ಬೆಂಗಳೂರು | ರೌಡಿಶೀಟರ್ ಹತ್ಯೆ ಪ್ರಕರಣ: ನಾಲ್ವರು ಸೆರೆ

Update: 2024-01-27 14:16 GMT

ಬೆಂಗಳೂರು: ರೌಡಿಶೀಟರ್ ಸತೀಶ್ ಯಾನೆ ಮಿಲ್ಟ್ರಿ ಸತೀಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ಇಲ್ಲಿನ ವಿವೇಕನಗರ ಠಾಣಾ ಪೊಲೀಸರು ಬಂಧಿಸಿರುವುದಾಗಿ ವರದಿಯಾಗಿದೆ.

ಪ್ರಶಾಂತ್, ಧನುಷ್, ಕ್ಲೆಮೆಂಟ್ ಹಾಗೂ ಸುನೀಲ್ ಎಂಬುವರನ್ನು ಬಂಧಿತ ಆರೋಪಿಗಳು ಎಂದು ಗುರುತಿಸಲಾಗಿದೆ. ಜ. 24ರಂದು ರಾತ್ರಿ ವಿವೇಕನಗರದ ಮಾಯಾಬಜಾರಿನ ಮನೆಯಲ್ಲಿ ಮಲಗಿದ್ದ ರೌಡಿಶೀಟರ್ ಸತೀಶ್‍ನನ್ನು ಐವರು ಆರೋಪಿಗಳ ತಂಡ ಮಾರಕಾಸ್ತ್ರಗಳಿಂದ ಹತ್ಯೆ ಮಾಡಿತ್ತು.

ಈ ಪ್ರಕರಣದ ಕುರಿತು ಕೇಂದ್ರ ವಿಭಾಗದ ಡಿಸಿಪಿ ಶೇಖರ್ ಎಚ್.ಟಿ. ಮಾತನಾಡಿ, ರೌಡಿಶೀಟರ್ ಸತೀಶ್ ಕೊಲೆ ಪ್ರಕರಣದ ಬಂಧಿತರೆಲ್ಲರೂ 18 ರಿಂದ 20 ವರ್ಷ ವಯಸ್ಸಿನವರಾಗಿದ್ದು, ಬೆಂಗಳೂರಿನ ಆಡುಗೋಡಿ, ಅಶೋಕನಗರ ನಿವಾಸಿಗಳಾಗಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

ಹತ್ಯೆಯಾದ ಸತೀಶ್ ಆರೋಪಿಗಳಿಗೆ ಸಣ್ಣಪುಟ್ಟ ವಿಚಾರಗಳಿಗೆ ಅವಾಚ್ಯವಾಗಿ ನಿಂದಿಸಿ ಹಲ್ಲೆ ಮಾಡುತ್ತಿದ್ದ. ಹತ್ಯೆ ಆಗುವುದಕ್ಕೂ ಹಿಂದಿನ ದಿನ ಸಹ ಬಾರ್ ವೊಂದರಲ್ಲಿ ಮುಖಾಮುಖಿಯಾದ ಆರೋಪಿಗಳಿಗೆ ಎಲ್ಲರ ಎದುರು ಅವಾಚ್ಯವಾಗಿ ನಿಂದಿಸಿ ಬೆದರಿಕೆಯೊಡ್ಡಿದ್ದ. ಸತೀಶ್‍ನ ಉಪಟಳದಿಂದ ಬೇಸತ್ತು ಆತನ ಹತ್ಯೆಗೆ ಸಂಚು ರೂಪಿಸಿದ್ದ ಆರೋಪಿಗಳು, ಜನವರಿ 24ರಂದು ರಾತ್ರಿ ಆತ ತನ್ನ ಮನೆಗೆ ಹೋಗುವಾಗ ಹಿಂಬಾಲಿಸಿದ್ದರು. ಮಧ್ಯರಾತ್ರಿ ಮನೆಗೆ ನುಗ್ಗಿ ಪತ್ನಿ ಪಕ್ಕದಲ್ಲಿ ಮಲಗಿದ್ದಾಗಲೇ ಆತನ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ಪರಾರಿಯಾಗಿದ್ದರು ಎಂದು ಡಿಸಿಪಿ ಶೇಖರ್ ಎಚ್.ಟಿ. ತಿಳಿಸಿದ್ದಾರೆ.

ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದ ವಿವೇಕನಗರ ಠಾಣಾ ಪೊಲೀಸರು ಸದ್ಯ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿಗಳ ಪೈಕಿ ಒಬ್ಬನ ವಿರುದ್ಧ ಈ ಹಿಂದೆ ಹತ್ಯಾ ಯತ್ನ ಪ್ರಕರಣ ಹಾಗೂ ಓರ್ವನ ವಿರುದ್ಧ ಕಳ್ಳತನದ ಪ್ರಕರಣ ದಾಖಲಾಗಿರುವುದು ತನಿಖೆಯಲ್ಲಿ ತಿಳಿದು ಬಂದಿದ್ದು, ಹೆಚ್ಚಿನ ವಿಚಾರಣೆ ನಡೆಸಲಾಗುತ್ತಿದೆ ಎಂದು ಡಿಸಿಪಿ ಶೇಖರ್ ಎಚ್.ಟಿ. ಮಾಹಿತಿ ನೀಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News