ಎ.24 ರಿಂದ ಮೇ 18ರವರೆಗೆ ಉಳ್ಳಾಲ ದರ್ಗಾ ಉರೂಸ್ ಸಮಾರಂಭ : ಬಿ.ಜಿ.ಹನೀಫ್ ಹಾಜಿ

ಬೆಂಗಳೂರು : ದಕ್ಷಿಣ ಭಾರತದ ಅಜ್ಮೀರ್ ಎಂದೇ ಪ್ರಖ್ಯಾತಿ ಹೊಂದಿರುವ ಖುತ್‍ಬುಝ್ಝುಮಾನ್ ಅಸ್ಸಯ್ಯಿದ್ ಮುಹಮ್ಮದ್ ಶರೀಫುಲ್ ಮದನಿ(ಖ.ಸಿ) ತಂಙಳ್‍ರವರ 432ನೇ ವಾರ್ಷಿಕ ಹಾಗೂ 22ನೇ ಪಂಚ ವಾರ್ಷಿಕ ಉರೂಸ್ ಸಮಾರಂಭವು ಎ.24 ರಿಂದ ಮೇ 18ರವರೆಗೆ ಜರುಗಲಿದೆ ಎಂದು ಉಳ್ಳಾಲ ಜುಮ್ಮಾ ಮಸ್ಜಿದ್ ಹಾಗೂ ಸಯ್ಯಿದ್ ಮುಹಮ್ಮದ್ ಶರೀಫುಲ್ ಮದನಿ ದರ್ಗಾ ಸಮಿತಿಯ ಅಧ್ಯಕ್ಷ ಬಿ.ಜಿ.ಹನೀಫ್ ಹಾಜಿ ತಿಳಿಸಿದರು.
ಶನಿವಾರ ನಗರದಲ್ಲಿರುವ ಸ್ಪೀಕರ್ ಯು.ಟಿ.ಖಾದರ್ ಅವರ ನಿವಾಸದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಎ.24ರಂದು ದ್ಸಿಕ್ರ್ ಮಜ್ಲಿಸ್‌ನೊಂದಿಗೆ ಉರೂಸ್ ಸಮಾರಂಭವು ಉದ್ಘಾಟನೆಗೊಳ್ಳಲಿದ್ದು, ಉಳ್ಳಾಲ ಖಾಝಿ ಸುಲ್ತಾನುಲ್ ಉಲಮಾ ಎ.ಬಿ.ಅಬೂಬಕ್ಕರ್ ಮುಸ್ಲಿಯಾರ್ ನೇತೃತ್ವದಲ್ಲಿ, ಸೈಯ್ಯದುಲ್ ಉಲಮಾ ಜಿಫ್ರಿ ಮುತ್ತುಕೋಯ ತಂಙಳ್ ಸೇರಿದಂತೆ ಅನೇಕ ಉಲಮಾ, ಉಮರಾಗಳು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಮೇ 16ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ರಾಷ್ಟ್ರೀಯ, ಅಂತರ್ ರಾಷ್ಟ್ರೀಯ ಮಟ್ಟದ ರಾಜಕೀಯ, ಸಾಮಾಜಿಕ ಮುಖಂಡರು ದರ್ಗಾಗೆ ಭೇಟಿ ನೀಡಲಿದ್ದಾರೆ. ದಿನನಿತ್ಯ ಸುಮಾರು 50-60 ಸಾವಿರ ಯಾತ್ರಾರ್ಥಿಗಳು ಈ ಉರೂಸ್ ಸಂದರ್ಭದಲ್ಲಿ ಆಗಮಿಸಲಿದ್ದಾರೆ. ಅನ್ನದಾನಕ್ಕೆ ಸುಮಾರು 5 ಲಕ್ಷ ಮಂದಿ ಭಾಗವಹಿಸುವ ನಿರೀಕ್ಷೆಯಿದೆ. ಈ ಪ್ರಯುಕ್ತ ಎಲ್ಲರ ಸಹಕಾರ ಅಗತ್ಯವಿದೆ ಎಂದು ಹನೀಫ್ ಹಾಜಿ ತಿಳಿಸಿದರು.
ದರ್ಗಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಶಿಹಾಬುದ್ದೀನ್ ಸಖಾಫಿ ಮಾತನಾಡಿ, ಮೇ 18ರವರೆಗೆ ನಡೆಯುವ ಉರೂಸ್ ಕಾರ್ಯಕ್ರಮದಲ್ಲಿ ಧಾರ್ಮಿಕ ಪ್ರವಚನ ಕಾರ್ಯಕ್ರಮ, ಸನುದಾನ ಸಮ್ಮೇಳನ, ಸೌಹಾರ್ದ ಸಂಗಮ, ಸಾಮಾಜಿಕ ಸಮಾವೇಶ, ಉಲಮಾ ಉಮರಾ ಮೀಟ್, ಸಂದಲ್ ಮೆರವಣಿಗೆ ಹಾಗೂ ಸಮಾರೋಪ ಸಮಾರಂಭ, ಅನ್ನದಾನ ಇತ್ಯಾದಿ ಕಾರ್ಯಕ್ರಮಗಳು ಜರುಗಲಿವೆ ಎಂದು ಮಾಹಿತಿ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ದರ್ಗಾ ಸಮಿತಿಯ ಕೋಶಾಧಿಕಾರಿ ನಾಝಿಮ್ ರಹ್ಮಾನ್, ಯು.ಟಿ.ಝುಲ್ಫಿಕಾರ್, ಅಡ್ವೊಕೇಟ್ ಹಸೈನಾರ್, ಅಬ್ದುಲ್ ಖಾದರ್, ಸೂಫಿ ವಲಿಬಾ ಸೇರಿದಂತೆ ಇನ್ನಿತರ ಮುಖಂಡರು, ಪದಾಧಿಕಾರಿಗಳು ಉಪಸ್ಥಿತರಿದ್ದರು.