ಚಿತ್ರಕಲಾ ಪರಿಷತ್ತು ರಾಷ್ಟ್ರದ ಪ್ರತಿಷ್ಠಿತ ಸಂಸ್ಥೆ: ಸಚಿವ ಎಚ್.ಕೆ.ಪಾಟೀಲ್ ಮೆಚ್ಚುಗೆ
ಬೆಂಗಳೂರು : ಕರ್ನಾಟಕದ ಚಿತ್ರಕಲಾ ಪರಿಷತ್ತು ರಾಷ್ಟ್ರದ ಪ್ರತಿಷ್ಠಿತ ಸಂಸ್ಥೆಯಾಗಿದೆ. ಇಲ್ಲಿ ನಾಳೆ (ಜ.5)22ನೆ ಚಿತ್ರಸಂತೆ ಏರ್ಪಡಿಸಲಾಗಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳು ಮತ್ತು ಪ್ರವಾಸೋದ್ಯಮ ಸಚಿವ ಎಚ್.ಕೆ.ಪಾಟೀಲ್ ತಿಳಿಸಿದ್ದಾರೆ.
ಶನಿವಾರ ಚಿತ್ರಕಲಾ ಪರಿಷತ್ತು ಆಯೋಜಿಸಿದ್ದ ಚಿತ್ರಕಲಾ ಸಮ್ಮಾನ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಐದು ಜನ ಸಾಧಕರಿಗೆ ತಲಾ 50ಸಾವಿರ ರೂ.ಗಳ ನಗದು ಹಾಗೂ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಅವರು, ಈ ಸಂಸ್ಥೆಗೆ ಒಂದು ವಿಶೇಷವಾದ ಗೌರವವಿದೆ. ಈ ಹಿಂದೆ ಎಐಸಿಸಿಯು ಕಾಂಗ್ರೆಸ್ ಪ್ರದರ್ಶನ ಏರ್ಪಡಿಸಿದ ಸಂದರ್ಭದಲ್ಲಿ ಪರಿಷತ್ತಿನಿಂದ ಮಾಡಿಕೊಟ್ಟ ಕಾಂಗ್ರೆಸ್ ಅಧ್ಯಕ್ಷರ ಪುತ್ಥಳಿ ರಾಷ್ಟ್ರದ ಗಮನ ಸೆಳೆಯಿತು ಎಂದರು.
ಚಿತ್ರಕಲಾ ಪರಿಷತ್ತು ಪ್ರತಿವರ್ಷ ಹೊಸ ಚಟವಟಿಕೆಗಳನ್ನು ಪ್ರಾರಂಭ ಮಾಡುತ್ತದೆ. ಚಿತ್ರಸಂತೆ ಹಿಂದಿನಂತೆ ಸಂತೆಯಾಗಿ ಉಳಿದಿಲ್ಲ ಜಾತ್ರೆಯಾಗಿದೆ. 14 ಗ್ಯಾಲರಿಗಳನ್ನು ಹೊಂದಿದ್ದು, ಚಿತ್ರ ಕಲಾವಿದರನ್ನು ಪ್ರೋತ್ಸಾಹಿಸಲು ಹಾಗೂ ಮಾರುಕಟ್ಟೆ ಕಲ್ಪಿಸುವ ಉದ್ದೇಶದಿಂದ ಯಾವುದೇ ಕಮಿಷನ್, ಶುಲ್ಕವಿಲ್ಲದೆ ಉಚಿತವಾಗಿ ಚಿತ್ರ ಪ್ರದರ್ಶನ ಏರ್ಪಡಿಸುತ್ತಾ ಬಂದಿದೆ. ಪರಿಷತ್ತಿನಿಂದ ಹಮ್ಮಿಕೊಳ್ಳಲಾಗುತ್ತಿರುವ ಇಂತಹ ಕಾರ್ಯಕ್ರಮಗಳು ಎಲ್ಲರ ಗಮನ ಸೆಳೆಯುತ್ತದೆ ಎಂದು ಅವರು ಹೇಳಿದರು.
