ಬೆಂಗಳೂರು | ಅಧಿಕಾರಿಗಳ ಸೋಗಿನಲ್ಲಿ ಚಿನ್ನದ ಅಂಗಡಿ ಮೇಲೆ ದಾಳಿ: ನಾಲ್ವರು ಆರೋಪಿಗಳು ಸೆರೆ

Update: 2024-01-29 14:03 GMT

ಬೆಂಗಳೂರು: ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡಡ್ರ್ಸ್ (ಬಿಐಎಸ್) ಅಧಿಕಾರಿಗಳ ಸೋಗಿನಲ್ಲಿ ಚಿನ್ನದ ಅಂಗಡಿ ದೋಚಿ ಪರಾರಿಯಾಗಲು ಯತ್ನಿಸಿದ್ದ ನಾಲ್ವರು ಆರೋಪಿಗಳನ್ನು ಇಲ್ಲಿನ ಕೆ.ಆರ್.ಪುರಂ ಠಾಣಾ ಪೊಲೀಸರು ಬಂಧಿಸಿರುವುದು ವರದಿಯಾಗಿದೆ.

ಸಂಪತ್ ಕುಮಾರ್, ಜೋಶಿ ಥಾಮಸ್, ಅವಿನಾಶ್ ಹಾಗೂ ಸಂದೀಪ್ ಎಂಬುವರನ್ನು ಬಂಧಿತ ಆರೋಪಿಗಳು ಎಂದು ಗುರುತಿಸಲಾಗಿದೆ.

ಜನವರಿ 27ರಂದು ಕಾರಿನಲ್ಲಿ ಕೆ.ಆರ್.ಪುರಂನ ಮಹಾಲಕ್ಷ್ಮೀ ಜ್ಯುವೆಲರ್ಸ್ ಅಂಗಡಿಗೆ ಬಂದಿದ್ದ ಆರೋಪಿಗಳು, ‘ತಾವು ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡಡ್ರ್ಸ್ ಅಧಿಕಾರಿಗಳು, ಬೆಂಗಳೂರಿನ ಹಲವು ಚಿನ್ನದಂಗಡಿಗಳ ಮೇಲೆ ದಾಳಿ ಮಾಡಲಾಗಿದೆ ಅದರಲ್ಲಿ ನಿಮ್ಮದೂ ಒಂದು. ಹಾಲ್‍ಮಾರ್ಕ್ ಇಲ್ಲದೆ ಅಕ್ರಮವಾಗಿ ನೀವು ಚಿನ್ನ ಮಾರಾಟ ಮಾಡುತ್ತಿದ್ದೀರಿ ಎಂಬ ಮಾಹಿತಿ ನಮಗೆ ದೊರೆತಿದೆ. ಹೀಗಾಗಿ ದಾಳಿ ಮಾಡಿದ್ದೇವೆ' ಎಂದು ಹೇಳಿದ್ದಾರೆ.

ಸುಮಾರು 40 ನಿಮಿಷ ಅಂಗಡಿಯಲ್ಲಿ ಶೋಧ ನಡೆಸಿದಂತೆ ಮಾಡಿ ಬಳಿಕ 80 ಲಕ್ಷ ರೂ. ಮೌಲ್ಯದ 1 ಕೆಜಿಗೂ ಅಧಿಕ ಚಿನ್ನ ತೆಗೆದುಕೊಂಡು, ಬಳಿಕ ಅಂಗಡಿ ಮಾಲಕನ ಕೈಗೆ ನಕಲಿ ನೋಟಿಸ್ ನೀಡಿ, ಮುಂದಿನ ವಾರ ತಮಿಳುನಾಡಿನ ಬಿಐಎಸ್ ಕಚೇರಿಗೆ ಬರುವಂತೆ ಹೇಳಿ ತೆರಳಿದ್ದರು. ಆದರೆ ಹೊರಡುವ ಮುನ್ನ ಚಿನ್ನದ ಅಂಗಡಿಯ ಸಿಸಿಟಿವಿ ಡಿವಿಆರ್ ನ್ನು ಆರೋಪಿಗಳು ಪಡೆದುಕೊಂಡಿದ್ದಾರೆ.

ಇದರಿಂದ ಅನುಮಾನಗೊಂಡ ಚಿನ್ನದ ಅಂಗಡಿಯ ಕೆಲ ಸಿಬ್ಬಂದಿ ನಕಲಿ ಅಧಿಕಾರಿಗಳನ್ನು ಹಿಂಬಾಲಿಸಿದ್ದಾರೆ. ಇತ್ತ ಅಂಗಡಿ ಮಾಲಕ ಸಹ ಅನುಮಾನಗೊಂಡು ಕೆ.ಆರ್.ಪುರಂ ಪೊಲೀಸರಿಗೆ ದೂರು ನೀಡಿದ್ದರು. ಪೊಲೀಸರು ಹಿಂಬಾಲಿಸುತ್ತಿರುವುದನ್ನು ತಿಳಿದ ಆರೋಪಿಗಳು ತಪ್ಪಿಸಿಕೊಳ್ಳುವ ಭರದಲ್ಲಿ ಟಿ.ಸಿ.ಪಾಳ್ಯ ಜಂಕ್ಷನ್ ಬಳಿ ಸರಣಿ ಅಪಘಾತವೆಸಗಿದ್ದಾರೆ. ಆದರೆ ಸಿನಿಮೀಯ ಮಾದರಿಯಲ್ಲಿ ಆರೋಪಿಗಳನ್ನು ಬೆನ್ನಟ್ಟಿ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ.

ಬಂಧಿತರ ಪೈಕಿ ಸಂಪತ್ ಎಂಬಾತ ಈ ಹಿಂದೆ ಮಂಡ್ಯದಲ್ಲಿ ಕಳ್ಳತನ ಪ್ರಕರಣದ ಆರೋಪಿಯಾಗಿದ್ದು, ಜೈಲುವಾಸ ಅನುಭವಿಸಿ ಬಿಡುಗಡೆಯಾಗಿದ್ದ. ಬಳಿಕ ತಮಿಳುನಾಡು ಮೂಲದ ವ್ಯಕ್ತಿಯೊಬ್ಬನ ಸೂಚನೆಯಂತೆ ಈ ಕೃತ್ಯಕ್ಕೆ ಕೈ ಹಾಕಿದ್ದ ಎಂದು ತಿಳಿದು ಬಂದಿದೆ. ಆರೋಪಿಗಳ ಬಂಧನವಾಗುತ್ತಿದ್ದಂತೆ ತಮಿಳುನಾಡು ಮೂಲದ ಪ್ರಮುಖ ಆರೋಪಿ ನಾಪತ್ತೆಯಾಗಿದ್ದಾನೆ ಎಂದು ತಿಳಿದುಬಂದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News