ಸ್ವಪಕ್ಷೀಯರಿಂದಲೇ ಟ್ರೋಲ್ ಆದ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ.ಸುಧಾಕರ್..!
ಬೆಂಗಳೂರು: ಮಾಜಿ ಸಚಿವ ಡಾ.ಕೆ.ಸುಧಾಕರ್ ಅವರಿಗೆ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ನೀಡಿರುವ ಕ್ರಮವನ್ನು ವಿರೋಧಿಸಿ ‘ಗೋ ಬ್ಯಾಕ್ ಸುಧಾಕರ್' ಅಭಿಯಾನ ಆರಂಭವಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋವೊಂದು ವೈರಲ್ ಆಗಿದೆ.
ಯಲಹಂಕ ಕ್ಷೇತ್ರದ ಬಿಜೆಪಿ ಶಾಸಕ ಎಸ್.ಆರ್.ವಿಶ್ವನಾಥ್ ಬೆಂಬಲಿಗರು, ಸೋಮವಾರ ಯಲಹಂಕದ ಕೆಂಪೇಗೌಡ ವೃತ್ತದಲ್ಲಿ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದ್ದರು. ಈ ವೇಳೆ ವ್ಯಂಗ್ಯವಾದ ಹಾಡಿನ ಮೂಲಕ ಸುಧಾಕರ್ ಗೆ ಟಿಕೆಟ್ ನೀಡಿದ ಕ್ರಮವನ್ನು ವಿರೋಧಿಸಿ ಆಕ್ರೋಶ ಹೊರಹಾಕಿದ್ದು, ಈ ದೃಶ್ಯವೂ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಈ ವೇಳೆ ಬಿಜೆಪಿ ಕಾರ್ಯಕರ್ತರು, ಸುಧಾಕರ್ ವಿರುದ್ಧ ಘೋಷಣೆ ಕೂಗಿದರು. ಟೈರ್ ಸುಟ್ಟು ಆಕ್ರೋಶ ವ್ಯಕ್ತಪಡಿಸಿದಲ್ಲದೆ, ಕೋವಿಡ್ ಸೋಂಕಿನ ಸಂದರ್ಭದಲ್ಲಿ ಔಷಧಿ ಸಾಮಗ್ರಿಗಳ ಖರೀದಿಯಲ್ಲಿ ಸುಧಾಕರ್ ಭ್ರಷ್ಟಾಚಾರ ಮಾಡಿದ್ದಾರೆ ಎಂದು ಆರೋಪಿಸಿ ರೋಗಿಗಳ ಶವ ಸಂಸ್ಕಾರದ ಅಣುಕು ಪ್ರದರ್ಶಿಸಿದ್ದರು.
ಮುಖಂಡರು ಹಾಗೂ ಕಾರ್ಯಕರ್ತರ ಕಷ್ಟ ಕೇಳದ ಮತ್ತು ಮತದಾರರಿಗೆ ಕಿಂಚಿತ್ತೂ ಸ್ಪಂದಿಸದ ಸುಧಾಕರ್ ಗೆ ಚಿಕ್ಕಬಳ್ಳಾಪುರ ಕ್ಷೇತ್ರದ ಬಿಜೆಪಿ ಟಿಕೆಟ್ ನೀಡಿರುವುದು ಸರಿಯಲ್ಲ. ಜನಸಾಮಾನ್ಯರ ಬಳಿಗೆ ತೆರಳಿ ಮತ ಕೇಳಲು ಮುಜುಗರ ಉಂಟಾಗುವಂತಹ ಪರಿಸ್ಥಿತಿ ನಿರ್ಮಾಣ ಮಾಡಿದ್ದಾರೆ ಎಂದು ಬಿಜೆಪಿ ಕಾರ್ಯಕರ್ತರು ಬೇಸರ ವ್ಯಕ್ತಪಡಿಸಿದ್ದರು.
ಬಿಜೆಪಿ ಅಭ್ಯರ್ಥಿಗಳು ಲಾಯಕ್ಕಿಲ್ಲದವರು : ಕಾಂಗ್ರೆಸ್
ಈ ಸಂಬಂಧ ಪ್ರತಿಕ್ರಿಯಿಸಿರುವ ಕಾಂಗ್ರೆಸ್, "ಬಿಜೆಪಿ ಅಭ್ಯರ್ಥಿಗಳು ಲಾಯಕ್ಕಿಲ್ಲದವರು ಎಂದು ಬಿಜೆಪಿ ಕಾರ್ಯಕರ್ತರೇ ಸರ್ಟಿಫಿಕೇಟ್ ನೀಡಿದ್ದಾರೆ. ಮುಂದೆ ಮತದಾರರು ಸರ್ಟಿಫಿಕೇಟ್ ಕೊಡಲಿದ್ದಾರೆ. ‘ಓ ನಲ್ಲ, ನೀನಲ್ಲ, ಚಿಕ್ಕಬಳ್ಳಾಪುರ ಕ್ಷೇತ್ರಕ್ಕೆ ನೀ ಲಾಯಕ್ಕಿಲ್ಲ’ ಎಂದು ಬಿಜೆಪಿ ಕಾರ್ಯಕರ್ತರು ಬಿಜೆಪಿ ಅಭ್ಯರ್ಥಿ ವಿರುದ್ಧವೇ ಬೀದಿಗೆ ಇಳಿದಿದ್ದಾರೆ ಎಂದು ವ್ಯಂಗ್ಯವಾಡಿದೆ.
ಆತ್ಮೀಯ ರಾಜ್ಯ ಬಿಜೆಪಿ, ಬಿಜೆಪಿ ಅಭ್ಯರ್ಥಿಗಳು ಲಾಯಕ್ಕಿಲ್ಲದವರು, ಬಿಜೆಪಿ ಆಡಳಿತಕ್ಕೆ ಲಾಯಕ್ಕಿಲ್ಲದ ಪಕ್ಷ, ಬಿಜೆಪಿಯ ಪ್ರಧಾನಿ ಅಭ್ಯರ್ಥಿಯೂ ಲಾಯಕ್ಕಿಲ್ಲದ ಮನುಷ್ಯ. ಇದು ನಾಡಿನ ಜನತೆಗೆ ಅರ್ಥವಾಗಿರುವ ಸತ್ಯ ಎಂದು ಕಾಂಗ್ರೆಸ್ ಹೇಳಿದೆ ಎಕ್ಸ್ ಪೋಸ್ಟ್ ನಲ್ಲಿ ಬರೆದುಕೊಂಡಿದೆ.