ಬೆಂಗಳೂರು | ಅತಿ ಹೆಚ್ಚು ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡ 830 ವಸತಿಯೇತರ ಕಟ್ಟಡಗಳಿಗೆ ಬೀಗ
ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ8 ವಲಯಗಳಲ್ಲಿ ಅತಿ ಹೆಚ್ಚು ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿರುವ ಸುಸ್ತಿದಾರರಿಂದ ತ್ವರಿತಗತಿಯಲ್ಲಿ ತೆರಿಗೆಯನ್ನು ಸಂಗ್ರಹಿಸಲಾಗುತ್ತಿದ್ದು, ಅತಿ ಹೆಚ್ಚು ತೆರಿಗೆ ಬಾಕಿ ಉಳಿಸಿಕೊಂಡಿರುವ 830 ವಸತಿಯೇತರ ಕಟ್ಟಡಗಳಿಗೆ ಬೀಗ ಮುದ್ರೆ ಹಾಕಲಾಗಿದೆ.
ಪಾಲಿಕೆಯ ಈ ಪೈಕಿ ಆಯಾ ವಲಯಗಳಲ್ಲಿ ಹೆಚ್ಚು ಬಾಕಿ ಉಳಿಸಿಕೊಂಡಿರುವ ವಸತಿಯೇತರ ಕಟ್ಟಡಗಳಿಗೆ ಬೀಗ ಮುದ್ರೆ ಹಾಕಿ ತ್ವರಿತಗತಿಯಲ್ಲಿ ಬಾಕಿ ಆಸ್ತಿ ತೆರಿಗೆಯನ್ನು ಸಂಗ್ರಹಿಸಲು ಕ್ರಮವಹಿಸಲಾಗುತ್ತಿದೆ. ಎಲ್ಲ ಪರಿಷ್ಕರಣೆ ಪ್ರಕರಣಗಳಲ್ಲಿ, ಆಸ್ತಿಗಳಿಗೆ ಬೀಗಮುದ್ರೆ, ಮುಟ್ಟುಗೋಲು ಮತ್ತು ಜಪ್ತಿ ಮಾರಾಟವನ್ನು ಬಳಸಿಕೊಂಡು ವಸೂಲಾತಿ ಮಾಡಬೇಕಿದೆ.
ಕಳೆದ 24 ಗಂಟೆಗಳಲ್ಲಿ ಎಲ್ಲ 8 ವಲಯಗಳು ಸೇರಿದಂತೆ 182 ವಸತಿಯೇತರ ಕಟ್ಟಡಗಳಿಗೆ ಬೀಗಮುದ್ರೆ ಹಾಕಲಾಗಿದೆ. ಆಯಾ ವಲಯ ವ್ಯಾಪ್ತಿಯಲ್ಲಿ ಆಸ್ತಿ ತೆರಿಗೆ ಸಂಗ್ರಹಿಸುವ ವಿಚಾರವಾಗಿ ಸೂಕ್ತ ಕ್ರಮಗಳನ್ನು ಕೈಗೊಳ್ಳಲು ವಲಯ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.
ಬೊಮ್ಮನಹಳ್ಳಿ ವಲಯದಲ್ಲಿ 45, ದಾಸರಹಳ್ಳಿ 35, ಪೂರ್ವ ವಲಯ 231, ಮಹದೇವಪುರ 69, ಆರ್.ಆರ್. ನಗರ 69, ದಕ್ಷಿಣ ವಲಯ 115, ಪಶ್ಚಿಮ ವಲಯ 226, ಯಲಹಂಕ 40 ವಸತಿಯೇತರ ಕಟ್ಟಡಗಳಿಗೆ ಸೇರಿ ನಗರದಲ್ಲಿ ಒಟ್ಟು 830 ಕಟ್ಟಡಗಳಿಗೆ ಬೀಗವನ್ನು ಹಾಕಲಾಗಿದೆ ಎಂದು ಬಿಬಿಎಂಪಿಯ ಕಂದಾಯ ವಿಭಾಗದ ವಿಶೇಷ ಆಯಕ್ತ ಮುನೀಶ್ ಮೌದ್ಗಿಲ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.