‘ಫುಟ್‍ಬೋರ್ಡ್ ಮೇಲೆ ನಿಲ್ಲಬೇಡ’ ಎಂದಿದ್ದಕ್ಕೆ ಬಿಎಂಟಿಸಿ ನಿರ್ವಾಹಕನಿಗೆ ಚಾಕುವಿನಿಂದ ಇರಿತ : ಆರೋಪಿ ಬಂಧನ

Update: 2024-10-02 13:06 GMT

ಬೆಂಗಳೂರು : ‘ಫುಟ್‍ಬೋರ್ಡ್ ಮೇಲೆ ನಿಲ್ಲಬೇಡ’ ಎಂದು ಬುದ್ದಿವಾದ ಹೇಳಿದ ಬಿಎಂಟಿಸಿ ನಿರ್ವಾಹಕನಿಗೆ ಚಾಕುವಿನಿಂದ ಇರಿದ ಆರೋಪಿಯನ್ನು ಇಲ್ಲಿನ ವೈಟ್‍ಫೀಲ್ಡ್ ಠಾಣಾ ಪೊಲೀಸರು ಬುಧವಾರ ಬಂಧಿಸಿದ್ದಾರೆಂದು ವರದಿಯಾಗಿದೆ.

ಬಂಧಿತ ಆರೋಪಿಯನ್ನು ಜಾರ್ಖಂಡ್ ಮೂಲದ ಹರಿ ಸಿನ್ಹಾ ಎಂದು ಗುರುತಿಸಲಾಗಿದೆ. ಆರೋಪಿಯು ವೈಟ್‍ಫಿಲ್ಡ್ ಘಟಕದ ಬಿಎಂಟಿಸಿ ವೋಲ್ವೋ ಬಸ್‍ನ ನಿರ್ವಾಹಕನಿಗೆ ಚಾಕು ಇರಿದಿರುವ ಘಟನೆ ಮಂಗಳವಾರ ಐಟಿಪಿಎಲ್ ಬಸ್ ನಿಲ್ದಾಣದ ಬಳಿ ನಡೆದಿತ್ತು.

ಕೃತ್ಯದ ಬಳಿಕ ಬಸ್ ಗಾಜುಗಳನ್ನು ಪುಡಿಗೊಳಿಸಿ ಚಾಕು ಪ್ರದರ್ಶಿಸುತ್ತಿದ್ದ ಆರೋಪಿಯನ್ನು ಕಂಡು ಇತರೆ ಪ್ರಯಾಣಿಕರು ಭಯಭೀತರಾಗಿ ಬಸ್‍ನಿಂದ ಇಳಿದು ತೆರಳಿದ್ದರು. ಬಿಕಾಂ ಪದವೀಧರನಾಗಿದ್ದ ಸಿನ್ಹಾ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡಿಕೊಂಡಿದ್ದ. ಇತ್ತೀಚೆಗೆ ಆತನನ್ನು ಕೆಲಸದಿಂದ ವಜಾಗೊಳಿಸಲಾಗಿತ್ತು. ಕೋಪಗೊಂಡಿದ್ದ ಆರೋಪಿ ಕೆಲಸದಿಂದ ತೆಗೆದಿದ್ದ ಮ್ಯಾನೇಜರ್‌ಗೆ ಬೆದರಿಸಲು ಚಾಕು ಇಟ್ಟುಕೊಂಡು ತೆರಳಿದ್ದ ಎಂದು ಹೇಳಲಾಗಿದೆ.

ಆದರೆ, ಕಂಪೆನಿಯ ಬಳಿ ಯಾರು ಸಿಗದಿದ್ದಾಗ ಮನೆಗೆ ತೆರಳಲು ಬಸ್ ಹತ್ತಿದ್ದ. ಬಸ್‍ನಲ್ಲಿ ಫುಟ್ ಬೋರ್ಡ್ ಮೇಲೆ ನಿಂತಿದ್ದ ಆರೋಪಿಯನ್ನು ಬಸ್‍ನೊಳಗೆ ಹೋಗುವಂತೆ ನಿರ್ವಾಹಕ ಯೋಗೇಶ್ ತಿಳಿಸಿದ್ದರು. ಇದರಿಂದ ಕುಪಿತಗೊಂಡ ಆರೋಪಿ ತನ್ನ ಬಳಿಯಿದ್ದ ಚಾಕುವಿನಿಂದ ನಿರ್ವಾಹಕನಿಗೆ ಇರಿದಿರುವುದಾಗಿ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಆರೋಪಿಯನ್ನ ಬಂಧಿಸಿರುವುದಾಗಿ ವೈಟ್‍ಫೀಲ್ಡ್ ಪೊಲೀಸರು ಘಟನೆ ಬಗ್ಗೆ ಮಾಹಿತಿ ನೀಡಿದ್ದಾರೆ. ಗಾಯಾಳು ನಿರ್ವಾಹಕನನ್ನು ವೈಟ್‍ಫೀಲ್ಡ್‍ನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ.

Full View

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News