ಶೋಷಿತರು ದುರ್ಬಲರೆನ್ನುವ ಮನೋಭಾವ ತೆಗೆದು ಹಾಕಬೇಕು: ಡಿ.ಕೆ.ಶಿವಕುಮಾರ್

Update: 2025-04-05 19:39 IST
ಶೋಷಿತರು ದುರ್ಬಲರೆನ್ನುವ ಮನೋಭಾವ ತೆಗೆದು ಹಾಕಬೇಕು: ಡಿ.ಕೆ.ಶಿವಕುಮಾರ್
  • whatsapp icon

ಬೆಂಗಳೂರು : ಹಿಂದುಳಿದ, ದಲಿತ, ಅಲ್ಪಸಂಖ್ಯಾತರು ಸೇರಿದಂತೆ ಶೋಷಿತ ವರ್ಗಕ್ಕೆ ಸೇರಿದ ಜನರು ಎಂದಿಗೂ ದುರ್ಬಲರು ಎನ್ನುವ ಭಾವನೆ ಇಟ್ಟುಕೊಳ್ಳಬಾರದು. ಇಂತಹ ಮನೋಭಾವವನ್ನು ಮನಸ್ಸಿನಿಂದ ತೆಗೆದುಹಾಕಬೇಕು ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅಭಿಪ್ರಾಯಪಟ್ಟಿದ್ದಾರೆ.

ಶನಿವಾರ ನಗರದ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ನಡೆದ ಬಾಬು ಜಗಜೀವನ್ ರಾಮ್ ಅವರ 118ನೇ ಜನ್ಮದಿನ ಕಾರ್ಯಕ್ರಮದಲ್ಲಿ ಶಿವಕುಮಾರ್ ಅವರು ಮಾತನಾಡಿದರು.

ಮಾನವೀಯತೆ ಮೇಲೆ ನಾವು ಕೆಲಸ ಮಾಡಬೇಕು. ನಮ್ಮ ಆಲೋಚನೆಗಳೇ ನಮ್ಮನ್ನು ರೂಪಿಸುತ್ತವೆ. ಎಲ್ಲರಿಗೂ ತಮ್ಮದೇ ಆದ ಸಾಮರ್ಥ್ಯವಿರುತ್ತದೆ. ವಿದ್ಯಾರ್ಥಿ ನಾಯಕ ನಾಯಕರಾಗಿ ಬೆಳೆದು ದೇಶದ ಇತಿಹಾಸದಲ್ಲಿ ಅತಿ ಹೆಚ್ಚು ವರ್ಷಗಳ ಕಾಲ ಸಚಿವರಾಗಿ ಕಾರ್ಯನಿರ್ವಹಿಸಿದ ಹೆಗ್ಗಳಿಕೆ ಬಾಬು ಜಗಜೀವನ್ ರಾಮ್ ಅವರದ್ದು ಎಂದರು.

ಆಡು ಮುಟ್ಟದ ಸೊಪ್ಪಿಲ್ಲ ಜಗಜೀವನ ರಾಮ್ ಅವರು ನಿರ್ವಹಿಸದೇ ಇರುವ ಖಾತೆಗಳಿಲ್ಲ. ಕೃಷಿ, ರಕ್ಷಣಾ ಸಚಿವರಾಗಿ ತೆಗೆದುಕೊಂಡ ದಿಟ್ಟ ನಿರ್ಧಾರಗಳು ಇತಿಹಾಸದಲ್ಲಿ ದಾಖಲಾಗಿವೆ. ಒಬ್ಬ ವ್ಯಕ್ತಿ ಹುಟ್ಟಿನಿಂದ ದೊಡ್ಡವನಾಗುವುದಿಲ್ಲ. ಕೆಲಸ ಹಾಗೂ ಗುಣಗಳಿಂದ ದೊಡ್ಡವನಾಗುತ್ತಾನೆ ಎಂಬುದಕ್ಕೆ ಬಾಬು ಜಗಜೀವನರಾಮ್ ಅವರೇ ದೊಡ್ಡ ಉದಾಹರಣೆ. ದನಿ ಇಲ್ಲದವರಿಗೆ ದನಿ ನೀಡಿದ ನಾಯಕ. ತುರ್ತು ಪರಿಸ್ಥಿತಿ ಕಾಲದಲ್ಲಿ ಇಂದಿರಾಗಾಂಧಿ ಅವರೊಟ್ಟಿಗೆ ಭಿನ್ನಾಭಿಪ್ರಾಯ ಮೂಡಿತು. ನಂತರ ಮೂರಾರ್ಜಿ ದೇಸಾಯಿ ಅವರ ಸಂಪುಟಕ್ಕೂ ರಾಜೀನಾಮೆ ನೀಡಿದರು ಎಂದರು.