ಆಸಕ್ತ ವಿದ್ಯಾರ್ಥಿಗಳಿಗಾಗಿ ಕಲಿಕೆಗೋಸ್ಕರ ಸಂಜೆ ಕಾಲೇಜು ಪ್ರಾರಂಭಿಸಿರುವುದಕ್ಕೆ ಚಿತ್ರಕಲಾ ಪರಿಷತ್‍ಗೆ ಸಚಿವರು ಅಭಿನಂದನೆ ಸಲ್ಲಿಸಿದರು. ಬೆಂಗಳೂರು ಹೊರತುಪಡಿಸಿ ಎಲ್ಲಿಯೂ ಈ ರೀತಿಯ ಸಂಜೆ ಕಾಲೇಜು ಇಲ್ಲ. ಚಿತ್ರಕಲಾ ಪರಿಷತ್ತಿನ ಘಟಕಗಳು, ಶಾಖೆಗಳನ್ನು ಬೇರೆ ಕಡೆಗಳಲ್ಲಿಯು ಪ್ರಾರಂಭಿಸಬೇಕು. ಗದಗದಲ್ಲಿ ಚಿತ್ರಕಲಾ ಪರಿಷತ್ತು ಶಾಖೆ ತೆರಯುವುದಾದರೆ ಸಕಾರದಿಂದ ಸಹಕಾರ ನೀಡಲಾಗುವುದು ಎಂದು ಅವರು ನುಡಿದರು.
ಪ್ರವಾಣಿ ತಾಣಗಳಿಗೆ ಆಗಮಿಸುವ ಪ್ರವಾಸಿಗರಿಗೆ ಚಿತ್ರಕಲಾ ಪರಿಷತ್ತಿಗೆ ಭೇಟಿ ನೀಡಲು ಕೋವಿಡ್-19ರ ನಂತರ ಸರಿಯಾದ ಬಸ್ ವ್ಯವಸ್ಥೆ ಇರುವುದಿಲ್ಲ. ಪ್ರವಾಸೋದ್ಯಮ ಇಲಾಖೆಯ ವತಿಯಿಂದ ಬಸ್ ವ್ಯವಸ್ಥೆ ಮಾಡಲಾಗುವುದು. ಇಲಾಖೆಯ ವತಿಯಿಂದ ಚಿತ್ರಕಲಾ ಪರಿಷತ್ತಿಗೆ ಎಲ್ಲ ರೀತಿಯ ಸಹಕಾರ ನೀಡಲಾಗುವುದು. ಇಂದು ನಾನು ಶ್ರೇಷ್ಠ ಕಲಾವಿದರಿಗೆ ಪ್ರಶಸ್ತಿ ಪ್ರದಾನ ಮಾಡಿದ್ದು ಹೆಮ್ಮೆಯ ಸಂಗತಿ ಎಂದರು.
ಚಿತ್ರಕಲಾ ಪರಿಷತ್ತಿನ ಅಧ್ಯಕ್ಷ ಡಾ.ಬಿ.ಎಲ್.ಶಂಕರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ನಾಳೆ ನಡೆಯುವ ಚಿತ್ರಸಂತೆಗೆ 22 ರಾಜ್ಯಗಳಿಂದ 3,470 ಕಲಾವಿದರು ಅರ್ಜಿಗಳನ್ನು ಸಲ್ಲಿಸಿದ್ದಾರೆ. ಇವುಗಳಲ್ಲಿ ಸುಮಾರು 1500 ಕಲಾವಿದರಿಗೆ ಮಾತ್ರ ಅವಕಾಶ ಕಲ್ಪಿಸಲಾಗುವುದು. ಉಳಿದವರಿಗೆ ನಿರಾಸೆಯಾಬಾರದು ಎಂಬ ಉದ್ದೇಶದಿಂದ ಆನ್‍ಲೈನ್‍ನಲ್ಲಿ ಒಂದು ತಿಂಗಳ ಕಾಲ ಪ್ರದರ್ಶಿಸಲಾಗುವುದು ಎಂದರು.
