ಬೆಂಗಳೂರು | ಪತ್ನಿಯ ಕುತ್ತಿಗೆ ಕೊಯ್ದು ಹತ್ಯೆ: ಪತಿ ಸೆರೆ
ಸಾಂದರ್ಭಿಕ ಚಿತ್ರ
ಬೆಂಗಳೂರು : ನಡು ರಸ್ತೆಯಲ್ಲೇ ತನ್ನ ಪತ್ನಿಯ ಕುತ್ತಿಗೆ ಕೊಯ್ದು ಹತ್ಯೆಗೈದ ಪತಿಯನ್ನು ನಗರದ ಎಲೆಕ್ಟ್ರಾನಿಕ್ ಸಿಟಿ ಠಾಣಾ ಪೊಲೀಸರು ಬಂಧಿಸಿರುವುದಾಗಿ ತಿಳಿಸಿದ್ದಾರೆ.
ಬಾಗೇಪಲ್ಲಿ ಮೂಲದ ಶಾರದ(35) ಹತ್ಯೆಯಾದ ಮಹಿಳೆ ಎಂದು ಗುರುತಿಸಲಾಗಿದೆ. ಕೃಷ್ಣ ಎಂಬಾತ ಪತ್ನಿಯನ್ನು ಕೊಂದ ಪತಿ. ಅಕ್ರಮ ಸಂಬಂಧದ ಆರೋಪದಡಿ ಪತಿ ತನ್ನ ಪತ್ನಿಯನ್ನು ಕೊಲೆ ಮಾಡಿದ್ದಾನೆ ಎಂಬ ಶಂಕೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ.
ಎ.4ರ ಶುಕ್ರವಾರ ರಾತ್ರಿ 8 ಗಂಟೆ ಸುಮಾರಿಗೆ ನಗರದ ದೊಡ್ಡ ತೋಗೂರು ಬಳಿಯ ಪ್ರಗತಿ ನಗರದಲ್ಲಿ ಈ ಘಟನೆ ನಡೆದಿದೆ. ಪತ್ನಿ ಕೆಲಸ ಮುಗಿಸಿ ನಿರ್ಜನ ರಸ್ತೆಯಲ್ಲಿ ಮನೆಗೆ ತೆರಳುತ್ತಿದ್ದ ವೇಳೆ ಪತಿ ದಾಳಿ ನಡೆಸಿದ್ದಾನೆ. ಪತ್ನಿಯನ್ನು ಕೊಲ್ಲಲು ಎರಡು ಚಾಕು ತಂದಿದ್ದ ಪತಿ ಆಕೆಯ ಕುತ್ತಿಗೆ ಸೀಳಿ ಕೊಲೆ ಮಾಡಿದ್ದಾನೆ. ಕೊಲೆ ಮಾಡಿದ ಬಳಿಕ ಪರಾರಿಯಾಗುತ್ತಿದ್ದ ಆರೋಪಿ ಪತಿಯನ್ನು ಸ್ಥಳೀಯರು ಹಿಡಿದು ತಮಗೆ ಒಪ್ಪಿಸಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಈ ಘಟನೆ ಮಾಹಿತಿ ನೀಡಿರುವ ಆಗ್ನೇಯ ವಿಭಾಗದ ಡಿಸಿಪಿ ಸಾರ ಫಾತಿಮಾ, ಎ.4ರಂದು ಸುಮಾರು 8:00 ಗಂಟೆ ಸಮಯದಲ್ಲಿ ನಮ್ಮ ಕಂಟ್ರೋಲ್ ರೂಮ್‍ಗೆ ಮಾಹಿತಿ ಬಂದಿತ್ತು. ಎಲೆಕ್ಟ್ರಾನಿಕ್ ಸಿಟಿ ಪಿಎಸ್‍ಐ ಮತ್ತು ಸಿಬ್ಬಂದಿ ಸ್ಥಳಕ್ಕೆ ಹೋಗಿದ್ದಾರೆ. ಕೂಡಲೇ ನಮ್ಮ ಪೊಲೀಸರು ಆರೋಪಿಯನ್ನು ಬಂಧಿಸಿದ್ದು, ಯಾವ ವಿಚಾರಕ್ಕೆ ಕೊಲೆಯಾಗಿದೆ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ. ಮರಣೋತ್ತರ ಪರೀಕ್ಷೆ ಬಂದ ನಂತರ ಸಂಪೂರ್ಣ ವಿಚಾರ ಗೊತ್ತಾಗುತ್ತದೆ. ಈ ಸಂಬಂಧ ಎಲೆಕ್ಟ್ರಾನ್ ಸಿಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದರು.