ಬೆಂಗಳೂರು | ಸಹೋದರನ ಜೊತೆ ತೆರಳುತ್ತಿದ್ದ ಯುವತಿಯ ಅಪಹರಿಸಿ ಅತ್ಯಾಚಾರ; ಇಬ್ಬರ ಬಂಧನ

ಬೆಂಗಳೂರು: ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂಬ ವಿರೋಧ ಪಕ್ಷದಗಳ ಆರೋಪದ ನಡುವೆಯೇ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಮತ್ತೊಂದು ಅತ್ಯಾಚಾರ ಪ್ರಕರಣ ವರದಿಯಾಗಿದೆ. ತನ್ನ ಸಹೋದರನೊಂದಿಗೆ ತೆರಳುತ್ತಿದ್ದ ಯುವತಿಯೊಬ್ಬಳನ್ನು ಇಬ್ಬರು ದುಷ್ಕರ್ಮಿಗಳು ಎಳೆದೊಯ್ದು ಸಾಮೂಹಿಕ ಅತ್ಯಾಚಾರವೆಸಗಿರುವ ಘಟನೆ ಬುಧವಾರ ನಡೆದಿದೆ.
ಘಟನೆಗೆ ಸಂಬಂಧಿಸಿದಂತೆ ಮಹದೇವಪುರ ಠಾಣೆ ಪೊಲೀಸರು, ಇಬ್ಬರು ಆರೋಪಿಗಳಾದ ಆಸಿಫ್, ಸೈಯ್ಯದ್ ಎಂಬವರನ್ನು ಬಂಧಿಸಿದ್ದಾರೆ.
ಬಿಹಾರದ ಬಾಕಾ ಜಿಲ್ಲೆ ಮೂಲದ ಯುವತಿ ಕಳೆದ ಒಂದು ತಿಂಗಳಿಂದ ಕೇರಳದಲ್ಲಿ ಕೆಲಸ ಮಾಡುತ್ತಿದ್ದರು. ಆದರೆ ಯುವತಿಗೆ ಕೆಲಸ ಇಷ್ಟವಾಗದ ಕಾರಣ ಊರಿಗೆ ವಾಪಸ್ಗೆ ಹೋಗಲು ನಿರ್ಧರಿಸಿದ್ದರು ಎನ್ನಲಾಗಿದೆ. ಹೀಗಾಗಿ ಊರಿಗೆ ಹೋಗಲು ಕೇರಳದ ಎರ್ನಾಕುಲಂನಿಂದ ರೈಲು ಹತ್ತಿದ್ದ ಯುವತಿಯು ತನ್ನ ಸಹೋದರನಿಗೆ ಕರೆ ಮಾಡಿ ವಿಷಯ ತಿಳಿಸಿದ್ದಳು. ಇದರಂತೆ ಬುಧವಾರ ಮಧ್ಯರಾತ್ರಿ 1 ಗಂಟೆ ಸುಮಾರಿಗೆ ನಗರದ ಕೆ.ಆರ್.ಪುರಂ ರೈಲು ನಿಲ್ದಾಣದಲ್ಲಿ ಯುವತಿ ಇಳಿದಿದ್ದಳು. ರೈಲ್ವೆ ನಿಲ್ದಾಣದಿಂದ ಸಹೋದರಿಯನ್ನು ಕರೆದುಕೊಂಡು ಬರುತ್ತಿದ್ದ ಸಹೋದರ ಊಟ ಮಾಡಲು ಮಹದೇವಪುರ ಕಡೆಗೆ ನಡೆದುಕೊಂಡು ಹೋಗುತ್ತಿದ್ದರು. ಈ ವೇಳೆ ದುಷ್ಕರ್ಮಿಗಳು ಅಣ್ಣ-ತಂಗಿಯನ್ನು ಅಡ್ಡಗಟ್ಟಿ, ಯುವತಿಯ ಸಹೋದರನ ಮೇಲೆ ಹಲ್ಲೆ ಮಾಡಿ, ಯುವತಿಯನ್ನು ಎಳೆದೊಯ್ದು ನಿರ್ಜನ ಪ್ರದೇಶದಲ್ಲಿ ಸಾಮೂಹಿಕ ಆತ್ಯಾಚಾರವೆಸಗಿದ್ದಾರೆ. ಈ ವೇಳೆ ಯುವತಿಯ ಶಬ್ದ ಕೇಳಿ ಸ್ಥಳಕ್ಕೆ ಧಾವಿಸಿದ ಸಾರ್ವಜನಿಕರು ಇಬ್ಬರನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಸಂತ್ರಸ್ತೆ ನೀಡಿದ ದೂರಿನ ಆಧಾರದ ಮೇಲೆ ಇಬ್ಬರು ಆರೋಪಿಗಳನ್ನು ಬಂಧಿಸಿ ವಿಚಾರಣೆಗೊಳಪಡಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿದೆ.