ಬೆಂಗಳೂರಿನಲ್ಲಿ ಮಳೆ ಅನಾಹುತ | ʼವಿಪತ್ತು ನಿರ್ವಹಣಾ ತಂಡʼ ನಿಯೋಜನೆ : ಮುಖ್ಯ ಆಯುಕ್ತ ತುಷಾರ್ ಗಿರಿನಾಥ್

Update: 2024-05-13 13:39 GMT

ಬೆಂಗಳೂರು : ನಗರದಲ್ಲಿ ಈಗಾಗಲೇ ಮಳೆಗಾಲ ಪ್ರಾರಂಭವಾಗಿದ್ದು, ಮಳೆಯಿಂದ ಉಂಟಾಗುವ ವಿಪತ್ತು ನಿರ್ವಹಣೆಗಾಗಿ ಆಯಾ ವಲಯಗಳ ಉಪ ವಿಭಾಗಗಳ ಹಂತದಲ್ಲಿ ‘ವಿಪತ್ತು ನಿರ್ವಹಣಾ ತಂಡ’ಗಳನ್ನು ನಿಯೋಜನೆ ಮಾಡಲಾಗುವುದು ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ತಿಳಿಸಿದ್ದಾರೆ.

ಸೋಮವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು," ತಗ್ಗು ಪ್ರದೇಶಗಳಿಗೆ ಮಳೆ ನೀರು ನುಗ್ಗುವುದು, ಮ್ಯಾನ್‍ಹೋಲ್‍ಗಳು ತೆರೆದುಕೊಳ್ಳುವುದು, ಮರ, ವಿದ್ಯುತ್ ಕಂಬಗಳು ಬೀಳುವುದನ್ನು ಹಾಗೂ ಮಳೆಯಿಂದಾಗುವ ಅನಾಹುತಗಳನ್ನು ತಡೆಗಟ್ಟುವ ಸಲುವಾಗಿ ಆಯಾ ವಲಯಗಳ ಉಪ ವಿಭಾಗಗಳಲ್ಲಿ ಪಾಲಿಕೆ, ಜಲಮಂಡಳಿ, ಬೆಸ್ಕಾಂ, ಮೆಟ್ರೋ, ಅಗ್ನಿಶಾಮಕ ಸಹಿತ ಇನ್ನಿತರೆ ಇಲಾಖೆಗಳ ಅಧಿಕಾರಿಗಳನ್ನೊಳಗೊಂಡ ವಿಪತ್ತು ನಿರ್ವಹಣಾ ತಂಡಗಳನ್ನು ನಿಯೋಜನೆ ಮಾಡಿಕೊಳ್ಳಬೇಕು ಎಂದು ಸೂಚಿಸಿದರು.

ನಗರದಲ್ಲಿ ಒಂದು ವಾರದಿಂದ ಬೇರೆ ಬೇರೆ ಸ್ಥಳಗಳಲ್ಲಿ ಮಳೆಯಾಗುತ್ತಿದ್ದು, ಒಂದು ಕಡೆ ಒಂದೊಂದು ರೀತಿಯಲ್ಲಿ ಮಳೆಯಾಗುತ್ತಿದೆ. ಕೆಲವಡೆ ಸಾಮಾನ್ಯ, ಇನ್ನು ಕೆಲವೆಡೆ ಮಧ್ಯಮ ಹಾಗೂ ಹೆಚ್ಚಾಗಿ ಮಳೆಯಾಗಿರುವ ವರದಿಯಾಗಿದೆ. ನಾಲ್ಕೈದು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಸುಮಾರು 150 ಕಡೆ ನೀರು ನಿಂತಿದೆ. ನಿಂತ ನೀರು 2 ಗಂಟೆಯೊಳಗಾಗಿ ಹರಿದುಹೋಗಿದ್ದು, ಯಾವುದೇ ರೀತಿಯ ಸಮಸ್ಯೆಯಾಗಿರುದಿಲ್ಲ ಎಂದು ಹೇಳಿದರು.

ನಗರದಲ್ಲಿ ಮಳೆ ಪ್ರಾರಂಭವಾದಾಗಿನಿಂದ 325 ಮರಗಳು ಬಿದ್ದಿದ್ದು, ಅದರಲ್ಲಿ 320 ಮರಗಳನ್ನು ತೆರವುಗೊಳಿಸಲಾಗಿದೆ. ಅಲ್ಲದೆ 698 ರೆಂಬೆ ಕೊಂಬೆಗಳು ಬಿದ್ದಿದ್ದು, 650 ತೆರವುಗೊಳಿಸಲಾಗಿದೆ. ಉಳಿದ ಮರ, ರೆಂಬೆ/ಕೊಂಬೆಗಳನ್ನು ತ್ವರಿತಗತಿಯಲ್ಲಿ ತೆರವುಗೊಳಿಸಲಾಗುವುದು ಎಂದು ಅವರು ಹೇಳಿದರು.

ಮಳೆಯಿಂದಾಗಿ ಧರಗುರುಳಿದ ಮರ, ರೆಂಬೆ/ಕೊಂಬೆಗಳನ್ನು ತೆರವುಗೊಳಿಸಲು 39 ತಂಡಗಳು ಕಾರ್ಯನಿರ್ವಹಿಸುತ್ತಿದ್ದು, ಕಟಾವು ಮಾಡಿ ರಸ್ತೆ ಬದಿ ಹಾಕಿರುವಂತಹ ರೆಂಬೆ/ಕೊಂಬೆಗಳನ್ನು ತ್ವರಿತಗತಿಯಲ್ಲಿ ವಿಲೇವಾರಿ ಮಾಡಲು ಕ್ರಮ ಕೈಗೊಳ್ಳಲು ಸಂಬಂಧಪಟ್ಟವರಿಗೆ ಸೂಚನೆ ನೀಡಲಾಗಿದೆ ಎಂದು ಅವರು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News