ಬೆಂಗಳೂರು | ರಾಸಾಯನಿಕ ಔಷಧ ಕುಡಿದು ಬಾಲಕಿ ಮೃತ್ಯು
Update: 2025-04-02 18:57 IST
ಸಾಂದರ್ಭಿಕ ಚಿತ್ರ
ಬೆಂಗಳೂರು: ಜ್ಯೂಸ್ ಬಾಟಲಿಯಲ್ಲಿ ತುಂಬಿಟ್ಟ ರಾಸಾಯನಿಕ ಔಷಧ ಕುಡಿದು ಬಾಲಕಿ ಸಾವನ್ನಪ್ಪಿದ ಘಟನೆ ಇಲ್ಲಿನ ಬ್ಯಾಟರಾಯನಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ನಿಧಿ ಕೃಷ್ಣ (14) ಸಾವನ್ನಪ್ಪಿದ ಬಾಲಕಿ ಎಂದು ಪೊಲೀಸರು ಗುರುತಿಸಿದ್ದಾರೆ.
9ನೇ ತರಗತಿ ಓದುತ್ತಿದ್ದ ನಿಧಿ ಕೃಷ್ಣ ಆರೋಗ್ಯಕ್ಕಾಗಿ ಅಲೋವೆರಾ ಜ್ಯೂಸ್ ಕುಡಿಯುತ್ತಿದ್ದಳು. ಆದರೆ ಖಾಲಿಯಾಗಿದ್ದ ಅಲೋವೆರಾ ಜ್ಯೂಸ್ ಬಾಟಲಿಯಲ್ಲಿ ಕೃಷಿಗೆ (ಗಿಡಗಳಿಗೆ) ಬಳಸುವ ರಾಸಾಯನಿಕ ಔಷಧವನ್ನು ಮನೆಯವರು ತುಂಬಿಟ್ಟಿದ್ದರು. ಅದನ್ನು ತಿಳಿಯದೆ ಮಾ.14ರಂದು ಜ್ಯೂಸ್ ಎಂದುಕೊಂಡು ಸೇವಿಸಿದ್ದಾಳೆ ಎನ್ನಲಾಗಿದೆ.
ತೀವ್ರ ಅಸ್ವಸ್ಥಳಾಗಿದ್ದ ಬಾಲಕಿಯನ್ನು ಚಿಕಿತ್ಸೆಗೆ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಮಾ.31ರಂದು ಸಾವನ್ನಪ್ಪಿದ್ದಾಳೆ. ಘಟನೆ ಸಂಬಂಧ ಬ್ಯಾಟರಾಯನಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.