60ದಿನಗಳಲ್ಲಿ ಒಳಮೀಸಲಾತಿ ಜಾರಿ ಮಾಡಿ : ಇಂದೂಧರ ಹೊನ್ನಾಪುರ ಒತ್ತಾಯ

Update: 2025-04-02 23:41 IST
60ದಿನಗಳಲ್ಲಿ ಒಳಮೀಸಲಾತಿ ಜಾರಿ ಮಾಡಿ : ಇಂದೂಧರ ಹೊನ್ನಾಪುರ ಒತ್ತಾಯ
  • whatsapp icon

ಬೆಂಗಳೂರು : ಒಳಮೀಸಲಾತಿ ಜಾರಿಯನ್ನು ಇದುವರೆಗೆ ಹಲವು ಕಾರಣಕ್ಕೆ ಮುಂದೂಡಲಾಗಿದೆ. ಯಾವ ಕಾರಣಕ್ಕೂ ಮತ್ತೆ ಮುಂದೂಡಬಾರದು. ಸರಕಾರ ನಿರ್ಧರಿಸಿರುವ 60 ದಿನಗಳಲ್ಲಿ ಜಾರಿ ಮಾಡಬೇಕು ಎಂದು ಹಿರಿಯ ದಲಿತ ಹೋರಾಟಗಾರ ಇಂದೂಧರ ಹೊನ್ನಾಪೂರ ತಿಳಿಸಿದ್ದಾರೆ.

ಬುಧವಾರ ನಗರದ ಖಾಸಗಿ ಹೊಟೇಲ್‍ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಒಳಮೀಸಲಾತಿ ಜಾರಿಗಾಗಿ ನ್ಯಾ.ಎಚ್.ಎನ್.ನಾಗಮೋಹನ್ ದಾಸ್ ಆಯೋಗ ಸಮೀಕ್ಷೆ ಮಾಡಲು ಮುಂದಾಗಿದ್ದು, ಸಮೀಕ್ಷೆಯನ್ನು ವೈಜ್ಞಾನಿಕವಾಗಿ, ಯಾವುದೇ ಸಮುದಾಯ ವ್ಯಕ್ತಿ ಅದರಿಂದ ಹೊರಗುಳಿಯದಂತೆ ಮಾಡಬೇಕು ಎಂದು ತಿಳಿಸಿದರು.

ಪ್ರಶ್ನಾವಳಿಯನ್ನು ಎಚ್ಚರಿಕೆಯಿಂದ ಮಾಡಬೇಕು. ಯಾವುದೇ ಸಮುದಾಯ ತನ್ನ ಜಾತಿ ಹೆಸರನ್ನು ಹೇಳುವಲ್ಲಿ ವ್ಯತ್ಯಾಸವಾದರೂ ಕೂಡ ಮೂಲ ಜಾತಿಯನ್ನು ತಿಳಿದುಕೊಂಡು ಬರೆದುಕೊಳ್ಳುವ ರೀತಿಯಲ್ಲಿ ಇರಬೇಕು. ಸುಪ್ರೀಂಕೋರ್ಟ್ ತೀರ್ಪಿಗೆ ಸಂಪೂರ್ಣವಾಗಿ ನ್ಯಾಯವನ್ನು ಒದಗಿಸಬೇಕು ಎಂದರು.

ಸಮೀಕ್ಷೆ ಮಾಡುವಾಗ ಅಲೆಮಾರಿ ಸಮುದಾಯ ಕೈಗೆ ಸಿಗುವುದಿಲ್ಲ. ಅವರಿಗೆ ಯಾವುದೇ ವಿಳಾಸ ಇರುವುದಿಲ್ಲ. ಅವರನ್ನು ಹೇಗೆ ಗುರುತ್ತಿಸುತ್ತಾರೆ. ಅವರಿಗೆ ಸಮರ್ಪಕ ನ್ಯಾಯ ಸಿಗಬೇಕು ಎಂದು ಹೇಳಿದರು.

ದಲಿತ ಸಂಘರ್ಷ ಸಮಿತಿಯ ಪ್ರದಾನ ಸಂಚಾಲಕ ಮಾವಳ್ಳಿ ಶಂಕರ್ ಮಾತನಾಡಿ, ಆದಿ ಕರ್ನಾಟಕ, ಆದಿ ಆಂದ್ರ, ಆದಿ ದ್ರಾವಿಡ ಗುಂಪುಗಳಲ್ಲಿ ದಾಖಲಾಗಿರುವ ದತ್ತಾಂಶಗಳ ಏರುಪೇರು ಅಂಕಿ-ಅಂಶಗಳ ಬದಲಾಗಿ ಪ್ರತಿಯೊಂದು ಉಪಜಾತಿಗಳ ಶೈಕ್ಷಣಿಕ, ಔದ್ಯೋಗಿಕ ವಾಸ್ತವ ಸ್ಥಿತಿಗತಿಗಳ ಮಾಹಿತಿಯನ್ನು ಹೊಸದಾಗಿ ಸಂಗ್ರಹಿಸಿದ ನಂತರವಷ್ಟೇ ವರ್ಗೀಕರಣದ ಸಮಸ್ಯೆಗಳನ್ನು ಪರಿಹರಿಸಲು ಸುಲಭವಾಗಲಿದೆ ಎಂದು ಸಲಹೆ ನೀಡಿರುವುದು, ನಿವೃತ್ತ ನ್ಯಾ.ಎಚ್.ಎನ್.ನಾಗಮೋಹನ್‍ದಾಸ್ ಆಯೋಗದ ನಿಷ್ಪಕ್ಷಪಾತ ನಿಲುವಿಗೆ ಸಾಕ್ಷಿಯಾಗಿದೆ ಎಂದು ಹೇಳಿದರು.

ಒಳಮೀಸಲಾತಿ ವರ್ಗೀಕರಣದ ನಿಖರತೆ ಕುರಿತು ಸಂಬಂಧಿಸಿದ ಯಾರೂ ಅನುಮಾನ ಗೊಂದಲಗಳನ್ನು ಇಟ್ಟುಕೊಂಡು ಪರಸ್ಪರ ಆರೋಪಗಳನ್ನು ಮಾಡಬಾರದು ಎಂದು ದಸಂಸ ಮನವಿ ಮಾಡುತ್ತದೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ದಸಂಸ ಪ್ರದಾನ ಸಂಚಾಲಕ ಗುರುಪ್ರಸಾದ್ ಕೆರೆಗೋಡು, ವಿ.ನಾಗರಾಜ್ ಮತ್ತಿತರರು ಉಪಸ್ಥಿತರಿದ್ದರು.


Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News