ಬೆಂಗಳೂರು| ಅಕ್ರಮ ಮದ್ಯ ಸಾಗಾಟ: 50 ಲಕ್ಷ ರೂ. ಮೌಲ್ಯದ ಮಾಲು ವಶ
ಬೆಂಗಳೂರು: ಗೋವಾದಿಂದ ಬೆಂಗಳೂರು ನಗರಕ್ಕೆ ಕ್ಯಾಂಟರ್ ವಾಹನದಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 50 ಲಕ್ಷ ರೂ. ಮೌಲ್ಯದ 16 ಸಾವಿರ ಮದ್ಯದ ಬಾಟಲ್‍ಗಳನ್ನು ಇಲ್ಲಿನ ಅಬಕಾರಿ ಇಲಾಖೆಯ ಅಧಿಕಾರಿಗಳು ವಶಕ್ಕೆ ಪಡೆದು ಇಬ್ಬರು ಆರೋಪಿಗಳನ್ನು ಬಂಧಿಸಿರುವುದಾಗಿ ವರದಿಯಾಗಿದೆ.
ಬಂಧಿತರನ್ನು ಅಮಿತ್ ಹಾಗೂ ಪರಮೇಶ್ ಎಂದು ಗುರುತಿಸಲಾಗಿದ್ದು, ಗೋವಾದಿಂದ ನಗರಕ್ಕೆ ಕ್ಯಾಂಟರ್ ವಾಹನದಲ್ಲಿ ಲಕ್ಷಾಂತರ ಮೌಲ್ಯದ ಮದ್ಯ ಸರಬರಾಜು ಮಾಡುತ್ತಿದ್ದ ಮಾಹಿತಿ ಮೇರೆಗೆ ನಗರದ ಮಹದೇವಪುರ ಹಾಗೂ ಕೆ.ಆರ್.ಪುರ ವಲಯ ಅಧಿಕಾರಿಗಳು ಜಂಟಿ ಕಾರ್ಯಾಚರಣೆ ಕೈಗೊಂಡು 50 ಲಕ್ಷ ರೂ. ಮೌಲ್ಯದ 370 ಬಾಕ್ಸ್ ನಲ್ಲಿದ್ದ 16 ಸಾವಿರ ಮದ್ಯದ ಬಾಟಲ್‍ಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಗೋವಾದಿಂದ ನಗರಕ್ಕೆ ಮದ್ಯ ಸರಬರಾಜು ಮಾಡುತ್ತಿರುವ ಬಗ್ಗೆ ಮಾಹಿತಿ ಲಭ್ಯವಾಗಿತ್ತು. ಕಳೆದ 15 ದಿನಗಳಿಂದ ಅಬಕಾರಿ ಇಲಾಖೆಯ ಡಿಸಿ ವೀರಣ್ಣ ಬಾಗೇವಾಡಿ, ಡಿವೈಎಸ್ಪಿ ಮುಜಾವರ್ ಅಬೂಬಕರ್ ನೇತೃತ್ವದ ತಂಡ ರಚಿಸಲಾಗಿತ್ತು. ಜ.23ರ ಮಂಗಳವಾರ ಹೊಸಕೋಟೆಗೆ ಕಡೆ ಮಾಲ್ ಸಾಗಿಸುವ ಬಗ್ಗೆ ಮಾಹಿತಿ ಲಭ್ಯವಾದ ಹಿನ್ನೆಲೆ ಕೆ.ಆರ್.ಪುರದಲ್ಲಿ ವಾಹನ ತಡೆದು ಪರಿಶೀಲಿಸಿದಾಗ ಅಕ್ರಮವಾಗಿ ಮದ್ಯ ಸಾಗಾಟ ಮಾಡುತ್ತಿರುವುದು ಗೊತ್ತಾಗಿದೆ.
