ಬೆಂಗಳೂರು | ಚಾರಿಟಬಲ್ ಟ್ರಸ್ಟ್ ಗಳಿಗೆ ದೇಣಿಗೆ ಕೊಡಿಸುವ ನೆಪದಲ್ಲಿ‌ ವಂಚನೆ ಆರೋಪ : ನಾಲ್ವರ ಬಂಧನ

Update: 2024-04-06 13:58 GMT

ಸಾಂದರ್ಭಿಕ ಚಿತ್ರ

ಬೆಂಗಳೂರು : ಚಾರಿಟಬಲ್ ಟ್ರಸ್ಟ್ ಗಳಿಗೆ ಕೋಟ್ಯಂತರ ರೂಪಾಯಿ ಸಿಎಸ್‍ಆರ್ ದೇಣಿಗೆ ಕೊಡಿಸುವ ನೆಪದಲ್ಲಿ ವಂಚಿಸುತ್ತಿದ್ದ ಆರೋಪದಡಿ ನಾಲ್ವರನ್ನು ಇಲ್ಲಿನ ಹಲಸೂರು ಠಾಣೆ ಪೊಲೀಸರು ಬಂಧಿಸಿರುವುದು ವರದಿಯಾಗಿದೆ.

ತಮಿಳುನಾಡಿನ ಕಾಂಚೀಪುರಂ ಪಳ್ಳಿ ಕರಣೈ ನಿವಾಸಿ ಸುನಿತಾ, ಜಯಕುಮಾರ, ಉತ್ತರಹಳ್ಳಿಯ ಜತೀನ್ ಅಗರ್ವಾಲ್ ಮತ್ತು ಗುಜರಾತ್ ಮೂಲದ ರಾಜೇಂದ್ರ ಹೆಗ್ಡೆ ಎಂಬುವರನ್ನು ಬಂಧಿತ ಆರೋಪಿಗಳು ಎಂದು ಗುರುತಿಸಲಾಗಿದೆ.

ಬಂಧಿತರಿಂದ ನಕಲಿ ದಾಖಲೆ ಪತ್ರಗಳನ್ನು ಜಪ್ತಿ ಮಾಡಲಾಗಿದೆ. ಇವರು ಜೆಎಸ್‍ಡಬ್ಲ್ಯೂ ಸ್ಟೀಲ್ ಲಿಮಿಟೆಡ್, ಆದಿತ್ಯಾ ಬಿರ್ಲಾ, ಅಲ್ಟ್ರಾ ಟೆಕ್, ಮಹೀಂದ್ರ ಸಸ್ಟೇನ್ ಪ್ರೈ.ಲಿ. ಸೇರಿದಂತೆ ಪ್ರತಿಷ್ಠಿತ ಕಂಪೆನಿಗಳ ಹೆಸರಿನಲ್ಲಿ ನಕಲಿ ದಾಖಲೆಗಳನ್ನು ಸೃಷ್ಟಿಸುತ್ತಿದ್ದರು. ಬಳಿಕ ಆರೋಪಿಗಳೇ ತಮ್ಮನ್ನು ಎಕ್ಸಿಕ್ಯೂಟೀವ್ ಮ್ಯಾನೇಜರ್, ಕಂಪೆನಿಯ ಪ್ರತಿನಿಧಿಗಳು ಎಂದು ಬಿಂಬಿಸಿಕೊಂಡು ಚಾರಿಟಬಲ್ ಟ್ರಸ್ಟ್ ಗಳ ಪ್ರತಿನಿಧಿಗಳನ್ನು ಭೇಟಿ ಮಾಡುತ್ತಿದ್ದರು.

