ಬೆಂಗಳೂರು| ಫೆ.28ರೊಳಗಾಗಿ ಶೇ.60ರಷ್ಟು ಕನ್ನಡ ಭಾಷೆಯ ನಾಮಫಲಕ ಅಳವಡಿಸಿ: ಬಿಬಿಎಂಪಿ
ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಬರುವ ವಾಣಿಜ್ಯ ಮಳಿಗೆಗಳಲ್ಲಿ ಫೆ.28ರೊಳಗಾಗಿ ಶೇ.60ರಷ್ಟು ಕನ್ನಡ ಭಾಷೆಯ ನಾಮಫಲಕಗಳನ್ನು ಅಳವಡಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ತಿಳಿಸಿದ್ದಾರೆ.
ರವಿವಾರ ನಗರದಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿದ ಅವರು, ಪಾಲಿಕೆ ವ್ಯಾಪ್ತಿಯಲ್ಲಿ ಬರುವ ಅಂಗಡಿ ಮುಂಗಟ್ಟುಗಳು, ಹೋಟೆಲ್‍ಗಳು, ಮಾಲ್ ಸೇರಿದಂತೆ ಇನ್ನಿತರೆ ವಾಣಿಜ್ಯ ಮಳಿಗೆಗಳ ನಾಮಫಲಕಗಳಲ್ಲಿ ಕಡ್ಡಾಯವಾಗಿ ಕನ್ನಡ ಭಾಷೆ ಬಳಸುವ ಸಂಬಂಧ ಎಲ್ಲ ವಲಯ ಆಯುಕ್ತರ ಜೊತೆ ಸಭೆ ನಡೆಸಿ ಸೂಕ್ತ ನಿರ್ದೇಶನ ನೀಡಲಾಗುವುದು ಎಂದು ಹೇಳಿದರು.
ನಗರದಲ್ಲಿ ಆರ್ಟಿರಿಯಲ್ ಹಾಗೂ ಸಬ್ ಆರ್ಟಿರಿಯಲ್ ರಸ್ತೆಗಳು 1400 ಕಿ.ಮೀ.ನಷ್ಟಿದ್ದು, ಸದರಿ ರಸ್ತೆಗಳಲ್ಲಿ ಬರುವ ಎಲ್ಲ ವಾಣಿಜ್ಯ ಮಳಿಗೆಗಳನ್ನು ವಲಯವಾರು ಸರ್ವೆ ಮಾಡಿಸಲಾಗುವುದು. ಸರ್ವೇಯ ನಂತರ ಶೇ.60ರಷ್ಟು ಕನ್ನಡ ಭಾಷೆ ಬಳಸದ ಮಳಿಗೆಗಳಿಗೆ ನೋಟಿಸ್ ನೀಡಲಾಗುವುದು. ನೋಟಿಸ್ ನೀಡಿದ ಬಳಿಕ ಫೆ.28ರವರೆಗೆ ಸಮಯಾವಕಾಶ ನೀಡಿ ಕಡ್ಡಾಯವಾಗಿ ಕನ್ನಡ ಭಾಷೆಯ ನಾಮಫಲಕಗಳನ್ನು ಅಳವಡಿಸಿ ಅನುಷ್ಠಾನಗೊಳಿಸಿ ಆಯಾ ವಲಯ ಆಯುಕ್ತರಿಗೆ ಅನುಪಾಲನೆ ಸಲ್ಲಿಸಬೇಕು ಎಂದರು.
ನಗರದಲ್ಲಿರುವ ಅಂಗಡಿ ಮುಂಗಟ್ಟುಗಳಲ್ಲಿ ಕನ್ನಡ ನಾಮಫಲಕ ಹಾಕದೇ ಇರುವವರ ಮೇಲೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು. ಸರಕಾರದ ಆದೇಶ ಹಾಗೂ ಪಾಲಿಕೆ ಸುತ್ತೋಲೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಲಾಗುವುದು ಎಂದು ಅವರು ಹೇಳಿದರು.
ಫೆ.28ರೊಳಗಾಗಿ ಕನ್ನಡ ನಾಮಫಲಕಗಳನ್ನು ಅಳವಡಿಕೊಳ್ಳದ ಅಂಗಡಿ ಮೇಲೆ ಕಾನೂನು ಕ್ರಮ ಜರುಗಿಸಲಾಗುವುದು. ಅದರಂತೆ ನಾಮಫಲಕಗಳಲ್ಲಿ ಕನ್ನಡ ಭಾಷೆಯನ್ನು ಬಳಸದ ಅಂಗಡಿ ಮುಂಗಟ್ಟುಗಳನ್ನು ಕಾನೂನಿನ ಪ್ರಕಾರ ಅಮಾನತಿನಲ್ಲಿಟ್ಟು ತದನಂತರ ಪರವಾನಗಿಯನ್ನು ರದ್ದುಗೊಳಿಸಲಾಗುವುದು. ಜೊತೆಗೆ ಸರಿಯಾಗಿ ಕಾರ್ಯನಿರ್ವಹಿಸದ ಅಧಿಕಾರಿಯ ಮೇಲೂ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಅವರು ತಿಳಿಸಿದರು.
ನಗರದಲ್ಲಿ ಬರುವ ದೊಡ್ಡ ದೊಡ್ಡ ಮಾಲ್ ಗಳ ಜೊತೆ ಕೂಡಲೇ ಸಮಾಲೋಚನೆ ನಡೆಸಿ ಮಾಲ್‍ಗಳಲ್ಲಿರುವ ಎಲ್ಲ ಮಳಿಗೆಗಳಲ್ಲಿ 20 ದಿನಗಳೊಳಗಾಗಿ ನಾಮಫಲಕಗಳಲ್ಲಿ ಕನ್ನಡ ಭಾಷೆಯನ್ನು ಅಳವಡಿಸಿಕೊಳ್ಳಬೇಕು. ಇಲ್ಲವಾದರೆ ಕಾನೂನು ಪ್ರಕಾರ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದರು.
ಸಭೆಯಲ್ಲಿ ಉಪ ಆಯುಕ್ತ ಮಂಜುನಾಥ ಸ್ವಾಮಿ, ಮುಖ್ಯ ಅಭಿಯಂತರರಾದ ಪ್ರವೀಣ್ ಲಿಂಗಯ್ಯ, ಕನ್ನಡ ಸಂಘದ ಪ್ರತಿನಿಧಿಗಳು ಸೇರಿದಂತೆ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.