ಕೆಲ ಬ್ರಾಂಡ್‍ಗಳ ಹೆಸರಿನ ಮದ್ಯ ಬಾಟಲಿಗಳನ್ನು ಸರಬರಾಜು ಮಾಡುತ್ತಿದ್ದು, ಮೇಲ್ನೋಟಕ್ಕೆ ನಕಲಿ ಮದ್ಯ ಎಂಬುವುದು ತಿಳಿದು ಬಂದಿದೆ. ಪ್ರಕರಣದ ಸತ್ಯಾಸತ್ಯತೆ ಬಗ್ಗೆ ಪರಿಶೀಲಿಸಿದಾಗ ಅಸಲು ಅಥವಾ ನಕಲು ಎಂಬುದರ ಬಗ್ಗೆ ನಿಖರವಾಗಿ ತಿಳಿಯಲಿದೆ ಎಂದು ಅಬಕಾರಿ ಇಲಾಖೆಯ ದಕ್ಷಿಣ ವಿಭಾಗದ ಜಂಟಿ ಆಯುಕ್ತ ನಾಗೇಶ್ ಮಾಹಿತಿ ನೀಡಿದ್ದಾರೆ.
ಮದ್ಯ ಬಾಟಲಿಗಳನ್ನು ನ್ಯಾಷನಲ್ ಡಿಸ್ಟ್ರಿಲರಿ ಕಂಪೆನಿಯಿಂದ ವಿತರಣೆ ಮಾಡಿರುವುದಾಗಿ ಬಾಕ್ಸ್ ಗಳ ಮೇಲೆ ಹೆಸರು ನಮೂದಿಸಲಾಗಿದೆ. ಈ ಹೆಸರಿನಲ್ಲಿ ಅಸಲಿ ಕಂಪೆನಿ ಇದೆಯಾ ಎಂಬುದರ ಬಗ್ಗೆ ಗೋವಾಕ್ಕೆ ತೆರಳಿ ಪರಿಶೀಲಿಸಲಾಗುವುದು. ಅಲ್ಲದೇ ಬಾಟಲಿಗಳ ಮೇಲೆ ಬ್ರ್ಯಾಂಡ್ ಹೆಸರು ಸಹ ನಕಲಿಯಾಗಿರುವ ಸಾಧ್ಯತೆಯಿದೆ. ಆರೋಪಿಗಳು ಗೋವಾದಿಂದ ಬೆಳಗಾವಿ ಮಾರ್ಗವಾಗಿ ಬೆಂಗಳೂರು ನಗರಕ್ಕೆ ಮಂಗಳವಾರ ಬೆಳಗ್ಗೆ ಬಂದಿದ್ದು ಹೊಸಕೋಟೆಗೆ ಸಾಗಾಟ ಮಾಡುತ್ತಿರುವ ಬಗ್ಗೆ ಒಪ್ಪಿಕೊಂಡಿದ್ದಾರೆ.
ನಿಖರವಾಗಿ ಯಾರಿಗೆ ಸಾಗಾಟ ಮಾಡುತ್ತಿದ್ದಾರೆಂದು ವಿಚಾರಣೆ ನಡೆಸಿ ತಿಳಿಸಲಾಗುವುದು. ಆರೋಪಿಗಳು ಯಾರಿಗೂ ಅನುಮಾನ ಬಾರದಂತೆ ಕ್ಯಾಂಟರ್ ನ ಕೆಳಭಾಗ ಖಾಲಿ ಬಿಟ್ಟು, ಮೇಲ್ಭಾಗದಲ್ಲಿ ಮದ್ಯದ ಬಾಟಲಿ ಇರುವ 370 ಬಾಕ್ಸ್ ಇಟ್ಟು ಆದಕ್ಕೆ ಟಾರ್ಪೆಲ್ ಹೊದಿಸಿ ಪೊಲೀಸರನ್ನು ಯಮಾರಿಸಿದ್ದರು ಎಂದು ಅಬಕಾರಿ ಅಧಿಕಾರಿಗಳು ವಿವರಿಸಿದ್ದಾರೆ.