ಉದ್ಯೋಗ ನೀಡುವ ಜೊತೆಗೆ ಉತ್ತಮ ಸಂಬಳವನ್ನ ನೀಡಿ : ಡಾ. ಶರಣ್ ಪ್ರಕಾಶ್ ಪಾಟೀಲ್
ಬೆಂಗಳೂರು : ಬೃಹತ್ ಉದ್ಯೋಗ ಮೇಳಗಳಲ್ಲಿ ಕಂಪೆನಿಗಳು ಅರ್ಹರಿಗೆ ಉದ್ಯೋಗ ನೀಡುತ್ತಿರುವುದು ಮಹತ್ಕಾರ್ಹವಾಗಿದೆ. ಇದರ ಜೊತೆಗೆ ಉದ್ಯೋಗ ಪಡೆಯುವವರು ಉತ್ತಮ ರೀತಿನಲ್ಲಿ ಜೀವನ ಸಾಗಿಸಲು ಅನುವಾಗುವಂತೆ ವೇತನ ನೀಡಿ ಎಂದು ಕೌಶಲ್ಯಾಭಿವೃದ್ಧಿ ಮತ್ತು ಜೀವನೋಪಾಯ ಸಚಿವ ಡಾ.ಶರಣ್ ಪ್ರಕಾಶ್ ಪಾಟೀಲ್ ಸಲಹೆ ನೀಡಿದ್ದಾರೆ.
ಶನಿವಾರ ನಗರದ ಸರ್ ಎಂವಿ ಸಭಾಂಗಣದಲ್ಲಿ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾ ಸಂಸ್ಥೆ ವತಿಯಿದ ಆಯೋಜಿಸಿದ್ದ ‘ಎಫ್‍ಕೆಸಿಸಿಐ ಉದ್ಯೋಗ ಉತ್ಸವ್ 2025-26’ ಉದ್ಘಾಟಿಸಿ ಮಾತನಾಡಿದ ಅವರು, ಬೆಂಗಳೂರು, ಕಲಬುರಗಿ, ಹುಬ್ಬಳಿ, ಬೆಳಗಾವಿ, ಮಂಗಳೂರಿನಲ್ಲಿ ಕೆಲಸಕ್ಕೆ ಹೋಗುವ ವ್ಯಕ್ತಿಗೆ ಜೀವನ ಸಾಗಿಸಲು ಕೈ ತುಂಬಾ ಸಂಬಳ ಬೇಕಾಗುತ್ತದೆ. ಒಂದು ವೇಳೆ ಸಂಬಳ ಸಿಗದಿದ್ದರೆ ಆತ ಮತ್ತೆ ತನ್ನ ಗ್ರಾಮಕ್ಕೆ ತೆರಳಿ, ನಿರುದ್ಯೋಗಿಯಾಗುವ ಸಾಧ್ಯತೆ ಇರುತ್ತದೆ. ಈ ನಿಟ್ಟಿನಲ್ಲಿ ಉದ್ಯೋಗದಾತರು ಮಾನವೀಯ ದೃಟ್ಟಿಯಿಂದಲೂ ಈ ರೀತಿಯ ಕ್ರಮಕ್ಕೆ ಚಿಂತನೆ ನಡೆಸಬೇಕು ಎಂದು ಹೇಳಿದರು.
