ಬೆಂಗಳೂರು | ರೈತನಿಗೆ ಮಾಲ್ ಪ್ರವೇಶ ನಿರಾಕರಣೆ : ಮಾಲ್ ಮಾಲಕರು, ಭದ್ರತಾ ಸಿಬ್ಬಂದಿ ವಿರುದ್ಧ FIR ದಾಖಲು
ಬೆಂಗಳೂರು : ಪಂಚೆ ಧರಿಸಿದ್ದ ರೈತನಿಗೆ ಪ್ರವೇಶ ನಿರಾಕರಿಸಿದ್ದ ಜಿ.ಟಿ.ವರ್ಲ್ಡ್ ಶಾಪಿಂಗ್ ಮಾಲ್ ಮಾಲಕರು ಮತ್ತು ಭದ್ರತಾ ಸಿಬ್ಬಂದಿಯ ವಿರುದ್ಧ ಇಲ್ಲಿನ ಕೆ.ಪಿ.ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿದೆ.
ಮಾಲ್‍ನ ಭದ್ರತಾ ಸಿಬ್ಬಂದಿಗೆ ಮಾರ್ಗದರ್ಶನ ನೀಡದೆ ರೈತನಿಗೆ ಅವಮಾನವಾಗುವಂತೆ ನಡೆದುಕೊಳ್ಳಲಾಗಿದೆ ಎಂದು ಆರೋಪಿಸಿ ಧರ್ಮರಾಜ್ ಎಂಬುವರು ದೂರು ನೀಡಿದ್ದು, ಇದರನ್ವಯ ಭಾರತೀಯ ನ್ಯಾಯ ಸಂಹಿತೆ(ಬಿಎನ್‍ಎಸ್) ಪ್ರಕಾರ ಪ್ರಕರಣ ದಾಖಲಿಸಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ವಿವರ: ಜು.16ರಂದು ಹಾವೇರಿ ಮೂಲದ ರೈತರೊಬರು ಜಿ.ಟಿ.ಮಾಲ್‍ಗೆ ಸಿನಿಮಾ ವೀಕ್ಷಿಸಲು ತೆರಳಿದ್ದರು. ಈ ವೇಳೆ ಪಂಚೆ ಧರಿಸಿದ್ದರು ಎಂಬ ಕಾರಣಕ್ಕೆ ಅವರಿಗೆ ಪ್ರವೇಶಕ್ಕೆ ನಿರಾಕರಿಸಲಾಗಿತ್ತು. ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ಸಿಬ್ಬಂದಿಯಲ್ಲಿ ಮನವಿ ಮಾಡಿದರೂ ಸಹ ಮಾಲ್ ಪ್ರವೇಶಕ್ಕೆ ಅವಕಾಶ ನೀಡಿರಲಿಲ್ಲ. ಇದಕ್ಕೆ ಕಾರಣವೇನು ಎಂದು ರೈತ ಪ್ರಶ್ನಿಸಿದಾಗ, ‘ಈ ರೀತಿ ಬಟ್ಟೆ ಧರಿಸಿದವರಿಗೆ ಪ್ರವೇಶಕ್ಕೆ ಅವಕಾಶ ನೀಡದಂತೆ ಉನ್ನತ ಅಧಿಕಾರಿಗಳು ಸೂಚಿಸಿದ್ದಾರೆ’ ಎಂದು ಭದ್ರತಾ ಸಿಬ್ಬಂದಿ ಉತ್ತರಿಸಿದ್ದರು.