ಬೆಂಗಳೂರು: 16 ಮಂದಿ ಪಾನಮತ್ತ ಶಾಲಾ ವಾಹನ ಚಾಲಕರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲು

Update: 2024-01-23 11:45 GMT

Photo: X/@wftrps

ಬೆಂಗಳೂರು: ಮದ್ಯಪಾನ ಮಾಡಿ ಶಾಲಾ ಮಕ್ಕಳ ವಾಹನ ಚಲಾಯಿಸುವವರ ವಿರುದ್ಧ ವಿಶೇಷ ಕಾರ್ಯಾಚರಣೆ ಕೈಗೊಂಡು ಒಟ್ಟು 3,414 ಶಾಲಾ ವಾಹನಗಳನ್ನು ತಪಾಸಣೆಗೊಳಪಡಿಸಿದ್ದು, ಪಾನಮತ್ತರಾಗಿದ್ದ 16 ಜನ ಚಾಲಕರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಬೆಂಗಳೂರು ಸಂಚಾರಿ ವಿಭಾಗದ ಜಂಟಿ ಆಯುಕ್ತ ಎಂ.ಎನ್.ಅನುಚೇತ್ ತಿಳಿಸಿದ್ದಾರೆ.

ಜ.23ರ ಮಂಗಳವಾರ ಬೆಳಗ್ಗೆ 7ರಿಂದ 9.30ರವರೆಗೂ ಪೊಲೀಸರು ಕಾರ್ಯಾಚರಣೆ ಕೈಗೊಂಡಿದ್ದರು. ಈ ವೇಳೆ ಚಾಲಕರ ಡ್ರೈವಿಂಗ್ ಲೈಸೆನ್ಸ್ ಗಳನ್ನು ವಶಕ್ಕೆ ಪಡೆಯಲಾಗಿದ್ದು, ಅಮಾನತುಗೊಳಿಸಲು ಸಾರಿಗೆ ಇಲಾಖೆ (ಆರ್.ಟಿ.ಓ)ಗೆ ರವಾನಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಡ್ರಿಂಕ್ ಅಂಡ್ ಡ್ರೈವ್ ತಪಾಸಣೆಯಲ್ಲಿ ಚಾಲಕರ ವಿರುದ್ಧ ಕೇವಲ ಸಾರಿಗೆ ನಿಯಮ ಉಲ್ಲಂಘನೆ ಪ್ರಕರಣ ಅಷ್ಟೇ ಅಲ್ಲದೆ, ಕ್ರಿಮಿನಲ್ ಮೊಕದ್ದಮೆ ದಾಖಲು ಮಾಡಿದ್ದೇವೆ. ಇದನ್ನು ಗಂಭೀರವಾಗಿ ಪರಿಗಣಿಸಿ, ಅವರನ್ನು ಕೆಲಸಕ್ಕೆ ಸೇರಿಸಿಕೊಂಡ ಶಾಲಾ ಆಡಳಿತ ಮಂಡಳಿಯವರಿಗೂ ನೋಟಿಸ್ ಕಳಿಸಿ, ಸ್ಪಷ್ಟನೆ ಪಡೆಯುತ್ತೇವೆ. ಮುಂದಿನ ದಿನಗಳಲ್ಲೂ ಈ ರೀತಿ ಕಾರ್ಯಾಚರಣೆ ಮುಂದುವರಿಸುತ್ತೇವೆ ಎಂದು ಎಂ.ಎನ್.ಅನುಚೇತ್ ತಿಳಿಸಿದರು.

ಆ ಚಾಲಕರನ್ನು ಯಾವಾಗ ಕೆಲಸಕ್ಕೆ ಸೇರಿಸಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್ ನ ಆದೇಶ ಪಾಲನೆಯಾಗಿದೆಯೇ, ಇಲ್ಲವೇ ಎಂಬುದನ್ನು ಪರಿಶೀಲಿಸುತ್ತೇವೆ. ಈ ಪ್ರಕರಣದಲ್ಲಿ ಎಲ್ಲಾ ಶಾಲೆಗಳು ಖಾಸಗಿ ವಾಹನಗಳನ್ನು ಬಳಸಿರುವುದು ತಿಳಿದುಬಂದಿದೆ. ಸಾರಿಗೆ ಇಲಾಖೆಯ ಅಧಿಕಾರಿಗಳ ಸಹಯೋಗದಲ್ಲಿ ಈ ಕಾರ್ಯಾಚರಣೆ ನಡೆಸಿದ್ದೇನೆ. ನಿಯಮ ಉಲ್ಲಂಘನೆ ಬಗ್ಗೆ ಆ ಇಲಾಖೆಯ ಅಧಿಕಾರಿಗಳು ಕ್ರಮ ಕೈಗೊಳ್ಳಲಿದ್ದಾರೆ ಎಂದು ಎಂ.ಎನ್.ಅನುಚೇತ್ ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News