ನಿರುದ್ಯೋಗಿಗಳಿಗೆ ಉದ್ಯೋಗಾವಕಾಶ ಕಲ್ಪಿಸಲು ಸರಕಾರದ ವತಿಯಿಂದ ರಾಜ್ಯದ ವಿವಿಧೆಡೆ ಉದ್ಯೋಗ ಮೇಳಗಳನ್ನು ಆಯೋಜಿಸುವುದರ ಜತೆಗೆ ಆರೋಗ್ಯ ವೃತ್ತಿಪರರಿಗಾಗಿ ಸಾಗರೋತ್ತರ ಉದ್ಯೋಗ ಮೇಳ ಆಯೋಜಿಸಲು ನಿರ್ಧರಿಸಲಾಗಿದೆ. ಜರ್ಮನಿ, ಜಪಾನ್, ಇಟಲಿ ಮತ್ತಿತರ ರಾಷ್ಟ್ರಗಳಿಂದ ನರ್ಸ್, ಅರೆ ವೈದ್ಯಕೀಯ ಮುಂತಾದ ಆರೋಗ್ಯ ವೃತ್ತಿಪರರಿಗೆ ಸಾಕಷ್ಟು ಬೇಡಿಕೆ ಇದೆ. ಹೀಗಾಗಿ ಮುಂದಿನ ಮೂರು ತಿಂಗಳಲ್ಲಿ ಈ ಆರೋಗ್ಯ ವೃತ್ತಿಪರರಿಗಾಗಿಯೇ ಸಾಗರೋತ್ತರ ಉದ್ಯೋಗ ಮೇಳವನ್ನು ಕೌಶಲ್ಯಾಭಿವೃದ್ಧಿ ಇಲಾಖೆಯಿಂದ ಆಯೋಜಿಸಲಾಗುವುದು ಎಂದು ಅವರು ತಿಳಿಸಿದರು.
ರಾಜ್ಯದ ಆರೋಗ್ಯ ವೃತ್ತಿಪರರಿಗೆ ವಿದೇಶಗಳಲ್ಲಿ ಸಾಕಷ್ಟು ಬೇಡಿಕೆ ಇದ್ದರೂ, ಭಾಷೆ ಎಂಬುದು ಅವರಿಗೆ ಅಡ್ಡಿಯಾಗುತ್ತಿದೆ. ಹೀಗಾಗಿ ರಾಜ್ಯದ ನರ್ಸಿಂಗ್ ಕಾಲೇಜುಗಳಲ್ಲಿ ಜರ್ಮನ್ ಮತ್ತು ಜಾಪಾನೀಸ್ ಭಾಷೆಯನ್ನು ಪರಿಚಯಿಸಲು ನಿರ್ಧರಿಸಲಾಗಿದೆ. ಆ ಮೂಲಕ ಭಾಷಾ ಸಮಸ್ಯೆಯನ್ನು ಬಗೆಹರಿಸಲಾಗುವುದು ಎಂದು ಶರಣ್ ಪ್ರಕಾಶ್ ಪಾಟೀಲ್ ತಿಳಿಸಿದರು.
ಕೌಶಲ್ಯಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಇ.ವಿ.ರಮಣ ರೆಡ್ಡಿ ಮಾತನಾಡಿ, ದೇಶದಲ್ಲಿ ಶಿಕ್ಷಣಕ್ಕೆ ಮಾತ್ರ ಆದ್ಯತೆ ನೀಡುತ್ತಿದ್ದುದರಿಂದ ಶಿಕ್ಷಣ ಮುಗಿಸಿ ಹೊರಬರುತ್ತಿರುವವರ ಪೈಕಿ ಶೇ.85 ಮಂದಿಯಲ್ಲಿ ಕೌಶಲ್ಯದ ಕೊರತೆ ಇದೆ. ಈ ಹಿನ್ನೆಲೆಯಲ್ಲಿ ಉದ್ಯೋಗ ಮೇಳಗಳ ಮೂಲಕ ಕಂಪೆನಿ, ಕೈಗಾರಿಕೆಗಳಿಂದ ಬರುವ ಕೌಶಲ ಬೇಡಿಕೆ ಆಧರಿಸಿ ಕೌಶಲ್ಯಾಧಾರಿತ ಶಿಕ್ಷಣಕ್ಕೆ ಆದ್ಯತೆ ನೀಡಲಾಗುತ್ತಿದೆ. ಬೆಂಗಳೂರು ಹೊರತುಪಡಿಸಿ ಇತರೆ ಪ್ರದೇಶಗಳಲ್ಲೂ ಕೌಶಲ್ಯಾಧರಿತ ಶಿಕ್ಷಣಕ್ಕೆ ಗಮನ ಹರಿಸಲಾಗುತ್ತಿದೆ. ಇದಕ್ಕೆ ಎಫ್‍ಕೆಸಿಸಿಐ ಸಹಕಾರ ನೀಡಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಎಫ್ ಕೆಸಿಸಿಐ ಅಧ್ಯಕ್ಷ ಎಂ.ಜಿ.ಬಾಲಕೃಷ್ಣ, ಹಿರಿಯ ಉಪಾಧ್ಯಕ್ಷ ಉಮಾರೆಡ್ಡಿ, ಉಪಾಧ್ಯಕ್ಷ ಟಿ.ಸಾಯಿರಾಂ ಪ್ರಸಾದ್, ಡೆವಲಪ್ ಸಂಸ್ಥೆಯ ಸಂಸ್ಥಾಪಕ ಮತ್ತು ಸಿಇಒ ತೇಜಸ್ ಎನ್.ಗೌಡ, ಎಫ್ ಕೆಸಿಸಿಐ ಪದಾಧಿಕಾರಿಗಳು ಮತ್ತು ಸದಸ್ಯರು ಪಾಲ್ಗೊಂಡಿದ್ದರು.