ದಿಲ್ಲಿಯಲ್ಲಿ ಯುವ ಕಾಂಗ್ರೆಸ್ ಸಮಾವೇಶ ನಡೆಯುತ್ತಿತ್ತು. ಆಗ ರಾಜೀವ್ ಗಾಂಧಿ ಅವರನ್ನು ಭೇಟಿ ಮಾಡಲು ತೆರಳಿದಾಗ ಹಿರಿಯ ನಾಯಕರೊಬ್ಬರು ಅಲ್ಲಿಗೆ ದಿಢೀರ್ ಬಂದರು. ಆಗ ಅವರ ಬಳಿಗೆ ರಾಜೀವ್ ಗಾಂಧಿ ಅವರು ಓಡೋಡಿ ಬಂದರು. ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ಮಾತನಾಡಿದರು. ನಾನು ಏನು ಎಂದು ರಾಜೀವ್ ಗಾಂಧಿ ಅವರ ಬಳಿ ಕೇಳಿದೆ. ಅವರು ಬಾಬು ಜಗಜೀವನ್ ರಾಮ್. ಅವರಿಗೆ ನನ್ನ ಆಪ್ತ ಸಹಾಯಕರು ಭೇಟಿಗೆ ಸಮಯ ನೀಡಿರಲಿಲ್ಲ. ಅವರು ಹಿರಿಯರು ನಮ್ಮ ತಾಯಿಯವರ ಜೊತೆ ಕೆಲಸ ಮಾಡಿದವರು. ಅನೇಕ ಭಿನ್ನಾಭಿಪ್ರಾಯದಿಂದ ಪಕ್ಷ ತೊರೆದಿದ್ದರು. ಈಗ ಕೊನೆಯದಾಗಿ ಕಾಂಗ್ರೆಸ್ಸಿಗನಾಗಿ ಸಾಯಬೇಕು ಎನ್ನುವ ಅಭಿಲಾಷೆ ವ್ಯಕ್ತಪಡಿಸಿದರು. ಇದನ್ನು ಕೇಳಿ ನಾನು ಕಣ್ಣಲ್ಲಿ ನೀರು ತುಂಬಿಕೊಂಡೆ. ಈ ಘಟನೆ ನೆನಪಿಗೆ ಅಂದಿನ ಫೋಟೋವನ್ನು ಇಟ್ಟುಕೊಂಡಿದ್ದೇನೆ ಎಂದು ಹಳೆಯ ಘಟನೆಯನ್ನು ಮೆಲುಕು ಹಾಕಿದರು.

ಕಾಂಗ್ರೆಸ್ ಇತಿಹಾಸದ ಬಗ್ಗೆ ವಸ್ತುಪ್ರದರ್ಶನ ಏರ್ಪಡಿಸುವ ಬಗೆಗಿನ ಸಮಿತಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರು ಜವಾಬ್ದಾರಿವಹಿಸಿಕೊಳ್ಳುವಿರಾ ಎಂದು ಡಿಸಿಎಂ ಅವರು ವೇದಿಕೆಯಲ್ಲಿಯೇ ಕೇಳಿದರು. ಆಗ ಇವರು ನಮ್ಮ ಹಳೇ ಹುಲಿ ಎಂದು ಹಾಸ್ಯ ಚಟಾಕಿ ಹಾರಿಸಿದರು.

ಈ ಸಂದರ್ಭದಲ್ಲಿ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಯುವ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥಗೌಡ ಮತ್ತಿತರರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News