ಬೆಂಗಳೂರು | ರುಕ್ಸಾನಾ ಕೊಲೆ ಪ್ರಕರಣವನ್ನು ಭೇದಿಸಿದ ಪೊಲೀಸರು : ಆರೋಪಿ ಪ್ರದೀಪ್ ಬಂಧನ
ಬೆಂಗಳೂರು : ರುಕ್ಸಾನಾ ಎಂಬ ಮಹಿಳೆಯನ್ನು ಹತ್ಯೆಗೈದ ಆರೋಪದಲ್ಲಿ ಪೊಲೀಸರು ಬೆಂಗಳೂರು ನಿವಾಸಿ ಪ್ರದೀಪ್ ಎಂಬಾತನನ್ನು ರವಿವಾರ ಬಂಧಿಸಿದ್ದಾರೆ.
ಆತನ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 302 (ಹತ್ಯೆಗೆ ಶಿಕ್ಷೆ) ಹಾಗೂ 201 (ಅಪರಾಧದ ಸಾಕ್ಷ್ಯಗಳನ್ನು ನಾಶ ಮಾಡಿದ ಆರೋಪ) ಅಡಿ ಪ್ರಕರಣ ದಾಖಲಿಸಲಾಗಿದೆ.
ಕಳೆದ ಮಾರ್ಚ್ 31ರಂದು ಪೊಲೀಸರು 21 ವರ್ಷದ ರುಕ್ಸಾನಾಳ ಸುಟ್ಟು ಕರಕಲಾಗಿದ್ದ ದೇಹವನ್ನು ಪತ್ತೆ ಹಚ್ಚಿದ್ದರು. ಪೊಲೀಸರ ಪ್ರಕಾರ, ವಿವಾಹವಾಗುವುದಾಗಿ ನಂಬಿಸಿ ರುಕ್ಸಾನಾಳೊಂದಿಗೆ ಪ್ರದೀಪ್ ಸಂಬಂಧ ಬೆಳೆಸಿದ್ದ. ಮೈಸೂರಿನಲ್ಲಿ ಉದ್ಯೋಗ ಮಾಡುತ್ತಿದ್ದಾಗ ರುಕ್ಸಾನಾ ತನ್ನ ಮಗುವಿನೊಂದಿಗೆ ಪ್ರದೀಪ್ ನನ್ನು ಭೇಟಿಯಾಗಿದ್ದಳು. ಆದರೆ, ಪ್ರದೀಪ್ ಗೆ ಅದಾಗಲೇ ವಿವಾಹವಾಗಿದ್ದುದರಿಂದ ಆತ ರುಕ್ಸಾನಾಳನ್ನು ವಿವಾಹವಾಗಲು ನಿರಾಕರಿಸಿದ್ದ ಎಂದು ಹೇಳಲಾಗಿದೆ.
ಈ ಮಧ್ಯೆ, ಬೆಂಗಳೂರಿನಲ್ಲಿರುವ ಪ್ರದೀಪ್ ಮನೆಗೆ ಪದೇ ಪದೇ ಭೇಟಿ ನೀಡುತ್ತಿದ್ದ ರುಕ್ಸಾನಾ, ತನ್ನನ್ನು ವಿವಾಹವಾಗುವಂತೆ ಆತನ ಮೇಲೆ ಒತ್ತಡ ಹೇರುತ್ತಿದ್ದಳು ಎನ್ನಲಾಗಿದೆ. ನಾನು ರುಕ್ಸಾನಾಳ ಕಿರುಕುಳದಿಂದ ದಣಿದಿದ್ದರಿಂದ, ನಾನು ಆಕೆಯನ್ನು ಹತ್ಯೆಗೈಯ್ಯಲು ನಿರ್ಧರಿಸಿದೆ ಎಂದು ಪೊಲೀಸರಿಗೆ ಪ್ರದೀಪ್ ತಿಳಿಸಿದ್ದಾನೆ.
ಕಡೂರಿನಲ್ಲಿರುವ ತನ್ನ ಗ್ರಾಮಕ್ಕೆ ರುಕ್ಸಾನಾ ಹಾಗೂ ಮಗುವನ್ನು ಪ್ರದೀಪ್ ಕರೆದುಕೊಂಡು ಹೋಗಿದ್ದ. ಬೆಂಗಳೂರಿಗೆ ಮರಳುವಾಗ, ರುಕ್ಸಾನಾಳನ್ನು ಹತ್ಯೆಗೈದಿದ್ದ ಪ್ರದೀಪ್, ಆಕೆಯ ಮೃತದೇಹವನ್ನು ತುಮಕೂರಿನ ಬಳಿ ಸುಟ್ಟು ಹಾಕಿದ್ದ. ಮಗುವನ್ನು ಬೆಂಗಳೂರಿಗೆ ಕರೆ ತಂದಿದ್ದ ಪ್ರದೀಪ್, ಅದನ್ನು ತಳ್ಳು ಗಾಡಿಯ ಮೇಲೆ ಅನಾಥವಾಗಿ ಬಿಟ್ಟು ಹೋಗಿದ್ದ ಎಂದು ಪೊಲೀಸರು ಬಹಿರಂಗಪಡಿಸಿದ್ದಾರೆ.
ಆ ಮಗುವು ತಳ್ಳು ಗಾಡಿಯ ಮಾಲಕನಿಗೆ ದೊರೆತಿದ್ದು, ಆತ ಅದನ್ನು ಬೆಂಗಳೂರು ಉತ್ತರ ವಲಯದ ಬಾಗಲಗುಂಟೆ ಪೊಲೀಸ್ ಠಾಣೆಗೆ ಒಪ್ಪಿಸಿದ್ದ ಎಂದು ಹೇಳಲಾಗುತ್ತಿದೆ.