಪತಿಯನ್ನು ರಕ್ಷಿಸುವ ವೇಳೆ ಇನ್‍ಸ್ಪೆಕ್ಟರ್ ಅವರ ಮೈಮೇಲೂ ಸೀಮೆಎಣ್ಣೆ ಬಿದ್ದಿದ್ದು, ಅದೃಷ್ಟವಶಾತ್ ಯಾವುದೇ ಅನಾಹುತ ಸಂಭವಿಸಿಲ್ಲ ಎಂದು ಗೊತ್ತಾಗಿದೆ.