ಎಸೆಸೆಲ್ಸಿ ಪರೀಕ್ಷಾ ಕೊಠಡಿಗಳಲ್ಲಿ ಸಿಸಿ ಕ್ಯಾಮರಾ ವೆಬ್ ಕ್ಯಾಮರಾ: ರುಪ್ಸಾ ಕರ್ನಾಟಕ ಖಂಡನೆ

Update: 2024-03-24 14:26 GMT

ಬೆಂಗಳೂರು: ಯಾವುದೇ ದೊಡ್ಡ ದೊಡ್ಡ ಪರೀಕ್ಷೆಗಳಿಗೆ ಇಲ್ಲದ ಸಿಸಿ ಕ್ಯಾಮರಾ ಮತ್ತು ವೆಬ್ ಕ್ಯಾಮರಾಗಳು ಎಸೆಸೆಲ್ಸಿ ಪರೀಕ್ಷಾ ಕೊಠಡಿಗಳಲ್ಲಿ ಕಡ್ಡಾಯವಾಗಿ ಮಾಡಿರುವುದು ಏಕೆ ಎಂದು ರುಪ್ಸ ಕರ್ನಾಟಕದ ಅಧ್ಯಕ್ಷ ಲೋಕೇಶ್ ತಾಳಿಕಟ್ಟೆ ಪ್ರಶ್ನಿಸಿದ್ದಾರೆ. 

ರವಿವಾರ ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಪತ್ರ ಬರೆದಿರುವ ಅವರು, ಶಿಕ್ಷಣ ಇಲಾಖೆ ಹಾಗೂ ಪ್ರೌಢಶಾಲಾ ಪರೀಕ್ಷಾ ಮಂಡಳಿ ಇತ್ತೀಚಿನ ದಿನಗಳಲ್ಲಿ ವಿಚಿತ್ರ ಹಾಗೂ ಆಶ್ಚರ್ಯಕರವಾಗಿ ನಡೆದುಕೊಳ್ಳುತ್ತಿದೆ. ಎಸೆಸೆಲ್ಸಿ ಪರೀಕ್ಷಾ ಮೇಲ್ವಚಾರಕರಾಗಿ ಪ್ರಾಥಮಿಕ ಶಿಕ್ಷಕರನ್ನು ನೇಮಿಸಿ ಅವರಿಗೆ ತರಬೇತಿ ಸಹ ನೀಡಲಾಯಿತು. ನಂತರ ಪ್ರೌಢಶಾಲಾ ಶಿಕ್ಷಕರನ್ನು ನೇಮಿಸಿ ಪ್ರಾಥಮಿಕ ಶಾಲಾ ಶಿಕ್ಷಕರನ್ನು ಅವಮಾನಿಸಲಾಯಿತು ಎಂದಿದ್ದಾರೆ. 

ಈಗ ತರಾತುರಿಯಲ್ಲಿ ಹೊಸದಾಗಿ ಸರಕಾರಿ, ಅನುದಾನಿತಾ ಶಾಲಾ ಶಿಕ್ಷಕರನ್ನು ಮಾತ್ರ ನೇಮಿಸಿಕೊಂಡು ಅವರಿಗೆ ತರಬೇತಿ ನೀಡಿದ್ದೀರಿ, ಆದರೆ ಅನುದಾನ ರಹಿತ ಶಾಲಾ ಶಿಕ್ಷಕನ್ನು ದೂರ ಇಟ್ಟಿದ್ದೀರಿ. ತರಬೇತಿ ಹೆಸರಿನಲ್ಲಿ ಸಾರ್ವಜನಿಕರ ಹಣ ಪೋಲು ಮಾಡಲಾಗಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ. 

ಮೇಲ್ವಚಾರಕರನ್ನು ನಂಬದೆ ಪ್ರತೀ ಕೊಠಡಿಗೂ ಸಿಸಿ ಕ್ಯಾಮರಾ ಅಳವಡಿಸಿ ಅವುಗಳನ್ನು ವೆಬ್ ಲಿಂಕ್‍ಗೆ ಜೋಡಿಸಿ ಸ್ಥಳೀಯ ಪೊಲೀಸ್ ಸ್ಟೇಷನ್, ಜಿಲ್ಲಾ ಪಂಚಾಯಿತಿ, ಹಾಗೂ ಸಾರ್ವಜನಿಕರಿಗೂ ನೇರ ಸಂಪರ್ಕಕ್ಕೆ ಸಿಗುವಂತೆ ಮಾಡುವ ನಿರ್ಧಾರ ಮಾಡಲಾಗಿದೆ. ಮೂರು ದಿನದಲ್ಲಿ ಪರೀಕ್ಷೆ ನಡೆಯುವ ಎಲ್ಲಾ ಕಛೇರಿಗಳಿಗೆ ಸಿಸಿ ಕ್ಯಾಮರಾ ಅಳವಡಿಸಲೇಬೇಕು ಎಂಬ ಹುಚ್ಚು ಹಾಗೂ ಮಕ್ಕಳಿಗೆ ಭಯ ಹುಟ್ಟಿಸುವಂತಹ ದುಬಾರಿ ನಿರ್ಣಯ ಮಾಡಲಾಗಿದೆ ಎಂದು ಅವರು ಟೀಕಿಸಿದ್ದಾರೆ.

ಪರೀಕ್ಷಾ ಕೊಠಡಿಗಳಲ್ಲಿ ನಿರ್ಭೀತಿಯಿಂದ ಪರೀಕ್ಷೆ ಬರೆಯುವಂತಹ ವಾತಾವರಣ ಸೃಷ್ಟಿ ಮಾಡುವ ಬದಲು ಮಕ್ಕಳನ್ನು ಕಳ್ಳರಂತೆ, ದೊಡ್ಡ ಅಪರಾಧ ತಡೆಯುವವರಂತೆ ಈ ರೀತಿ ಅನುಮಾನಿಸುವುದು ಖಂಡನೀಯ. ಐಎಎಸ್, ನೀಟ್, ಜೆಇಇ, ಪಿಯುಸಿ ಇತ್ಯಾದಿ ಯಾವುದೇ ಪರೀಕ್ಷೆಗೆ ಇಲ್ಲದ  ಕಣ್ಗಾವಲು ಎಸೆಸೆಲ್ಸಿ ವಿದ್ಯಾರ್ಥಿಗಳಿಗೆ ಏಕೆ ಈ ರೀತಿಯ ಶಿಕ್ಷೆ. ಇಂತಹ ಕೆಟ್ಟ, ಅಸಾಂಪ್ರದಾಯಿಕ ಪದ್ಧತಿಗಳನ್ನು ರೂಪಿಸುವ ವಿಕೃತ ಅಧಿಕಾರಿ ಅಥವಾ ಇನ್ನಾರೇ ಆದರೂ ನಿರ್ದಾಕ್ಷಿಣ್ಯವಾಗಿ ಕ್ರಮ ಜರುಗಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.


Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News