ಚಿಕ್ಕಮಗಳೂರು| ಶೋಭಾಯಾತ್ರೆ ವೇಳೆ ಪೊಲೀಸರ ಕರ್ತವ್ಯಕ್ಕೆ ಅಡ್ಡಿ ಆರೋಪ: 6 ಬಜರಂಗದಳ ಕಾರ್ಯಕರ್ತರ ವಿರುದ್ಧ ಎಫ್‍ಐಆರ್ ದಾಖಲು

Update: 2023-12-24 13:04 GMT

ಚಿಕ್ಕಮಗಳೂರು: ತಾಲೂಕಿನ ಆಲ್ದೂರು ಪಟ್ಟಣದಲ್ಲಿ ದತ್ತಜಯಂತಿ ಅಂಗವಾಗಿ ಶನಿವಾರ ಸಂಜೆ ವಿಎಚ್‍ಪಿ ಹಾಗೂ ಬಜರಂಗದಳದ ವತಿಯಿಂದ ಹಮ್ಮಿಕೊಂಡಿದ್ದ ಶೋಭಾಯಾತ್ರೆ ವೇಳೆ ಪೊಲೀಸ್ ಅಧಿಕಾರಿಗಳ ಸೂಚನೆ ಮೀರಿ ನಿಷೇಧಿತ ಸ್ಥಳದಲ್ಲಿ ಪಟಾಕಿ ಸಿಡಿಸಿದ್ದಲ್ಲದೇ, ಪೊಲೀಸ್ ಅಧಿಕಾರಿಗಳ ಕರ್ತವ್ಯಕ್ಕೆ ಬಜರಂಗದಳದ ಕಾರ್ಯಕರ್ತರು ಅಡ್ಡಿಪಡಿಸಿರುವ ಘಟನೆ ನಡೆದಿದ್ದು, ಈ ಪ್ರಕರಣ ಸಂಬಂಧ ಬಜರಂಗದಳದ 6 ಮಂದಿ ಕಾರ್ಯಕರ್ತರ ವಿರುದ್ಧ ಆಲ್ದೂರು ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿದೆ.

ಈ ಶೋಭಾಯಾತ್ರೆಯಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹಾಗೂ ಮಾಜಿ ಸಚಿವ ಸಿ.ಟಿ.ರವಿ ಸೇರಿದಂತೆ ಬಿಜೆಪಿ ಪಕ್ಷದ ಜಿಲ್ಲಾ ಮಟ್ಟದ ಮುಖಂಡರೂ ಭಾಗವಹಿಸಿದ್ದರು. ಪಟ್ಟಣದಲ್ಲಿರುವ ಜಾಮಿಯಾ ಮಸೀದಿ ಎದುರು ಶೋಭಾಯಾತ್ರೆ ಆಗಮಿಸುತ್ತಿದ್ದಂತೆ ಬಜರಂಗದಳ ಕೆಲ ಮುಖಂಡರು, ಕಾರ್ಯಕರ್ತರು ಮಸೀದಿ ಎದುರೇ ಪಟಾಕಿ ಸಿಡಿಸಲು ಮುಂದಾಗಿದ್ದಾರೆ. ಈ ವೇಳೆ ಶೋಭಾಯಾತ್ರೆಯ ಬಂದೋಬಸ್ತಿನಲ್ಲಿದ್ದ ಆಲ್ದೂರು ಠಾಣಾಧಿಕಾರಿ ಅಕ್ಷಿತಾ ಅವರು, ಮಸೀದಿ ಎದುರು ಪಟಾಕಿ ಸಿಡಿಸಲು ಅನುಮತಿ ಇಲ್ಲ ಎಂದು ಸೂಚನೆ ನೀಡಿದರೂ ಕಾರ್ಯಕರ್ತರು ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಲ್ಲದೇ ನಿಷೇಧಿತ ಪ್ರದೇಶದಲ್ಲಿ ಪಟಾಕಿ ಸಿಡಿಸಿದ್ದಾರೆ ಎಂದು ಆಲ್ದೂರು ಪೊಲೀಸ್ ಠಾಣಾಧಿಕಾರಿ ದಾಖಲಿಸಿಕೊಂಡಿರುವ ದೂರಿನಲ್ಲಿ ತಿಳಿಸಲಾಗಿದೆ.