ಎ.16ಕ್ಕೆ ಕಲಬುರಗಿಯಲ್ಲಿ ಉದ್ಯೋಗ ಮೇಳ
ಉದ್ಯೋಗದಾತರ ಮೂಲಕ ಉದ್ಯೋಗಾಂಕ್ಷಿಗಳಿಗೆ ಉದ್ಯೋಗ ಕಲ್ಪಿಸಲು ಈಗಾಗಲೇ ರಾಜ್ಯಾದ್ಯಂತ ಸರಕಾರದ ವತಿಯಿಂದ ಉದ್ಯೋಗ ಮೇಳ ಆಯೋಜಿಸಲಾಗುತ್ತಿದೆ. ಎ.16 ರಂದು ಕಲಬುರಗಿಯಲ್ಲಿ ಬೃಹತ್ ಉದ್ಯೋಗ ಮೇಳ ಆಯೋಜಿಸಲಾಗಿದೆ. ಇದಾದ ಬಳಿಕ ಮೈಸೂರು, ಹುಬ್ಬಳ್ಳಿ, ಬೆಳಗಾವಿಗಳಲ್ಲಿ ವಿಭಾಗೀಯ ಮಟ್ಟದ ಬೃಹತ್ ಉದ್ಯೋಗ ಮೇಳಗಳನ್ನು ಆಯೋಜಿಸಲಾಗುವುದು. ರಾಜ್ಯದಲ್ಲಿ ಉದ್ಯೋಗ ಸಮಸ್ಯೆಗಿಂತಲೂ ಕೌಶಲ ಸಮಸ್ಯೆ ಹೆಚ್ಚಾಗಿದೆ. ಹೀಗಾಗಿ ವಿವಿಧ ವಿಶ್ವವಿದ್ಯಾನಿಲಯಗಳಲ್ಲಿ ಕೌಶಲಭರಿತ ಶಿಕ್ಷಣ ನೀಡುವ ಕಾರ್ಯಕ್ರಮಗಳನ್ನು ನೀಡಲಾಗುತ್ತಿದೆ. ಅಲ್ಲದೆ, ಕಲಬುರಗಿ, ಕೊಪ್ಪಳ ಮತ್ತು ಮೈಸೂರನ್ನು ಕೇಂದ್ರೀಕರಿಸಿ ಮಲ್ಟಿ ಸ್ಕಿಲ್ ಡೆವಲಪ್ ಮಂಟ್ ಸೆಂಟರ್‍ಗಳನ್ನು ಸ್ಥಾಪಿಸಲಾಗುವುದು.
- ಅಭಿಷೇಕ್ ಬಿ.ಎ., ಅಧ್ಯಕ್ಷ ಎಫ್‍ಕೆಸಿಸಿಐ ಕೌಶಲ್ಯಾಭಿವೃದ್ಧಿ ಸಮಿತಿ