ಬೆಂಗಳೂರು| ಸಂಬಳ ಕೊಡದಿದ್ದಕ್ಕೆ ಹುಸಿ ಬಾಂಬ್ ಕರೆ: ರೆಸ್ಟೋರೆಂಟ್ ಮಾಜಿ ನೌಕರ ಪೊಲೀಸ್ ವಶಕ್ಕೆ

Update: 2024-03-28 14:09 GMT

ವೇಲು (Photo credit: news9live.com)

ಬೆಂಗಳೂರು: ಸಂಬಳ ಕೊಡದಿದ್ದಕ್ಕೆ ಕುಡಿದ ನಶೆಯಲ್ಲಿ ರೆಸ್ಟೋರೆಂಟ್‍ನಲ್ಲಿ ಬಾಂಬ್ ಇಟ್ಟಿರುವುದಾಗಿ ಹುಸಿ ಕರೆ ಮಾಡಿದ್ದ ಆರೋಪಿಯನ್ನು ಮಹದೇವಪುರ ಠಾಣೆ ಪೊಲೀಸರು ವಶಕ್ಕೆ ಪಡೆದುಕೊಂಡಿರುವುದು ವರದಿಯಾಗಿದೆ.

ನಗರದ ಬಾಣಸವಾಡಿ ನಿವಾಸಿ ವೇಲು ಎಂಬಾತ ಆರೋಪಿಯಾಗಿದ್ದು, ಪೊಲೀಸರು ವಿಚಾರಣೆ ನಡೆಸುತ್ತಿರುವುದಾಗಿ ತಿಳಿಸಿದ್ದಾರೆ.

ಮಾ.27ರ ರಾತ್ರಿ ಮಹದೇವಪುರದ ಪಾಸ್ತಾ ರೆಸ್ಟೋರೆಂಟ್‍ಗೆ ಕರೆ ಮಾಡಿದ್ದ ಈತ, ರೆಸ್ಟೋರೆಂಟ್‍ನಲ್ಲಿ ಬಾಂಬ್ ಇಡಲಾಗಿದ್ದು ಶೀಘ್ರದಲ್ಲೇ ಸ್ಫೋಟವಾಗಲಿದೆ ಎಂದು ಬೆದರಿಸಿದ್ದ. ಆತಂಕಗೊಂಡ ಮಾಲಕರು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದರು. ತಕ್ಷಣವೇ ಸ್ಥಳಕ್ಕೆ ಬಂದು ರೆಸ್ಟೋರೆಂಟ್ ಪೂರ್ತಿ ಶೋಧ ಕಾರ್ಯ ನಡೆಸಿದಾಗ ಇದೊಂದು ಹುಸಿ ಬಾಂಬ್ ಕರೆ ಎಂದು ಗೊತ್ತಾಗಿತ್ತು.

ಬಾಂಬ್ ಬೆದರಿಕೆ ಕರೆಯನ್ನು ಪೊಲೀಸರು ಟ್ರ್ಯಾಕ್ ಮಾಡಿದಾಗ, ಬೆದರಿಕೆ ಹಾಕಿದವ ಇಂದಿರಾನಗರದ ರೆಸ್ಟೋರೆಂಟ್‍ನ ಬ್ರ್ಯಾಂಚ್‍ನಲ್ಲಿ ಕೆಲಸ ಮಾಡುತ್ತಿದ್ದ ಮಾಜಿ ನೌಕರ ಎಂದು ತಿಳಿದುಬಂದಿದೆ.

ಮೂರು ತಿಂಗಳ ಹಿಂದೆ ಆರೋಪಿ ವೇಲು ಕೆಲಸ ಬಿಟ್ಟಿದ್ದ. ಕುಡಿತಕ್ಕೆ ದಾಸನಾಗಿದ್ದು, ಕೆಲಸ ಅವಧಿಯಲ್ಲಿ ಅನುಚಿತವಾಗಿ ವರ್ತಿಸುತ್ತಿದ್ದ. ಹೀಗಾಗಿ ರೆಸ್ಟೋರೆಂಟ್ ಮಾಲಕರು ಆತನಿಗೆ ಸಂಬಳ ನೀಡಿರಲಿಲ್ಲ. ಈ ಕಾರಣಕ್ಕೆ ಕುಡಿದ ನಶೆಯಲ್ಲಿ ಮಾ.27ರ ರಾತ್ರಿ ಮಹದೇವಪುರದ ಪಾಸ್ತಾ ರೆಸ್ಟೋರೆಂಟ್‍ಗೆ ಹುಸಿ ಬಾಂಬ್ ಕರೆ ಮಾಡಿದ್ದಾನೆ. ಸದ್ಯ ಆರೋಪಿ ವಶದಲ್ಲಿದ್ದು, ಕ್ರಮ ಜರುಗಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News