ಚಿಕ್ಕಮಗಳೂರು | ಸೈಬರ್ ವಂಚನೆ : 17 ಲಕ್ಷ ರೂ. ಕಳೆದುಕೊಂಡ ಬ್ಯಾಂಕ್ ಉದ್ಯೋಗಿ

Update: 2024-06-14 17:50 GMT

ಚಿಕ್ಕಮಗಳೂರು : ಮುಂಬೈ ಕ್ರೈಂ ಪೊಲೀಸ್ ಠಾಣೆಯಲ್ಲಿ ನಿಮ್ಮ ಮೇಲೆ ಪ್ರಕರಣ ದಾಖಲಾಗಿದ್ದು, ಹಣ ನೀಡಿದರೆ ಕೇಸ್ ರದ್ದು ಮಾಡುತ್ತೇವೆಂದು ನಗರದ ಬ್ಯಾಂಕ್ ಉದ್ಯೋಗಿಯೊಬ್ಬರಿಗೆ ಸೈಬರ್ ವಂಚಕರು ವೀಡಿಯೊ ಕರೆ ಮಾಡಿದ್ದಲ್ಲದೆ ನಕಲಿ ಎಫ್‌ಐಆರ್ ದಾಖಲೆ ತೋರಿಸಿ ಅವರಿಂದ 17ಲಕ್ಷ ರೂ. ಪಡೆದು ವಂಚನೆ ಮಾಡಿರುವ ಬಗ್ಗೆ ಜಿಲ್ಲಾ ಸಿಇಎನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಜಿಲ್ಲೆಯ ನರಸಿಂಹರಾಜಪುರ ತಾಲೂಕಿನಲ್ಲಿರುವ ಬ್ಯಾಂಕ್ ಒಂದರಲ್ಲಿ ಉದ್ಯೋಗಿಯಾಗಿದ್ದ ವ್ಯಕ್ತಿಗೆ ಕೆಲ ದಿನಗಳ ಹಿಂದೆ ವೀಡಿಯೊ ಕಾಲ್ ಮಾಡಿದ್ದ ಸೈಬರ್ ವಂಚಕರು, ನಿಮ್ಮ ವಿರುದ್ಧ ಮುಂಬೈ ಕ್ರೈಂ ಪೊಲೀಸ್ ಠಾಣೆಯಲ್ಲಿ ಗಂಭೀರ ಅಪರಾಧ ಪ್ರಕರಣವೊಂದು ದಾಖಲಾಗಿದೆ. ಈ ಪ್ರಕರಣದಲ್ಲಿ ನಿಮ್ಮನ್ನು ಬಂಧಿಸಲಾಗುವುದು. ನಿಮ್ಮನ್ನು ಬಂಧಿಸದೇ ಕೇಸ್ ಮುಕ್ತಾಯ ಮಾಡಬೇಕಿದ್ದರೆ ನಾವು ಕೇಳಿದಷ್ಟು ಹಣ ನೀಡಬೇಕೆಂದು ಹೆದರಿಸಿದ್ದಾರೆ. ಅಲ್ಲದೇ ನಕಲಿ ಎಫ್‌ಐಆರ್‌ನ ಪ್ರತಿಯೊಂದನ್ನು ಸ್ಕೈಪ್ ವೀಡಿಯೊ ಕಾಲ್‌ನಲ್ಲಿ ತೋರಿಸಿದ್ದ ವಂಚಕರು, 17 ಲಕ್ಷ ರೂ. ನೀಡಬೇಕು. ತಪ್ಪಿದಲ್ಲಿ ನಿಮ್ಮನ್ನು ಅರೆಸ್ಟ್ ಮಾಡಲಾಗುವುದು ಎಂದು ಬೆದರಿಸಿದ್ದಾರೆ ಎನ್ನಲಾಗಿದೆ.