ಏಕಾಏಕಿ ಪಟಾಕಿ ಸಿಡಿಸಿದ್ದರಿಂದಾಗಿ ಪಟಾಕಿಯ ಕಿಡಿ ಆಲ್ದೂರು ಠಾಣಾಧಿಕಾರಿ ಅಕ್ಷಿತಾ ಅವರ ಹಣೆಗೆ ತಾಗಿ ಗಾಯವಾಗಿದ್ದು, ಇದೇ ವೇಳೆ ಬಂದೋಬಸ್ತ್ ಉಸ್ತುವಾರಿ ಕರ್ತವ್ಯದಲ್ಲಿದ್ದ ಚಿಕ್ಕಮಗಳೂರು ಡಿವೈಎಸ್ಪಿ ಶೈಲೇಂದ್ರ ಅವರ ಸಮವಸ್ತ್ರದ ಪ್ಯಾಂಟ್‍ಗೂ ಪಟಾಕಿ ಕಿಡಿ ಹಾರಿದ್ದರಿಂದ ಅಲ್ಲಲ್ಲಿ ಸುಟ್ಟಿದೆ. ಶೋಭಾಯಾತ್ರೆಯು ಆಲ್ದೂರು ಪಟ್ಟಣದ ಕೆಂಪೇಗೌಡ ಸರ್ಕಲ್ ಬಳಿ ಬಂದಿದ್ದ ವೇಳೆ ಕಾರ್ಯಕರ್ತರು ಮತ್ತೆ ಪಟಾಕಿ ಸಿಡಿಸಲು ಮುಂದಾಗಿದ್ದಾರೆ. ಈ ವೇಳೆ ಸ್ಥಳದಲ್ಲಿದ್ದ ಪೊಲೀಸ್ ಅಧಿಕಾರಿಗಳು, ನಿಷೇಧಿತ ಪ್ರದೇಶವಾಗಿರುವುದರಿಂದ ಪಟಾಕಿ ಸಿಡಿಸುವಂತಿಲ್ಲ, ಜಿಲ್ಲಾಧಿಕಾರಿ ಆದೇಶವಿದೆ ಎಂದು ಸೂಚನೆ ನೀಡಿದ್ದಾರೆ.

ಈ ಸಂದರ್ಭದಲ್ಲಿ ಬಜರಂಗದಳದ ಕಾರ್ಯಕರ್ತರು ಮತ್ತೆ ಪೊಲೀಸ್ ಅಧಿಕಾರಿಗಳನ್ನು ಸುತ್ತುವರಿದು ಕರ್ತವ್ಯಕ್ಕೆ ಅಡ್ಡಿಸಿದ್ದಲ್ಲೇ, ದತ್ತ ವಿಗ್ರಹದ ಅಡ್ಡೆಯ ಕೋಲಿನಿಂದ ಉದ್ದೇಶಪೂರ್ವಕವಾಗಿ ಪೊಲೀಸ್ ಕಾನ್ಸ್ಟೇಬಲ್ ಚಂದ್ರಪ್ಪ ಎಂಬವರ ಭುಜಕ್ಕೆ ಹೊಡೆಯಲಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಈ ಘಟನೆ ಸಂಬಂಧ ಬಜರಂಗದಳದ ಕಾರ್ಯಕರ್ತರಾದ ನಾಗರಾಜ, ಸತೀಶ, ಬನ್ನೂರು ನವೀನ, ತುಡುಕೂರು ಮಂಜು, ಹಾಂದಿ ಸುನಿಲ್, ಪ್ರಜ್ವಲ್ ಎಂಬವರ ವಿರುದ್ಧ ಎಫ್‍ಐಆರ್ ದಾಖಲಿಸಿಕೊಂಡಿದ್ದಾರೆ. ಎಫ್‍ಐಆರ್ ದಾಖಲಾಗುತ್ತಿದ್ದಂತೆ ಆರೋಪಿಗಳು ತಲೆಮರೆಸಿಕೊಂಡಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆಂದು ತಿಳಿದು ಬಂದಿದೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News