ವಿಧಾನಪರಿಷತ್ ಖಾಲಿ ಸ್ಥಾನ ತುಂಬುವ ಬಗ್ಗೆ ಚರ್ಚೆ: ಡಿ.ಕೆ.ಶಿವಕುಮಾರ್
ಹುಬ್ಬಳ್ಳಿ : ವಿಧಾನಪರಿಷತ್ತಿನಲ್ಲಿ ಖಾಲಿ ಇರುವ ನಾಲ್ಕು ಸ್ಥಾನಗಳನ್ನು ತುಂಬುವ ಬಗ್ಗೆ ಹೈಕಮಾಂಡ್ ನಾಯಕರ ಬಳಿ ಚರ್ಚೆ ನಡೆಸಲಾಗುವುದು ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದರು.
ಬುಧವಾರ ಹುಬ್ಬಳ್ಳಿ ವಿಮಾನ ನಿಲ್ದಾಣದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದಿಲ್ಲಿ ಭೇಟಿ ವೇಳೆ ಅನೇಕ ಕೇಂದ್ರ ಸಚಿವರನ್ನು ಭೇಟಿ ಮಾಡಲಾಗುವುದು. ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಭೇಟಿಗೂ ಸಮಯ ಕೇಳಿದ್ದೇನೆ. ಸಂಪುಟ ಪುನರ್ ರಚನೆ ಎಂಬುದು ಮಾಧ್ಯಮಗಳಲ್ಲಿ ಬಂದಿರುವ ಊಹಾಪೋಹಗಳು ಎಂದು ಹೇಳಿದರು.
ಸಂಪುಟ ವಿಸ್ತರಣೆ, ಪುನರ್ ರಚನೆ ಮುಖ್ಯಮಂತ್ರಿ ವಿವೇಚನೆಗೆ ಬಿಟ್ಟಿದ್ದು. ಈ ಬಗ್ಗೆ ಮುಖ್ಯಮಂತ್ರಿ ಹಾಗೂ ಪಕ್ಷದ ವರಿಷ್ಠರು ಚರ್ಚೆ ಮಾಡುತ್ತಾರೆ. ಮಾಧ್ಯಮಗಳಲ್ಲಿ ಬಂದಿರುವ ಮಾಹಿತಿ ಸತ್ಯಕ್ಕೆ ದೂರವಾದುದ್ದು ಎಂದು ಶಿವಕುಮಾರ್ ತಿಳಿಸಿದರು.
ಬಿಜೆಪಿಯಿಂದ ಉಚ್ಛಾಟನೆಗೊಂಡಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್‍ರನ್ನು ಕಾಂಗ್ರೆಸ್ ಪಕ್ಷಕ್ಕೆ ಸೇರಿಸಿಕೊಳ್ಳುವ ವಿಚಾರದ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಉಪ ಮುಖ್ಯಮಂತ್ರಿ, ಇದೆಲ್ಲವೂ ಸುಳ್ಳು. ನಮಗೆ ಆ ಪಕ್ಷದವರ ಸುದ್ದಿ ಏಕೆ ಬೇಕು. ಅವರುಂಟು ಅವರ ಪಕ್ಷವುಂಟು. ಏನು ಬೇಕಾದರೂ ಆಗಲಿ ಆದರೆ ಒಳ್ಳೆಯದಾಗಲಿ ಎಂದು ಕುಟುಕಿದರು.
ಕರ್ನಾಟಕ ಚೇಂಬರ್ ಆಫ್ ಕಾಮರ್ಸ್ ಅವರು ಹುಬ್ಬಳ್ಳಿ ಭಾಗದಲ್ಲಿ ಪೊಲೀಸ್ ಠಾಣೆಗಳ ಸಂಖ್ಯೆ ಹಾಗೂ ಪೊಲೀಸರ ಸಂಖ್ಯೆ ಜಾಸ್ತಿಯಾಗಬೇಕು ಎಂದು ನೀಡಿರುವ ಮನವಿ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಎರಡನೇ ಹಾಗೂ ಮೂರನೇ ಸಾಲಿನ ಜಿಲ್ಲೆಗಳಿಗೆ ಬರುವ ಉದ್ದಿಮೆಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡುವುದು ನಮ್ಮ ಕರ್ತವ್ಯ. ಗೃಹ ಸಚಿವರ ಬಳಿ ಈ ಬಗ್ಗೆ ಚರ್ಚೆ ಮಾಡುತ್ತೇನೆ ಎಂದರು.