ಬೆಂಗಳೂರು | ರೋಹಿತ್ ವೇಮುಲ ಕಾಯ್ದೆ ಜಾರಿಗೆ ಆಗ್ರಹಿಸಿ ಧರಣಿ

Update: 2025-04-05 21:45 IST
ಬೆಂಗಳೂರು | ರೋಹಿತ್ ವೇಮುಲ ಕಾಯ್ದೆ ಜಾರಿಗೆ ಆಗ್ರಹಿಸಿ ಧರಣಿ
  • whatsapp icon

ಬೆಂಗಳೂರು : ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ದಲಿತ ಮತ್ತು ಬಹುಜನ ವಿದ್ಯಾರ್ಥಿಗಳ ಮೇಲೆ ಆಗುತ್ತಿರುವ ಜಾತಿ ದೌರ್ಜನ್ಯ ಮತ್ತು ತಾರತಮ್ಯವನ್ನು ತಡಿಗಟ್ಟಲು ರೋಹಿತ್ ವೇಮುಲ ಕಾಯ್ದೆ ಜಾರಿಗೊಳಿಸುವಂತೆ ಆಗ್ರಹಿಸಿ, ರೋಹಿತ್ ಕಾಯ್ದೆಗಾಗಿ ಜನಾಂದೋಲನ ವತಿಯಿಂದ ಶನಿವಾರ ನಗರದ ಫ್ರೀಡಂ ಪಾರ್ಕ್‍ನಲ್ಲಿ ಧರಣಿ ನಡೆಸಲಾಯಿತು.

ಈ ವೇಳೆ ಮಾತನಾಡಿದ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ವಿಶೇಷ ಪ್ರತಿನಿಧಿ ಕೆ.ಪಿ.ಅಶ್ವಿನಿ, ರೋಹಿತ್ ವೇಮುಲ ಅವರ ಸಾಂಸ್ಥಿಕ ಹತ್ಯೆಯನ್ನು ತುಂಬಾ ಗಟ್ಟಿ ಧ್ವನಿಯಲ್ಲಿ ಖಂಡಿಸಬೇಕು. ಹತ್ತು ವರ್ಷದಲ್ಲಿ ವಿಶ್ವ ವಿದ್ಯಾಲಯಗಳಲ್ಲಿ ನಡೆದ ಆತ್ಮಹತ್ಯೆಗಳಲ್ಲಿ ಶೇ.60ರಷ್ಟು ಹಿಂದುಳಿದ ವರ್ಗದ ವಿದ್ಯಾರ್ಥಿಗಳು ಇದ್ದಾರೆ. ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ತಾರತಮ್ಯದ ಬಗ್ಗೆ ಮಾತನಾಡಲು ವೇದಿಕೆಯೇ ಇಲ್ಲ ಎಂದು ಹೇಳಿದರು.

ಜಾತಿ ತಾರತಮ್ಯ ಎಂದಾಕ್ಷಣ ನೂರಾರು ವರ್ಷದ ಹಿಂದೆ ಇತ್ತು. ಈಗ ಅಸಮಾನತೆಯಿಲ್ಲ ಎಂದು ಮಾತಾಡುತ್ತಾರೆ. ಆದರೆ ದಲಿತ, ಹಿಂದುಳಿದ, ಆದಿವಾಸಿ, ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ಒಂದು ವೇದಿಕೆಯಾಗಿದೆ. ಶಿಕ್ಷಣದಿಂದ ಸಾಮಾಜಿಕ, ಆರ್ಥಿಕವಾಗಿ ಮೇಲೆ ಬರಲು ಸಾಧ್ಯವಾಗುತ್ತದೆ ಎಂದು ಡಾ.ಬಿ.ಆರ್.ಅಂಬೇಡ್ಕರ್ ಅವರು ಹೇಳಿದ್ದಾರೆ. ಅಟ್ರಾಸಿಟಿ ಕಾಯ್ದೆಯಲ್ಲಿ ಉನ್ನತ ಶಿಕ್ಷಣಗಳಲ್ಲಿ ನಡೆಯುವ ಜಾತಿ ತಾರತಮ್ಯದ ಬಗ್ಗೆ ಸ್ಪಷ್ಟವಾದ ಪರಿಹಾರವಿಲ್ಲ. ಅದರಿಂದ ಎ.14ರಂದು ರೋಹಿತ್ ವೇಮುಲ ಕಾಯ್ದೆಯ ಬಗ್ಗೆ ಸಮಿತಿಯನ್ನು ರಚನೆ ಮಾಡಬೇಕು ಎಂದು ಆಗ್ರಹಿಸಿದರು.