ಸೈಬರ್ ವಂಚಕರ ಈ ಕರೆಯ ಬಗ್ಗೆ ಪರಿಶೀಲನೆ ನಡೆಸದ ಬ್ಯಾಂಕ್ ಉದ್ಯೋಗಿ ಪೊಲೀಸರಿಗೂ ಮಾಹಿತಿ ನೀಡದೇ 17 ಲಕ್ಷ ರೂ.ಯನ್ನು ಸೈಬರ್ ವಂಚಕರು ನೀಡಿದ್ದ ಖಾತೆಗೆ ಜಮೆ ಮಾಡಿದ್ದಾರೆ. ಹಣ ನೀಡಿದ ಬಳಿಕ ತನ್ನ ಮೇಲಿನ ಪ್ರಕರಣದ ಬಗ್ಗೆ ಪರಿಶೀಲನೆ ನಡೆಸಿದ ಬ್ಯಾಂಕ್ ಉದ್ಯೋಗಿಗೆ ತಾನು ಮೋಸ ಹೋಗಿರುವುದು ಗೊತ್ತಾಗಿದ್ದು, ಜೂ.10ರಂದು ದೂರು ದಾಖಲಿಸಿದ್ದಾರೆ. ದೂರಿನ ಮೇರೆಗೆ ಪೊಲೀಸರು ಪ್ರಕರಣದ ತನಿಖೆ ಆರಂಭಿಸಿದ್ದಾರೆ.

ಸೈಬರ್ ವಂಚನೆ ಬಗ್ಗೆ ಎಚ್ಚರದಿಂದಿರಲು ಪೊಲೀಸ್ ಇಲಾಖೆ ಪ್ರಕಟನೆ: ಇತ್ತೀಚಿನ ದಿನಗಳಲ್ಲಿ ಸೈಬರ್ ವಂಚಕರು ಜನರನ್ನು ವಂಚಿಸಿ ಹಣ ಗಳಿಸಲು ಹಲವಾರು ದಾರಿಗಳನ್ನು ಹುಡುಕಿಕೊಂಡಿದ್ದು, ಇದರಲ್ಲಿ ಡಿಜಿಟಲ್ ಅರೆಸ್ಟ್ ಎಂಬ ಹೊಸ ತಂತ್ರವೊಂದಾಗಿದೆ. ಈ ವಂಚನೆಯಲ್ಲಿ ಆರೋಪಿಗಳು, ಸಾರ್ವಜನಿಕರಿಗೆ ಕರೆ ಮಾಡಿ, ನಿಮ್ಮ ಮೇಲೆ ಸಿಬಿಐ, ಸಿಐಡಿ, ಐಟಿಯಂತಹ ಸಂಸ್ಥೆಗಳಲ್ಲಿ ಅಥವಾ ವಿವಿಧ ಪೊಲೀಸ್ ಠಾಣೆಯಲ್ಲಿ ಭಯೋತ್ಪಾದನೆ, ದೇಶ ವಿರೋಧಿ ಕೃತ್ಯ, ಮನಿ ಲಾಂಡರಿಂಗ್‌ನಂತಹ ಕೇಸ್‌ಗಳು ದಾಖಲಾಗಿವೆ ಎಂದು ಹೇಳಿ, ನಕಲಿ ಎಫ್‌ಐಆರ್ ಪ್ರತಿಗಳನ್ನು ತೋರಿಸಿ ನಿಮ್ಮನ್ನು ಶೀಘ್ರ ಬಂಧಿಸಲಾಗುವುದು ಎಂದು ಹೆದರಿಸುತ್ತಾರೆ. ನಂತರ ಈ ಕೇಸ್‌ಗಳನ್ನು ಮುಕ್ತಾಯ ಮಾಡಲು ಅಥವಾ ಬಂಧನದಿಂದ ಪಾರು ಮಾಡಲು ಲಕ್ಷಾಂತರ ರೂ. ಕೇಳುತ್ತಿದ್ದಾರೆ. ಸಾರ್ವಜನಿಕರು ಇಂತಹ ಕರೆಗಳನ್ನು ಪರಿಶೀಲಿಸದೇ ಭೀತಿಯಿಂದ ವಂಚಕರು ಕೇಳಿದಷ್ಟು ಹಣ ನೀಡಿ ಮೋಸ ಹೋಗುತ್ತಿದ್ದಾರೆ. ಇಂತಹ ಕರೆಗಳ ಬಗ್ಗೆ ಎಚ್ಚರಿಕೆಯಿಂದ ಇರಬೇಕು. ಯಾವುದೇ ಸೈಬರ್ ವಂಚನೆಗಳ ಬಗ್ಗೆ ಸಾರ್ವಜನಿಕರು ಕೂಡಲೇ ಟೋಲ್ ಫ್ರೀ ಸಂಖ್ಯೆ 1930ಕ್ಕೆ ಕರೆ ಮಾಡಿ ದೂರು ದಾಖಲಿಸಬೇಕು ಎಂದು ಜಿಲ್ಲಾ ಪೊಲೀಸ್ ಇಲಾಖೆ ಪ್ರಕಟನೆಯಲ್ಲಿ ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News