ಬೆಂಗಳೂರಿನಲ್ಲಿ ಜೈ ಶ್ರೀ ರಾಮ್ ಘೋಷಣೆ ಕೂಗಿದ ಯುವಕರ ಮೇಲೆ ಹಲ್ಲೆ ಆರೋಪ : ನಾಲ್ವರ ಬಂಧನ

Update: 2024-04-18 14:57 GMT

ಬೆಂಗಳೂರು: ಜೈ ಶ್ರೀರಾಮ್ ಎಂದು ಘೋಷಣೆ ಕೂಗಿಕೊಂಡು ಮೂವರು ಯುವಕರು ಹೋಗುತ್ತಿದ್ದ ಕಾರಿಗೆ ಅಡ್ಡಗಟ್ಟಿದ ಯುವಕರ ಗುಂಪೊಂದು ಆಕ್ಷೇಪ ವ್ಯಕ್ತಪಡಿಸಿ, ಹಲ್ಲೆ ನಡೆಸಿರುವ ಪ್ರಕರಣದಡಿ ನಾಲ್ವರು ಆರೋಪಿಗಳನ್ನು ವಿದ್ಯಾರಣ್ಯಪುರ ಠಾಣೆಯ ಪೊಲೀಸರು ಬಂಧಿಸಿರುವುದಾಗಿ ತಿಳಿಸಿದ್ದಾರೆ.

ಕೊಡಿಗೆಹಳ್ಳಿ ನಿವಾಸಿಗಳಾದ ವಿನಾಯಕ್, ರಾಹುಲ್ ಹಾಗೂ ಪವನ್ ಎಂಬುವರು ತಮ್ಮ ಮೇಲೆ ಹಲ್ಲೆ ನಡೆದ ಬಗ್ಗೆ ದೂರು ನೀಡಿದ್ದರು. ಈ ಸಂಬಂಧ ಐವರ ವಿರುದ್ಧ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಮೂವರು ಯುವಕರು ಸೆಕೆಂಡ್ ಹ್ಯಾಂಡ್ ದ್ವಿಚಕ್ರ ವಾಹನ ಖರೀದಿಸಲು ಎಂ.ಎಸ್.ಪಾಳ್ಯ ಕಡೆಗೆ ಒಂದೇ ಕಾರಿನಲ್ಲಿ ಎ.17ರ ಬುಧವಾರ ಮಧ್ಯಾಹ್ನ ತೆರಳುತ್ತಿದ್ದರು. ಈ ವೇಳೆ ಕಾರಿನಲ್ಲಿ ಬಾವುಟ ಹಿಡಿದುಕೊಂಡು, ಜೈ ಶ್ರೀರಾಮ್ ಎಂದು ಜೈಕಾರ ಕೂಗಿದ್ದರು. ಇದನ್ನು ಗಮನಿಸಿದ ಇಬ್ಬರು ಯುವಕರು ದ್ವಿಚಕ್ರ ವಾಹನದಲ್ಲಿ ಹಿಂಬಾಲಿಸಿಕೊಂಡು ಬಂದು ವಿದ್ಯಾರಣ್ಯಪುರ ಬೆಟ್ಟಳ್ಳಿ ಬಳಿ ಕಾರನ್ನು ಅಡ್ಡಗಟ್ಟಿ ಜೈ ಶ್ರೀರಾಮ್ ಕೂಗದಂತೆ ವಿರೋಧ ವ್ಯಕ್ತಪಡಿಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಅಲ್ಲದೇ, ಯುವಕರನ್ನು ಅವಾಚ್ಯವಾಗಿ ನಿಂದಿಸಿದ್ದಾರೆ. ಇದಕ್ಕೆ ಕಾರಿನಲ್ಲಿದ್ದ ಯುವಕನೊಬ್ಬ ಇದನ್ನು ಪ್ರಶ್ನಿಸಿ ಕಾರಿನಿಂದ ಕೆಳಗಿಳಿಯುತ್ತಿದಂತೆ ಕ್ಷಣಾರ್ಧದಲ್ಲೇ ಯುವಕರು ಪರಾರಿಯಾಗಿದ್ದಾರೆ. ಬಳಿಕ ಮತ್ತೆ ಕಾರನ್ನು ಹಿಂಬಾಲಿಸಿದ ಇಬ್ಬರು ಯುವಕರು ಜೊತೆಗೆ ಮತ್ತೆ ಮೂವರನ್ನು ಒಗ್ಗೂಡಿಸಿಕೊಂಡು ಬಂದು ದೊಣ್ಣೆಯಿಂದ ಹಲ್ಲೆ ನಡೆಸಿ, ಪರಾರಿಯಾಗಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ನಿಂದನೆ ದೃಶ್ಯಾವಳಿ ಮೊಬೈಲ್‍ನಲ್ಲಿ ಸೆರೆಯಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಹಲ್ಲೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ. ಪ್ರಮುಖ ಇಬ್ಬರು ಆರೋಪಿಗಳು ಹಾಗೂ ಇನ್ನಿಬ್ಬರು ಅಪ್ರಾಪ್ತರ ಸಹಿತ ನಾಲ್ವರನ್ನು ವಿದ್ಯಾರಣ್ಯಪುರ ಠಾಣೆ ಪೊಲೀಸರು ಬಂಧಿಸಿದ್ದು, ತನಿಖೆ ಮುಂದುವರೆದಿದೆ. ಮತ್ತೆ ಯಾರಾದರೂ ಭಾಗಿಯಾಗಿದ್ದಾರೆಯೇ ಎಂಬ ಬಗ್ಗೆ ಪರಿಶೀಲಿಸಲಾಗುತ್ತಿದೆ ಎಂದು ಈಶಾನ್ಯ ವಿಭಾಗದ ಡಿಸಿಪಿ ಲಕ್ಷ್ಮೀ ಪ್ರಸಾದ್ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News