ಕರಾವಳಿಗರಿಗೆ ತಮ್ಮ ಸಂಸ್ಕೃತಿಯನ್ನು ಪ್ರಪಂಚದ ಎಲ್ಲ ಭಾಗಕ್ಕೂ ಕೊಂಡೊಯ್ಯುವ ಶಕ್ತಿ ಇದೆ : ಡಾ.ಧರಣಿದೇವಿ ಮಾಲಗತ್ತಿ

Update: 2024-12-15 22:14 IST
Photo of Program
  • whatsapp icon

ಬೆಂಗಳೂರು : ಕರಾವಳಿಗರಿಗೆ ತಮ್ಮ ಜೀವನ ಶೈಲಿಯನ್ನು ಪ್ರಪಂಚದ ಎಲ್ಲ ಭಾಗಕ್ಕೂ ಕೊಂಡೊಯ್ಯುವ ಶಕ್ತಿ ಇದೆ ಎಂದು ಕನ್ನಡ ಸಂಸ್ಕೃತಿ ಇಲಾಖೆಯ ನಿರ್ದೇಶಕಿ ಡಾ.ಧರಣಿದೇವಿ ಮಾಲಗತ್ತಿ ಅಭಿಪ್ರಾಯಪಟ್ಟಿದ್ದಾರೆ.

ರವಿವಾರ ನಗರದ ನಯನ ಸಭಾಂಗಣದಲ್ಲಿ ಕನ್ನಡಿಗರ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ‘ಕರಾವಳಿ ಪ್ರಶಸ್ತಿ ಮತ್ತು ಪ್ರತಿಭಾ ಪುರಸ್ಕಾರ ಪ್ರದಾನ’ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ದಕ್ಷಿಣ ಕನ್ನಡಿಗರ ಸಂಸ್ಕೃತಿ, ಅವರ ಭಾಷೆ, ಆಹಾರ ಪದ್ಧತಿ ಹಾಗೂ ಜೀವನ ಶೈಲಿಯಲ್ಲಿ ಪ್ರತಿ ಬಿಂಬವಾಗುತ್ತದೆ. ಇದನ್ನು ತಾವು ನೆಲೆನಿಂತ ಪ್ರದೇಶದಲ್ಲೆಲ್ಲಾ ಪರಿಚಯಿಸುತ್ತಾರೆ. ಈ ರೀತಿಯಲ್ಲೇ ಯಕ್ಷಗಾನ ವಿಶ್ವಕ್ಕೆ ಪರಿಚಯವಾಗಿದೆ ಎಂದು ಹೇಳೀದರು.

ಕರಾವಳಿಗರು ವಿವಿಧ ಉದ್ಯಮಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುವುದಲ್ಲದೇ, ಪ್ರತಿ ಕ್ಷೇತ್ರದಲ್ಲಿಯೂ ತಮ್ಮದೇ ಛಾಪನ್ನು ಮೂಡಿಸುತ್ತಾರೆ. ಸಮಾಜದ ಸಾಮರಸ್ಯಕ್ಕೆ ಹಾಗೂ ಒಗ್ಗಟ್ಟಿಗೆ ಸದಾ ಬೆಂಬಲವಾಗಿ ನಿಂತು, ವಿವಿಧ ಸಂಘ ಸಂಸ್ಥೆಗಳನ್ನು ಸ್ಥಾಪಿಸಿ ಸಮಾಜಕ್ಕೆ ತಮ್ಮದೇ ಆದ ಕೊಡುಗೆ ನೀಡುತ್ತಿದ್ದಾರೆ. ಈ ಮೂಲಕ ಕರಾವಳಿಯು ಕೇವಲ ಸಮೃದ್ಧವಾದ ಪ್ರದೇಶ ಮಾತ್ರವಲ್ಲ, ಅಲ್ಲಿನವರ ಮನಸ್ಸು ಕೂಡ ಪರಿಶುದ್ಧವಾಗಿರುತ್ತದೆ ಎಂದು ಅವರು ಹೇಳಿದರು.