ನಕಲಿ ದಾಖಲೆಗಳನ್ನು ತೋರಿಸಿ ನಂಬಿಸಿ ಕಲಂ 80(ಜಿ) ಆದಾಯ ತೆರಿಗೆ ಕಾಯ್ದೆಯನ್ವಯ ನಿಮ್ಮ ಟ್ರಸ್ಟ್ ಗಳಿಗೆ ದೇಣಿಗೆ ನೀಡುತ್ತೇವೆ. ಇದರಿಂದ ಕಂಪೆನಿಗಳಿಗೆ ಆದಾಯ ತೆರಿಗೆ ಪಾವತಿಯಲ್ಲಿ ವಿನಾಯಿತಿ ಸಿಗಲಿದೆ ಎಂದು ನಂಬಿಸುತ್ತಿದ್ದರು. ಸಿಎಸ್‍ಆರ್ ಫಂಡ್ ನೀಡಲು ಮೂಮೆಂಟ್ ಚಾರ್ಜ್ ಮತ್ತು ‌ಪ್ರೊಸೆಸಿಂಗ್ ಚಾರ್ಜ್ ಕೊಡಬೇಕಾಗುತ್ತದೆ ಎಂದು ಹೇಳಿ 10ರಿಂದ 15 ಲಕ್ಷ ರೂ. ಮತ್ತು ದಾಖಲೆ ಪತ್ರಗಳನ್ನು ಪಡೆಯುತ್ತಿದ್ದರು.

ಆನಂತರ ಟ್ರಸ್ಟ್ ಕಡೆಯಿಂದ ಸರಿಯಾದ ದಾಖಲೆ ಮತ್ತು ನಿಯಮ ಪಾಲನೆ ಮಾಡಿಲ್ಲ ಎಂದು ನೆಪ ಹೇಳಿ ಹಣ ಮಂಜೂರು ಮಾಡಲು ಸಾಧ್ಯವಾಗುವುದಿಲ್ಲ ಎಂದು ತಿರಸ್ಕರಿಸುತ್ತಿದ್ದರು. ಇದೇ ರೀತಿ ಮಾ.14ರಂದು ಶಂಕರಾನಂದ ಆಶ್ರಮ ಟ್ರಸ್ಟ್ ಪದಾಧಿಕಾರಿಗಳನ್ನು ಸಂಪರ್ಕ ಮಾಡಿದ ಆರೋಪಿಗಳು, ಎಕ್ಸ್ ಪೆಂಡರ್ಸ್ ಇಂಟರ್ ನ್ಯಾಷನಲ್ ಇಂಡಿಯಾ ಪ್ರೈ.ಲಿ. ಕಂಪೆನಿಯಿಂದ ಕೋಟ್ಯಂತರ ರೂ. ಸಿಎಸ್‍ಆರ್ ಫಂಡ್ ನೀಡುವುದಾಗಿ ನಂಬಿಸಿದ್ದರು.

ಟ್ರಸ್ಟ್ ಕಡೆಯಿಂದ 15 ಲಕ್ಷ ರೂ. ಮತ್ತು ದಾಖಲೆ ಪತ್ರಗಳನ್ನು ಪಡೆದು ಕೊನೆಗೆ ಕೆಲ ನಿಮಯಗಳನ್ನು ಪಾಲನೆ ಮಾಡಿಲ್ಲ. ನಿಮಗೆ ನೀಡಬೇಕಾಗಿದ್ದ ಸಿಎಸ್‍ಆರ್ ಫಂಡ್ ಕೊಡಲು ಸಾಧ್ಯವಿಲ್ಲ ಎಂದು ಸಬೂಬು ಹೇಳಿದ್ದರು. ಗಾಬರಿಗೊಂಡ ಆಶ್ರಮದ ವಕೀಲರು, ಹಣ ವಾಪಸ್ ಕೊಡುವಂತೆ ಕೇಳಿದಾಗ ಆರೋಪಿಗಳು ಹಲ್ಲೆ ನಡೆಸಿ, ನಿಂದಿಸಿದ್ದರು‌ ಎನ್ನಲಾಗಿದೆ. ಈ ಬಗ್ಗೆ ಹಲಸೂರು ಪೊಲೀಸ್ ಠಾಣೆಯಲ್ಲಿ ಆಶ್ರಮದ ಕಡೆಯಿಂದ ದೂರು ದಾಖಲಿಸಲಾಗಿತ್ತು. ಇದರ ಮೇರೆಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಗಳನ್ನು ಬಂಧಿಸಿ ಕ್ರಮ ಜರುಗಿಸಿರುವುದಾಗಿ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News