ಬಿಜೆಪಿ- ಜೆಡಿಎಸ್ ಮೈತ್ರಿ ಸುಸೂತ್ರವಾಗಿ ಮುಂದುವರಿಯಲಿದೆ: ವಿಜಯೇಂದ್ರ
ಬೆಂಗಳೂರು, ಮಾ.19: ಬಿಜೆಪಿ- ಜೆಡಿಎಸ್ ನಡುವೆ ಏನೇ ಸಣ್ಣಪುಟ್ಟ ವ್ಯತ್ಯಾಸಗಳಿದ್ದರೂ ಎಲ್ಲವೂ ಸುಖಾಂತ್ಯ ಆಗಲಿದೆ. ಬಿಜೆಪಿ- ಜೆಡಿಎಸ್ ಮೈತ್ರಿ ಸುಸೂತ್ರವಾಗಿ ಮುಂದುವರಿಯಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಡಾಲರ್ಸ್ ಕಾಲನಿ ನಿವಾಸದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಜೆಡಿಎಸ್ ನವರಿಗೂ ಸಮಾಧಾನ ಆಗುವ ರೀತಿಯಲ್ಲಿ ನಮ್ಮ ರಾಷ್ಟ್ರೀಯ ನಾಯಕರು ಸಮರ್ಪಕ ತೀರ್ಮಾನ ಮಾಡುವ ವಿಶ್ವಾಸ ಇದೆ, ಚರ್ಚೆಯಿಂದ ವಿಷಯ ಬಗೆಹರಿಯಲಿದೆ ಎಂದು ತಿಳಿಸಿದರು.
ನಮ್ಮ ರಾಷ್ಟ್ರೀಯ ನಾಯಕರ ಜೊತೆ ನಿನ್ನೆ ದೂರವಾಣಿ ಮೂಲಕ ಚರ್ಚೆ ಮಾಡಿದ್ದೇನೆ. ಬಳಿಕ ಮಾಜಿ ಪ್ರಧಾನಿ ದೇವೇಗೌಡರ ಜೊತೆಗೂ ದೂರವಾಣಿ ಮೂಲಕ ಚರ್ಚಿಸಿದ್ದೇನೆ. ಎಚ್.ಡಿ.ಕುಮಾರಸ್ವಾಮಿಯವರಿಗೂ ಬೆಳಗ್ಗೆ ಮಾಹಿತಿ ನೀಡಿದ್ದೇನೆ ಎಂದು ಮಾಧ್ಯಮದವರ ಪ್ರಶ್ನೆಗೆ ಉತ್ತರ ಕೊಟ್ಟರು.
ವಿಷಯಗಳ ಕುರಿತು ನಮ್ಮ ಪಕ್ಷದ ವರಿಷ್ಠರು ಮತ್ತು ಜೆಡಿಎಸ್ ವರಿಷ್ಠರು ಚರ್ಚೆ ಮಾಡಿದ್ದಾರೆ, ಅಲ್ಲದೆ ಚರ್ಚೆ ಮಾಡುತ್ತಿದ್ದಾರೆ. ಎಲ್ಲವೂ ಸುಖಾಂತ್ಯ ಕಾಣಲಿದೆ ಎಂದು ವಿಜಯೇಂದ್ರ ವಿಶ್ವಾಸ ವ್ಯಕ್ತಪಡಿಸಿದರು. ಕಳೆದ ಒಂದು ವಾರದ ಘಟನೆಗಳನ್ನು ಅವಲೋಕನ ಮಾಡಿದರೆ, ಕಾಂಗ್ರೆಸ್ ಪಕ್ಷದ ಮುಖಂಡರಿಗೆ ಅವರ ನಾಯಕರಿಂದ ಬಿಜೆಪಿ ಮುಖಂಡರ ಬಗ್ಗೆ ಹೆಚ್ಚು ವಿಶ್ವಾಸ ಬಂದಿದೆ. ಎಂ.ಬಿ.ಪಾಟೀಲ್ ಮತ್ತು ಇತರರ ಹೇಳಿಕೆ ಗಮನಿಸಿದರೆ, ಬಿಜೆಪಿ ನಾಯಕರ ಮೇಲೆ ಅವರಿಗೆ ವಿಶ್ವಾಸ ಬಂದಿದೆ ಎಂಬುದು ಸ್ಪಷ್ಟವಾಗಿದೆ ಎಂದರು.
ಸದಾನಂದ ಗೌಡ ಕೂಡ ಬಿಜೆಪಿಯಲ್ಲೇ ಇರುತ್ತಾರೆ ಎಂದು ಮಾಧ್ಯಮದವರ ಪ್ರಶ್ನೆಗೆ ಉತ್ತರ ಕೊಟ್ಟರು.
ಬಿಜೆಪಿ ಅಭ್ಯರ್ಥಿಗಳ ಮೊದಲನೇ ಪಟ್ಟಿ ಬಿಡುಗಡೆ ಆಗಿದೆ. ಅಭ್ಯರ್ಥಿಗಳ ಎರಡನೇ ಪಟ್ಟಿ ಸದ್ಯದಲ್ಲೇ ಬಿಡುಗಡೆ ಆಗಲಿದೆ ಎಂದ ವಿಜಯೇಂದ್ರ, ಟಿಕೆಟ್ ವಿಚಾರದಲ್ಲಿ ಪಕ್ಷದ ಹೈಕಮಾಂಡ್ ನಿರ್ಧಾರವೇ ಅಂತಿಮ ಎಂದು ಅವರು ಸ್ಪಷ್ಟಪಡಿಸಿದರು.
ಈಶ್ವರಪ್ಪ ಹಿರಿಯ ನಾಯಕರು. ಕೆಲವು ತಪ್ಪು ಮಾಹಿತಿಗಳು ಅವರಿಗೆ ತಲುಪಿವೆ. ಹಾಗಾಗಿ ಈ ರೀತಿ ಚರ್ಚೆಗಳು ನಡೆಯುತ್ತಿವೆ. ಅವರಿಗೆ ಸತ್ಯ ಅರ್ಥ ಆದಮೇಲೆ ಸಮಸ್ಯೆ ಬಗೆಹರಿಯುವ ವಿಶ್ವಾಸ ನನಗೆ ಈಗಲೂ ಇದೆ ಎಂದು ತಿಳಿಸಿದರು.