ಬೆಂಗಳೂರು| ಅಕ್ರಮ ಶಸ್ತ್ರಾಸ್ತ್ರ ಮಾರಾಟಗಾರರ ಬಂಧನ: 2 ಪಿಸ್ತೂಲ್, 9 ಜೀವಂತ ಗುಂಡುಗಳು ವಶ

Update: 2024-01-18 13:01 GMT

ಸಾಂದರ್ಭಿಕ ಚಿತ್ರ

ಬೆಂಗಳೂರು: ಅಕ್ರಮ ಪಿಸ್ತೂಲ್‍ಗಳು ಮತ್ತು ಜೀವಂತ ಗುಂಡುಗಳನ್ನು ಮಾರಾಟ ಮಾಡಲು ಪ್ರಯತ್ನಿಸುತ್ತಿದ್ದ ಮಹಾರಾಷ್ಟ್ರ ಮೂಲದ ಇಬ್ಬರು ಆರೋಪಿಗಳನ್ನು ಸಿಸಿಬಿಯ ಸಂಘಟಿತ ಅಪರಾಧ ದಳ (ಪಶ್ಚಿಮ)ದ ಅಧಿಕಾರಿಗಳು ಬಂಧಿಸಿರುವುದಾಗಿ ವರದಿಯಾಗಿದೆ.

ರಾಹುಲ್ ಸತೀಶ್ ಮಾನೆ ಹಾಗೂ ಮಲಿಕ್ ಎಂಬುವರನ್ನು ಬಂಧಿತ ಆರೋಪಿಗಳು ಎಂದು ಗುರುತಿಸಲಾಗಿದ್ದು, ಬಂಧಿತರಿಂದ 2 ಕಂಟ್ರಿಮೇಡ್ ಪಿಸ್ತೂಲ್, 9 ಜೀವಂತ ಗುಂಡುಗಳು, ಒಂದು ಸ್ವಿಫ್ಟ್ ಡಿಸೈರ್ ಕಾರ್ ಸೇರಿ ಮತ್ತಿತರ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಜನವರಿ 14ರಂದು ಬೆಳಗ್ಗೆ ಜ್ಞಾನಭಾರತಿ ಪೊಲೀಸ್ ಠಾಣಾ ವ್ಯಾಪ್ತಿಯ ಉಲ್ಲಾಳ ರಿಂಗ್ ರಸ್ತೆಯ ಕೆರೆ ಬಳಿ ಅಕ್ರಮ ಪಿಸ್ತೂಲ್‍ಗಳು ಮತ್ತು ಜೀವಂತ ಗುಂಡುಗಳನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದಾಗ ದಾಳಿ ನಡೆಸಿದ ಸಿಸಿಬಿಯ ಸಂಘಟಿತ ಅಪರಾಧ ದಳ(ಪಶ್ಚಿಮ)ದ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.

ಈ ಸಂಬಂಧ ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣದ ಪ್ರಮುಖ ಆರೋಪಿ ರಾಹುಲ್ ಸತೀಶ್ ಮಾನೆ ಎಂಬಾತ ಮಹಾರಾಷ್ಟ್ರ, ಉತ್ತರಪ್ರದೇಶ ಮತ್ತು ಕರ್ನಾಟಕ ರಾಜ್ಯಗಳಲ್ಲಿ ಅಕ್ರಮ ಶಸ್ತ್ರಾಸ್ತ್ರಗಳನ್ನು ಮಾರಾಟ ಮಾಡುವ ಏಜೆಂಟ್ ಆಗಿದ್ದ. ಆತನ ವಿರುದ್ಧ ಶಸ್ತ್ರಾಸ್ತ್ರ ಕಾಯ್ದೆಯಡಿಯಲ್ಲಿ ಮಹಾರಾಷ್ಟ್ರದ ಮೀರಜ್ ಮಹಾತ್ಮಗಾಂಧಿ ಪೊಲೀಸ್ ಠಾಣೆಯಲ್ಲಿ 2 ಪ್ರಕರಣ, ಮೀರಜ್ ಟೌನ್ ಪೊಲೀಸ್ ಠಾಣೆಯಲ್ಲಿ 1, ಸಾಂಗ್ಲಿ ವೆಲ್‍ವಾಡಿ ಪೊಲೀಸ್ ಠಾಣೆಯಲ್ಲಿ 1, ಮೀರಜ್‍ನ ಎಂಐಡಿಸಿ ಪೊಲೀಸ್ ಠಾಣೆಯಲ್ಲಿ 1 ಪ್ರಕರಣ ಹಾಗು ಕರ್ನಾಟಕದ ಬೆಂಗಳೂರು ನಗರ ಬ್ಯಾಟರಾಯನಪುರ ಪೊಲೀಸ್ ಠಾಣೆಯಲ್ಲಿ 1 ಪ್ರಕರಣ ಇರುವುದು ತನಿಖೆಯಿಂದ ತಿಳಿದುಬಂದಿದೆ.

ಒಂದು ವರ್ಷ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದ ಆರೋಪಿ ರಾಹುಲ್ ಸತೀಶ್ ಮಾನೆ, ಆ ಸಮಯದಲ್ಲಿ ಪರಿಚಯವಾಗಿದ್ದ ರೌಡಿಗಳಿಗೆ ಪಿಸ್ತೂಲ್‍ಗಳನ್ನು ಮಾರಾಟ ಮಾಡಲು ಬೆಂಗಳೂರಿಗೆ ಬಂದಿರುವುದರ ಬಗ್ಗೆ ಅನುಮಾನ ವ್ಯಕ್ತವಾಗಿದ್ದು, ತನಿಖೆ ಮುಂದುವರೆಸಲಾಗುತ್ತಿದೆ ಎಂದು ಹೆಚ್ಚುವರಿ ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ ಮಾಹಿತಿ ನೀಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News