ಚಿತ್ರಕಲಾ ಪರಿಷತ್ತನ್ನು ಕಟ್ಟಿ ಬೆಳೆಸಲು ಸಕ್ರಿಯ ಪಾತ್ರ ವಹಿಸಿದ ಡಿ.ದೇವರಾಜ ಅರಸು, ವೈ.ಸುಬ್ರಮಣ್ಯ ರಾಜು, ಎಚ್.ಕೆ.ಕ್ರೇಜಿವಾಲ್, ಎಂ.ಆರ್ಯಮೂರ್ತಿ ಹೆಸೆರಿನಲ್ಲಿ ಪ್ರಶಸ್ತಿಗಳನ್ನು 8ವರ್ಷಗಳಿಂದ ನೀಡಲಾಗುತ್ತಿತ್ತು. ಈ ಸಾರಿ ಚಿತ್ರಕಲಾ ಪರಿಷತ್ತಿಗೆ ತಮ್ಮ ಅಮೂಲ್ಯವಾದ ಕೊಡುಗೆ ನೀಡಿದ ಕೆ.ಎಸ್. ನಾಗರತ್ನಮ್ಮ ಅವರ ಹೆಸರಿನಲ್ಲಿಯೂ ಈ ಸಾಲಿನಿಂದ ಪ್ರಶಸ್ತಿ ನೀಡಲಾಗುತ್ತಿದೆ ಎಂದರು.
ಈ ಸಾಲಿನಲ್ಲಿ ಪ್ರಶಸ್ತಿಗೆ ಭಾಜನರಾಗಿರುವ ಡಾ.ಎಂ.ಎಸ್.ಮೂರ್ತಿ, ಎ.ರಾಮಕೃಷ್ಣಪ್ಪ ಜಿ.ಎಲ್.ಭಟ್, ಸೂರ್ಯಪ್ರಕಾಶ್ ಗೌಡ, ನಿರ್ಮಲಾ ಕುಮಾರಿ ಸಿ.ಎನ್. ಇವರು ಶ್ರೇಷ್ಠ ಕಲಾವಿದರಾಗಿದ್ದು, ಸ್ವಂತ ಪರಿಶ್ರಮದಿಂದ ಮುಂದೆ ಬಂದಿದ್ದಾರೆ. ಇವರಲ್ಲಿ ಜಿ.ಎಲ್.ಭಟ್ ಅವರ ‘ರಾಮಲಾಲನ’ ಪ್ರತಿಮೆ ಅಯೋಧ್ಯ ಮಂದಿರಕ್ಕೆ ಎರಡನೇ ಸ್ಥಾನಕ್ಕೆ ಆಯ್ಕೆಯಾಗಿದ್ದನ್ನು ನಾವು ಸ್ಮರಿಸಬಹುದು ಎಂದರು.
ಕಾರ್ಯಕ್ರಮದಲ್ಲಿ ಹೊಸದಿಲ್ಲಿಯ ಎನ್‍ಜಿಎಂಎ ಮಹಾನಿರ್ದೇಶಕ ಡಾ.ಸಂಜೀವ್ ಕಿಶೋರ್ ಗೌತಮ್, ಚಿತ್ರಕಲಾ ಪರಿಷತ್ತಿನ ಪ್ರಧಾನ ಕಾರ್ಯದರ್ಶಿ ಶಶಿಧರ್ ಎಸ್.ಎನ್., ಪದಾಧಿಕಾರಿಗಳು, ಪ್ರಶಸಿ ಪುರಸ್ಕೃತರು, ಅವರ ಕುಟುಂಬದವರು, ಹಿರಿಯ ಕಲಾವಿದರು ಉಪಸ್ಥಿತರದ್ದರು.