ದೇವನಹಳ್ಳಿ- ನಲ್ಲೂರು ಟೋಲ್ ಸಂಗ್ರಹ ನ. 17ರಿಂದ ಪ್ರಾರಂಭ
ಬೆಂಗಳೂರು, ನ.11: ದೊಡ್ಡಬಳ್ಳಾಪುರ ಬೈಪಾಸ್ ನಿಂದ ನಲ್ಲೂರು ಟೋಲ್‍ವರೆಗಿನ 34.15 ಕಿ.ಮೀಗೆ ಟೋಲ್ ಸುಂಕ ವಸೂಲಿ ನ.17ರಿಂದ ಪ್ರಾರಂಭವಾಗಲಿದ್ದು, ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ದರ ಪಟ್ಟಿಯನ್ನು ಬಿಡುಗಡೆಗೊಳಿಸಿದೆ.
ಇಲ್ಲಿನ ದಾಬಸ್ ಪೇಟೆ-ಹೊಸೂರು ಮಾರ್ಗದ ರಾಷ್ಟ್ರೀಯ ಹೆದ್ದಾರಿ 648ರ ನಾಲ್ಕು ಪಥದ ರಸ್ತೆಯ ಕಾಮಗಾರಿಯು ಬಹುತೇಕ ಪೂರ್ಣವಾಗಿದೆ. ಈ ಹೆದ್ದಾರಿಯ ನಿರ್ಮಾಣದಿಂದ ಬೆಂಗಳೂರು ನಗರ ಒಳ ಬರುವ ವಾಹನಗಳಿಗೆ ತಡೆ ಬೀಳಲಿದೆ. ಇದರಿಂದ ನಗರದ ಸಂಚಾರ ಸಮಸ್ಯೆ ಕೂಡ ಬಗೆ ಹರಿಯುವುದು ಜತೆಗೆ ಬೆಂಗಳೂರು ನಗರದ ಹೊರವರ್ತುಲ ರಸ್ತೆಯಾಗಿ ಇದು ಬಳಕೆಯಾಗಲಿದೆ.
ಪ್ರಮುಖವಾಗಿ ನೆಲಮಂಗಲ, ದೊಡ್ಡಬಳ್ಳಾಪುರ, ದೇವನಹಳ್ಳಿ, ಹೊಸಕೋಟೆ ಮಾರ್ಗವಾಗಿ ಹೊಸೂರನ್ನು ತಲುಪಲಿದೆ. ದೊಡ್ಡಬಳ್ಳಾಪುರ ಬೈಪಾಸ್ ನಿಂದ ನಲ್ಲೂರು ಗ್ರಾಮದ ವರೆಗಿನ ರಸ್ತೆ ಪೂರ್ಣಗೊಂಡಿದೆ. ಹೀಗಾಗಿ, ನ.17 ರಿಂದ ಸುಂಕ ವಸೂಲಿ ಪ್ರಾರಂಭವಾಗಲಿದೆ, 34.15 ಕಿ.ಮೀ ಪ್ರಯಾಣಕ್ಕೆ ವಾಹನ ಸವಾರರು ಟೋಲ್ ಸುಂಕ ಪಾವತಿ ಮಾಡಬೇಕಿದೆ.