ಬೆಂಗಳೂರು | ಉದ್ಯೋಗದ ಆಮಿಷವೊಡ್ಡಿ ವಂಚನೆ: 9 ಮಂದಿ ವಶಕ್ಕೆ

Update: 2024-01-30 14:40 GMT

ಬೆಂಗಳೂರು: ಸಾರ್ವಜನಿಕರಿಗೆ ವಾಟ್ಸಾಪ್ ಮತ್ತು ಟೆಲಿಗ್ರಾಮ್ ಆ್ಯಪ್‍ಗಳ ಮೂಲಕ ವರ್ಕ್ ಫ್ರಂ ಹೋಮ್ ಕೆಲಸ ನೀಡುವುದಾಗಿ ನಂಬಿಸಿ ಸಾರ್ವಜನಿಕರಿಂದ ಲಕ್ಷಾಂತರ ರೂ. ಹಣವನ್ನು ಹೂಡಿಕೆ ಮಾಡಿಸಿ ವಂಚಿಸುತ್ತಿದ್ದ 11 ಜನರ ಪೈಕಿ 9 ಮಂದಿಯನ್ನು ನಗರದ ಸೈಬರ್ ಕ್ರೈಂ ಪೊಲೀಸರು ವಶಕ್ಕೆ ಪಡೆದಿರುವುದಾಗಿ ವರದಿಯಾಗಿದೆ.

2023ರ ಆಗಸ್ಟ್ 18ರಂದು ಬಿ.ಇ.ಎಲ್ ಲೇಔಟ್‍ನ ವಿದ್ಯಾರಣ್ಯಪುರದ ನಿವಾಸಿಯೊಬ್ಬರು ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ದೂರು ನೀಡಿ, ‘ಯಾರೋ ಅಪರಿಚಿತ ವ್ಯಕ್ತಿಗಳು ತಮ್ಮ ವಾಟ್ಸಪ್ ನಂಬರ್ ಗೆ ಸಂದೇಶ ಕಳಿಸಿದ್ದು, ಅದರಲ್ಲಿ ವರ್ಕ್ ಫ್ರಂ ಹೋಮ್ ಕೆಲಸ ನೀಡುತ್ತೇವೆಂದು ಮತ್ತು ದಿನಕ್ಕೆ 500 ರೂ.ಗಳಿಂದ 10,000 ರೂ. ಹಣವನ್ನು ಗಳಿಸಬಹುದು ಎಂದು ನಂಬಿಸಿ, ಆಮಿಷವೊಡ್ಡಿದ್ದಾರೆ’ ಎಂದು ಆರೋಪಿಸಿದ್ದರು.

ಅವರ ಬ್ಯಾಂಕ್ ಖಾತೆಯಿಂದ ಹಂತ ಹಂತವಾಗಿ ಒಟ್ಟು 18.75 ಲಕ್ಷ ರೂ. ಹಣವನ್ನು ವಿವಿಧ 12 ಬ್ಯಾಂಕ್ ಖಾತೆಗಳಿಗೆ ಆನ್‍ಲೈನ್ ಮುಖಾಂತರ ವರ್ಗಾವಣೆ ಮಾಡಿಸಿಕೊಂಡು ಮೋಸ ಮಾಡಿರುತ್ತಾರೆ ಎಂದು ವಿದ್ಯಾರಣ್ಯಪುರದ ನಿವಾಸಿಯು ತಮ್ಮ ದೂರಿನಲ್ಲಿ ತಿಳಿಸಿದ್ದರು. ಈ ಕುರಿತು ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣವೂ ದಾಖಲಾಗಿತ್ತು.

ಈ ಪ್ರಕರಣದ ತನಿಖೆ ಕೈಗೊಂಡ ಸೈಬರ್ ಕ್ರೈಂ ಪೊಲೀಸರು, ವಿವಿಧ ಬ್ಯಾಂಕ್‍ಗಳ ಖಾತೆಗಳಿಗೆ ಹಣವು ವರ್ಗಾವಣೆಯಾಗಿರುವ ಖಾತೆಗಳ ಖಾತೆದಾರರ ವಿವರಗಳನ್ನು ಸಂಪೂರ್ಣವಾಗಿ ಪಡೆದುಕೊಂಡಿದ್ದಾರೆ. ನಂತರ ತನಿಖೆ ಮುಂದುವರೆಸಿದ್ದು, ಈ ಜಾಲದಲ್ಲಿ ತೊಡಗಿಸಿಕೊಂಡಿದ್ದ ಬೆಂಗಳೂರು ನಗರ, ಹೈದ್ರಾಬಾದ್, ಮುಂಬೈ ಸೇರಿದಂತೆ ವಿವಿಧ ಕಡೆಗಳ ಒಟ್ಟು 11 ಮಂದಿ ಆರೋಪಿಗಳ ಪೈಕಿ 9 ಮಂದಿಯನ್ನು ವಶಕ್ಕೆ ಪಡೆದುಕೊಂಡಿದ್ದು, ಇಬ್ಬರು ತಲೆಮರೆಸಿಕೊಂಡಿದ್ದಾರೆ.

ದೇಶಾದ್ಯಂತ  28 ರಾಜ್ಯಗಳಿಂದ ಒಟ್ಟು 2,143 ಪ್ರಕರಣಗಳು ಎನ್.ಸಿ.ಆರ್.ಪಿ ಪೋರ್ಟಲ್‍ನಲ್ಲಿ ದಾಖಲಾಗಿರುತ್ತದೆ. ಕರ್ನಾಟಕ ರಾಜ್ಯದಲ್ಲಿನ ವಿವಿಧ ಜಿಲ್ಲೆಗಳಿಂದ ಒಟ್ಟು 265 ಪ್ರಕರಣಗಳು ದಾಖಲಾಗಿದ್ದು, ಬೆಂಗಳೂರು ನಗರದಲ್ಲಿ ವಿವಿಧ 14 ಪೊಲೀಸ್ ಠಾಣೆಗಳಿಂದ ಒಟ್ಟು 135 ಪ್ರಕರಣಗಳು ದಾಖಲಾಗಿರುವುದು ತನಿಖೆಯಿಂದ ತಿಳಿದುಬಂದಿದೆ.

ಆರೋಪಿಗಳಿಂದ ಮೊಬೈಲ್‍ಗಳು, ಬ್ಯಾಂಕ್ ಖಾತೆಗಳು, ಲ್ಯಾಪ್‍ಟಾಪ್‍ಗಳು, ಚೆಕ್‍ಬುಕ್‍ಗಳು ಸೇರಿದಂತೆ ಹಲವು ವಸ್ತುಗಳನ್ನು ವಶಕ್ಕೆ ಪಡೆಯಲಾಗಿದ್ದು, ತನಿಖೆ ಮತ್ತಷ್ಟು ತೀವ್ರವಾಗಿ ಮುಂದುವರೆಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News