ಕರಾವಳಿಗರು ಕೆಲಸಕ್ಕಾಗಿ ಇತರ ಪ್ರದೇಶಗಳನ್ನು ಅರಸಿ ಹೋಗಿದ್ದರೂ ಎಲ್ಲೂ ತಮ್ಮ ಜೀವನ ಶೈಲಿಯನ್ನು ಬಿಟ್ಟುಕೊಡದೆ, ಕಾಪಾಡಿಕೊಂಡು ಬಂದಿದ್ದಾರೆ. ಜನ್ಮ ಭೂಮಿಯಷ್ಟೇ ಕರ್ಮ ಭೂಮಿಯೂ ಮುಖ್ಯ ಎನ್ನುವ ಮಾತನ್ನು ಕರಾವಳಿಗರು ದೃಢಪಡಿಸುತ್ತಾರೆ ಎಂದು ಡಾ.ಧರಣಿದೇವಿ ಮಾಲಗತ್ತಿ ಶ್ಲಾಘಿಸಿದರು.

ನಿವೃತ್ತ ನ್ಯಾಯಮೂರ್ತಿ ಎನ್.ಸಂತೋಷ್ ಹೆಗ್ಡೆ ಮಾತನಾಡಿ, ಸಮಾಜಮುಖಿ ಕಾರ್ಯಗಳನ್ನು ಅಭಿನಂದಿಸುವ ಜವಾಬ್ದಾರಿ ಸಮಾಜದ್ದು. ಈ ನಿಟ್ಟಿನಲ್ಲಿ ದಕ್ಷಿಣ ಕನ್ನಡಿಗರ ಸಂಘವು ಕಾರ್ಯೋನ್ಮುಖವಾಗಿದೆ. ಸಮಾಜದಲ್ಲಿ ಉತ್ತಮ ಕಾರ್ಯವನ್ನು ಅಭಿನಂದಿಸುವ ಮನಸ್ಥಿತಿ ರೂಢಿಸಿಕೊಳ್ಳಬೇಕು. ಒಳ್ಳೆ ಕಾರ್ಯವನ್ನು ಗುರುತಿಸುವ, ತಪ್ಪುಗಳನ್ನು ಶಿಕ್ಷಿಸುವ ಗುಣ ಅಳವಡಿಸಿಕೊಳ್ಳಬೇಕು. ಇದರಿಂದ ಉತ್ತಮ ಕಾರ್ಯ ಮಾಡುವರಿಗೆ ಇನ್ನಷ್ಟು ಹೆಚ್ಚಿನ ಕಾರ್ಯಉತ್ಸಾಹ ಸಿಗುತ್ತದೆ. ಜತಗೆ ಸಮಾಜಕ್ಕೂ ಪ್ರೇರಣೆ ದೊರೆಯುತ್ತದೆ ಎಂದು ಹೇಳಿದರು. ಸಂಘದ ಅಧ್ಯಕ್ಷ ಡಾ.ಕೆ.ಸಿ.ಬಲ್ಲಾಳ್ ಸಭೆಯ ಅಧ್ಯಕ್ಷತೆ ವಹಿಸಿಕೊಂಡಿದ್ದರು.

‘ಕರಾವಳಿ ರತ್ನ’ ಪ್ರಶಸ್ತಿ ಪ್ರದಾನ ಹಾಗೂ ಪ್ರತಿಭಾ ಪುರಸ್ಕಾರ :

2023-24ನೆ ಸಾಲಿನ ‘ಕರಾವಳಿ ರತ್ನ’ ಪ್ರಶಸ್ತಿಯನ್ನು ಟೀಕೇಸ್ ಗ್ರೂಪ್‌ನ ಸ್ಥಾಪಕ ಉಮರ್ ಟೀಕೆ, ವರ್ಲ್ಡ್ ಫೆಡರೇಷ್ ಆಫ್ ಬಂಟ್ಸ್ ಅಸೋಸಿಯೇಷನ್‌ನ ಉಪಾಧ್ಯಕ್ಷ ಕರ್ನಿರೆ ವಿಶ್ವನಾಥ ಶೆಟ್ಟಿ, ಕ್ಯಾಂಟರ್ಬೆರಿ ಗ್ರೂಪ್‌ನ ಅಧ್ಯಕ್ಷ ಲಿಯೋ ಕ್ವಾಡ್ರೋಸ್ ಹಾಗೂ ಆದಾಯ ತೆರಿಗೆಯ ಅಧಿಕಾರಿ ನಿವ್ಯಾ ಶೆಟ್ಟಿ ಅವರಿಗೆ ನೀಡಿ ಗೌರವಿಸಲಾಯಿತು. ಎಸೆಸೆಲ್ಸಿ ಪರೀಕ್ಷೆಯಲ್ಲಿ ಹಾಗು ದ್ವಿತೀಯ ಪಿಯುಸಿಯಲ್ಲಿ ಹೆಚ್ಚಿನ ಅಂಕ ಪಡೆದ 13 ಹಾಗೂ 23 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.

Full View

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News