ಶಿಕ್ಷಣತಜ್ಞ ಶ್ರೀಪಾದ್ ಭಟ್ ಮಾತನಾಡಿ, ಖಾಸಗಿ ಶಿಕ್ಷಣ ಸಂಸ್ಥೆಯಲ್ಲಿ ಆಗುತ್ತಿರುವ ದೌರ್ಜನ್ಯಗಳನ್ನು ಹೇಳಿಕೊಳ್ಳಲು ಎಸ್ಸಿ, ಎಸ್ಟಿ ಆಯೋಗಕ್ಕೆ ಅಧ್ಯಕ್ಷರು, ಸದಸ್ಯರು ಇಲ್ಲ. ಅದರ ಬಗ್ಗೆಯೂ ಹೋರಾಟ ಮಾಡಬೇಕು. ಯುಜಿಸಿ ಜಾರಿಗೆ ತರಲಾಗುತ್ತಿರುವ ಎಸ್ಸಿ, ಎಸ್‍ಟಿ ಜಾತಿ ತಾರತಮ್ಯ ಕಾಯ್ದೆಯನ್ನು ನಾವು ಅರಿತುಕೊಳ್ಳಬೇಕು. ಅದರಲ್ಲಿನ ದೋಷ ಏನೆಂದರೆ ದಲಿತ ಸಮುದಾಯಗಳಿಂದ ಯಾರನ್ನೂ ಒಳಗೊಳ್ಳುತ್ತಿಲ್ಲ. ಅದರಿಂದ ಯಾವುದೇ ಕೆಲಸಕ್ಕೆ ಬಾರದ ಕಾಯ್ದೆಯಾಗುತ್ತದೆ ಎಂದು ತಿಳಿಸಿದರು.

ಧರಣಿಯಲ್ಲಿ ಅಂಕಣಕಾರ ಶಿವಸುಂದರ್, ವಕೀಲ ವಿನಯ್ ಶ್ರೀನಿವಾಸ್, ಹೋರಾಟಗಾರ ಡಾ.ಹುಲಿಕುಂಟೆ ಮೂರ್ತಿ, ಚಿಂತಕ ವಿ.ಎಲ್.ನರಸಿಂಹಮೂರ್ತಿ, ಬಸವರಾಜ ಕೌತಾಳ್, ಚಂದ್ರು ತರಹುಣಸೆ, ಅಶ್ವಿನಿ ಬೋಧ್, ಸರೋವರ ಬೆಂಕಿಕೆರೆ ಮತ್ತಿತರರು ಹಾಜರಿದ್ದರು.

ಹಕ್ಕೊತ್ತಾಯಗಳು

• ಎ.14 ಅಂಬೇಡ್ಕರ್ ಜಯಂತಿಯೊಳಗೆ ರಾಜ್ಯ ಸರಕಾರ ರೋಹಿತ್ ಕಾಯ್ದೆ ಜಾರಿಮಾಡಲು ಘೋಷಿಸಬೇಕು.

• ಕಾಯ್ದೆ ಜಾರಿ ಮಾಡಲು ದಲಿತ-ವಿಧಾರ್ಥಿ ಸಂಘಟನೆಗಳ ಪ್ರತಿನಿಧಿಗಳಿರುವ ಸಮಿತಿ ರಚನೆಯಾಗಬೇಕು.

• ಕರ್ನಾಟಕದ ಉನ್ನತ ಶಿಕ್ಷಣ ಕ್ಷೇತ್ರ ತಾರತಮ್ಯ ರಹಿತವಾಗುವಂತೆ, ಎಲ್ಲರಿಗು ಸಮಾನ ಅವಕಾಶ ಸಿಗುವಂತೆ ಸೂಕ್ತ, ಶೀಘ್ರ ಕ್ರಮ ಕೈಗೊಳ್ಳಬೇಕು.

• ಜಾತಿ ವಿನಾಶವೇ ನಮ್ಮ ಅಂತಿಮ ಗುರಿ, ಅದಕ್ಕೆ ಸೂಕ್ತ ಕ್ರಮವನ್ನು ಸರಕಾರ ಕೈಗೊಳ್ಳಬೇಕು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News