ಶಿವಕುಮಾರ ಸ್ವಾಮೀಜಿ ಪ್ರತಿಮೆಗೆ ಹಾನಿ ಪ್ರಕರಣ : ಕಾನೂನು ಕ್ರಮಕ್ಕೆ ಒತ್ತಾಯಿಸಿದ ಪೀಟರ್ ಮಚಾದೋ

Update: 2024-12-05 17:43 GMT

ಆರ್ಚ್ ಬಿಷಪ್ ಪೀಟರ್ ಮಚಾದೋ

ಬೆಂಗಳೂರು : ಇಲ್ಲಿನ ಗಿರಿನಗರದಲ್ಲಿ ಸಿದ್ಧಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮೀಜಿಯವರ ಪ್ರತಿಮೆಯನ್ನು ವಿರೂಪಗೊಳಿಸಿದ ಆಘಾತಕಾರಿ ಘಟನೆ ನಡೆದಿದೆ ಎಂದು ಮಾಧ್ಯಮಗಳು ವರದಿ ಮಾಡಿದ್ದು, ಈ ಕೃತ್ಯವೆನ್ನಸಗಿದ ವ್ಯಕ್ತಿಯ ಹಿನ್ನೆಲೆ ಅಥವಾ ಸಂಬಂಧವನ್ನು ಲೆಕ್ಕಿಸದೆ ಕಾನೂನು ಕ್ರಮ ಜರುಗಿಸಬೇಕು ಎಂದು ಬೆಂಗಳೂರಿನ ಆರ್ಚ್ ಬಿಷಪ್ ಪೀಟರ್ ಮಚಾದೋ ಒತ್ತಾಯಿಸಿದ್ದಾರೆ.

ಗುರುವಾರ ಪ್ರಕಟನೆ ಹೊರಡಿಸಿರುವ ಅವರು, ಜಾತ್ಯತೀತ ಮೌಲ್ಯಗಳ ಸಂಕೇತವಾಗಿ ಪೂಜಿಸಲ್ಪಟ್ಟ ಸ್ವಾಮೀಜಿ ಅಸಂಖ್ಯಾತರಿಗೆ ಸ್ಫೂರ್ತಿಯಾಗಿದ್ದು, ಅವರ ಜೀವನದ ಪರಂಪರೆಯು ಸಾಮರಸ್ಯವನ್ನು ಉತ್ತೇಜಿಸುತ್ತದೆ. ಆದರೆ ಪ್ರತಿಮೆಯನ್ನು ವಿರೂಪಗೊಳಿಸಿದ ಎನ್ನಲಾದ ಅಪರಾಧಿಯು, ಯೇಸುಕ್ರಿಸ್ತರನ್ನೊಳಗೊಂಡ ಕನಸಿನಿಂದ ತಾನು ಪ್ರೇರೇಪಿಸಲ್ಪಟ್ಟಿದ್ದೇನೆ ಎಂದು ವರದಿ ಮಾಡಿದ ತಪ್ಪೊಪ್ಪಿಗೆಯು ಆಧಾರರಹಿತ ಮತ್ತು ಭಯಾನಕವಾಗಿದೆ. ಇಂತಹ ಹೇಳಿಕೆಗಳು ಧರ್ಮನಿಂದೆಯಷ್ಟೇ ಮಾತ್ರವಲ್ಲ, ಸಮಾಜದಲ್ಲಿ ಅಶಾಂತಿ ಮತ್ತು ಕೋಮುಗಲಭೆ ಸೃಷ್ಟಿಸುವ ಪ್ರಯತ್ನದಂತಿದೆ ಎಂದಿದ್ದಾರೆ.

ಬೆಂಗಳೂರಿನ ಮಹಾಧರ್ಮಕ್ಷೇತ್ರ ಮತ್ತು ಕಥೋಲಿಕರ ಸಮುದಾಯದ ಪರವಾಗಿ, ಈ ಖಂಡನೀಯ ಕೃತ್ಯವನ್ನು ನಾನು ನಿಸ್ಸಂದಿಗ್ಧವಾಗಿ ಖಂಡಿಸುತ್ತೇನೆ, ಈ ಕೃತ್ಯ ಎಸಗಿದ ವ್ಯಕ್ತಿಯ ಹಿನ್ನೆಲೆ ಅಥವಾ ಸಂಬಂಧವನ್ನು ಲೆಕ್ಕಿಸದೆ, ಸಮಗ್ರ ಮತ್ತು ನಿಷ್ಪಕ್ಷಪಾತ ತನಿಖೆಯನ್ನು ನಡೆಸಬೇಕು. ಗಿರಿನಗರದ ಜನತೆಯು ಶಾಂತಚಿತ್ತರಾಗಿ ಶಾಂತಿಯನ್ನು ಕಾಪಾಡಬೇಕು.

ನಮ್ಮ ಸಮಾಜದ ಸೌಹಾರ್ದತೆಗೆ ಭಂಗ ತರುವ ಇಂತಹ ಯಾವುದೇ ಪ್ರಚೋದನಕಾರಿ ಕ್ರಮಗಳಿಗೆ ಅವಕಾಶ ನೀಡಬಾರದು. ಈ ಕೃತ್ಯವೆಸಗಿದ ವ್ಯಕ್ತಿಗಳ ಮೇಲೆ ಕಾನೂನು ಸರಿಯಾದ ಕ್ರಮವನ್ನು ತೆಗೆದುಕೊಳ್ಳಬೇಕು. ಹಾಗೆಯೇ ಪರಸ್ಪರ ಗೌರವ ಮತ್ತು ಸಹೋದರತ್ವದ ಮೌಲ್ಯಗಳನ್ನು ಸಂರಕ್ಷಿಸುವಲ್ಲಿ ನಾವೆಲ್ಲ ಜಾತಿ, ಮತವನ್ನು ಮೀರಿ ಒಗ್ಗಟ್ಟಾಗಿ ನಿಲ್ಲೋಣ, ಇದಕ್ಕೆ ವ್ಯತಿರಿಕ್ತವಾದ ಯಾವುದೇ ಕ್ರಮವು ಮಾನವೀಯತೆಗೆ ದ್ರೋಹ ಬಗೆಯುವಂತಾಗಿದೆ ಎಂದು ಅವರು ಹೇಳಿದ್ದಾರೆ.

Full View 

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News