ರೈತ ವಿರೋಧಿ, ಹಿಂದೂ ವಿರೋಧಿ ಧೋರಣೆ ಕಾಂಗ್ರೆಸ್ಸಿಗೆ ಶಾಪ : ಬಿ.ವೈ.ವಿಜಯೇಂದ್ರ
ಬೆಂಗಳೂರು : ಮುಖ್ಯಮಂತ್ರಿಗಳ ರೈತ ವಿರೋಧಿ ಧೋರಣೆ, ಮಠಮಾನ್ಯಗಳ ಜಮೀನನ್ನು ಕಸಿಯುವ ಹುನ್ನಾರದ ಹಿಂದೂ ವಿರೋಧಿ ನಡವಳಿಕೆಯು ಕಾಂಗ್ರೆಸ್ಸಿಗೆ ಶಾಪ ಆಗಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ತಿಳಿಸಿದ್ದಾರೆ.
ಶುಕ್ರವಾರ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿಗಳ ಕುಮ್ಮಕ್ಕಿನಿಂದ ಝಮೀರ್ ಅಹ್ಮದ್ ಅವರೇ ನೇತೃತ್ವ ವಹಿಸಿ ರೈತರ ಜಮೀನಿಗೆ ಕನ್ನ ಹಾಕುವ ಕೆಲಸ ಮಾಡಿದ್ದರ ಪರಿಣಾಮ ಉಪ ಚುನಾವಣೆ ಮೇಲೆ ಆಗಲಿದೆ ಎಂದರು.
ವಕ್ಫ್ ವಿಚಾರದಲ್ಲಿ ಕಾಂಗ್ರೆಸ್ ಸರಕಾರ, ಮುಖ್ಯಮಂತ್ರಿಗಳ ಧೋರಣೆ, ನಡವಳಿಕೆಯನ್ನು ರಾಜ್ಯದ ರೈತರು-ಜನರು ಪ್ರಶ್ನೆ ಮಾಡುತ್ತಿದ್ದಾರೆ. ರಾಜ್ಯದ ಸಂಡೂರು, ಶಿಗ್ಗಾಂವಿ ಮತ್ತು ಚನ್ನಪಟ್ಟಣ ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಗಳಲ್ಲಿ 3 ಕ್ಷೇತ್ರಗಳಲ್ಲೂ ಬಿಜೆಪಿ-ಎನ್ಡಿಎ ಪಕ್ಷ ಗೆಲ್ಲಲಿದೆ ಎಂದು ವಿಜಯೇಂದ್ರ ವಿಶ್ವಾಸ ವ್ಯಕ್ತಪಡಿಸಿದರು.
ಮೂರು ಕ್ಷೇತ್ರಗಳ ಉಪ ಚುನಾವಣೆ ನಡೆಯುತ್ತಿದೆ. ಶಿಗ್ಗಾಂವಿ ಕ್ಷೇತ್ರದಲ್ಲಿ ಬಿಜೆಪಿ ಈಗಾಗಲೇ ಗೆದ್ದಾಗಿದೆ ಎಂಬ ವಾತಾವರಣ ನಿರ್ಮಾಣವಾಗಿದೆ. ಸಂಡೂರಿನಲ್ಲಿ ಮತ್ತು ಚನ್ನಪಟ್ಟಣದಲ್ಲಿ ಕಾಂಗ್ರೆಸ್ನವರು ಗೆದ್ದೇ ಗೆಲ್ಲುವ ಭ್ರಮೆಯಲ್ಲಿದ್ದರು. ಆದರೆ, ಈಗ ಮಾನ್ಯ ಮುಖ್ಯಮಂತ್ರಿಗಳಿಗೆ, ಸಚಿವರಿಗೆ ಚನ್ನಪಟ್ಟಣದಲ್ಲಿ ಜೆಡಿಎಸ್ ಪಕ್ಷಕ್ಕೆ ಮೇಲುಗೈ ಆಗುತ್ತಿರುವುದು ಅರಿವಾಗಿದೆ ಎಂದು ವಿಜಯೇಂದ್ರ ವಿಶ್ಲೇಷಿಸಿದರು.
ಮುಖ್ಯಮಂತ್ರಿಗಳು ತಮ್ಮ ಕಾರ್ಯಕ್ರಮಗಳನ್ನು ರದ್ದು ಮಾಡಿ ಸಂಡೂರಿನಲ್ಲಿ ಬೀಡುಬಿಡುತ್ತಿದ್ದು, ಆ ಕ್ಷೇತ್ರವೂ ಕಾಂಗ್ರೆಸ್ ಕೈಜಾರಿ ಹೋಗುವ ವಾತಾವರಣ ಇದೆ ಹಾಗೂ ಬಿಜೆಪಿಗೆ ಮೇಲುಗೈ ಆಗುವ ವಾತಾವರಣ ನಿರ್ಮಾಣವಾಗಿದೆ. ಜನರು ತಿರುಗಿ ಬೀಳಲಿದ್ದಾರೆ ಎಂದು ವಿಜಯೇಂದ್ರ ತಿಳಿಸಿದರು.
ಸಿಎಂ ರಾಜೀನಾಮೆ ಈಗಾಗಲೇ ನಿಶ್ಚಯವಾಗಿದೆ..! :
ಮುಂದಿನ ಮೂರೂವರೆ ವರ್ಷ ನಾನೇ ಸಿಎಂ ಎಂಬ ಸಿದ್ದರಾಮಯ್ಯನವರ ಹೇಳಿಕೆ ಸಂಬಂಧ ಪ್ರತಿಕ್ರಿಯಿಸಿದ ಬಿ.ವೈ.ವಿಜಯೇಂದ್ರ, ‘ಆರೋಪಿ ಸ್ಥಾನದಲ್ಲಿರುವ ಮುಖ್ಯಮಂತ್ರಿಗಳು ಒಂದು ಕಡೆ ತಮ್ಮ ಬೆನ್ನನ್ನು ತಾವು ತಟ್ಟಿಕೊಳ್ಳುತ್ತಿದ್ದಾರೆ. ತಾವೇ ಮುಖ್ಯಮಂತ್ರಿಗಳಾಗಿ ಮುಂದುವರೆಯುವುದಾಗಿ ಹೇಳಿ ಶಾಸಕರಿಗೆ ವಿಶ್ವಾಸ ತುಂಬುವ ಕೆಲಸ ಮಾಡುತ್ತಿದ್ದಾರೆ. ಆದರೆ, ಸತ್ಯ ಏನೆಂದು ಸಿದ್ದರಾಮಯ್ಯನವರಿಗೂ ಗೊತ್ತಿದೆ. ಅವರು ಯಾವಾಗ ರಾಜೀನಾಮೆ ಕೊಡುತ್ತಾರೆಂದು ಡಿ.ಕೆ.ಶಿವಕುಮಾರ್ ಹಾಗೂ ಮಲ್ಲಿಕಾರ್ಜುನ ಖರ್ಗೆಯವರಿಗೆ ಗೊತ್ತಿದೆ. ಸಿಎಂ ರಾಜೀನಾಮೆ ಈಗಾಗಲೇ ನಿಶ್ಚಯವಾಗಿದೆ’ ಎಂದರು.
ಡಿ.ಕೆ.ಶಿವಕುಮಾರ್ ಮಾತಿನ ಮೇಲೆ ಹಿಡಿತವಿರಲಿ :
ಡಿ.ಕೆ.ಶಿವಕುಮಾರ್ ಅವರ ತಗ್ಗಿ ಬಗ್ಗಿ ನಡೆಯಬೇಕೆಂಬ ಹೇಳಿಕೆ ಕುರಿತು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಬಿ.ವೈ.ವಿಜಯೇಂದ್ರ, ಅಧಿಕಾರದ ದರ್ಪ ಈ ರೀತಿ ಮಾಡಿಸುತ್ತದೆ. ಈ ಕಾಂಗ್ರೆಸ್ ಸರಕಾರ ಮತ್ತು ಸಚಿವರ ನಡವಳಿಕೆ ನೋಡಿದರೆ ಅಧಿಕಾರದ ದರ್ಪದಿಂದ ಈ ರೀತಿ ಮಾತುಗಳು ಬರುತ್ತಿವೆ. ಜಯನಗರ ವಿಧಾನಸಭಾ ಕ್ಷೇತ್ರದ ಮತದಾರರು ಏನು ಮಾಡಿದ್ದಾರೆ? ಅಲ್ಲಿ ಬಿಜೆಪಿ ಶಾಸಕ ರಾಮಮೂರ್ತಿ ಅವರು ಗೆದ್ದಿದ್ದಾರೆಂಬ ಕಾರಣಕ್ಕೆ ತಗ್ಗಿ ಬಗ್ಗಿ ನಡೆಯಬೇಕೆಂದು ಹೇಳಿದರೆ, ಇವರೇನು ಪ್ರಜಾಪ್ರಭುತ್ವದಲ್ಲಿ ಇದ್ದಾರಾ? ಇವರದು ಸರ್ವಾಧಿಕಾರಿ ಪ್ರವೃತ್ತಿಯೇ?. ಅಧಿಕಾರ ಎಂಬುದು ಶಾಶ್ವತವಲ್ಲ. ಡಿ.ಕೆ.ಶಿವಕುಮಾರ್ ಅವರೇ ಮಾತಿನ ಮೇಲೆ ಹಿಡಿತ ಇಟ್ಟುಕೊಳ್ಳಬೇಕು ಎಂದರು.