ಕರ್ನಾಟಕದ ಅಭಿವೃದ್ಧಿಯೇ ʼಕ್ವಿನ್ ಸಿಟಿʼ ಯೋಜನೆಯ ಮೂಲ ಆಶಯ : ಡಿಸಿಎಂ ಡಿ.ಕೆ.ಶಿವಕುಮಾರ್

Update: 2024-09-26 11:37 GMT

PC:x@DKShivakumar

ಬೆಂಗಳೂರು : "ಕ್ವಿನ್ ಸಿಟಿ ಮೂಲಕ ಕೇವಲ ಕಟ್ಟಡಗಳನ್ನು ನಿರ್ಮಾಣ ಮಾಡುವುದು ನಮ್ಮ ಗುರಿಯಲ್ಲ. ಶಿಕ್ಷಣ, ತಂತ್ರಜ್ಞಾನ, ಉದ್ಯೋಗ, ಸುಸ್ಥಿರ ಅಭಿವೃದ್ಧಿ ಸೇರಿದಂತೆ ಕರ್ನಾಟಕದ ಭವಿಷ್ಯವನ್ನು ಗುರಿಯಾಗಿಟ್ಟುಕೊಂಡು ಜನರ ಜೀವನದಲ್ಲಿ ಬದಲಾವಣೆ ತರುವುದು ಯೋಜನೆಯ ಗುರಿ" ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಹೇಳಿದರು.

ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ಗುರುವಾರ ನಡೆದ ಕ್ವಿನ್ ಸಿಟಿ (ಜ್ಞಾನ, ಆರೋಗ್ಯ ಮತ್ತು ಸಂಶೋಧನಾ ನಗರ) ಯೋಜನೆಯ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, "ಸ್ವಾತಂತ್ರ್ಯ ಬಂದ ದಿನದಿಂದಲೂ ಬೆಂಗಳೂರು ಬೌದ್ಧಿಕ ನಗರ ಎಂದು ಹೆಸರು ಮಾಡಿದೆ. ಈ ನಗರದ ಅಭಿವೃದ್ಧಿಗೆ ನೆಹರು ಸಾಕಷ್ಟು ಶಕ್ತಿ ಕೊಟ್ಟಿದ್ದಾರೆ. ನಾವೆಲ್ಲರೂ ಸೇರಿ ಇನ್ನಷ್ಟು ಬಲಿಷ್ಠಗೊಳಿಸಬೇಕಿದೆ" ಎಂದರು.

"ಕರ್ನಾಟಕದ ಸಾಮರ್ಥ್ಯದ ಬಗ್ಗೆ ಕಿಂಚಿತ್ತೂ ಅನುಮಾನ ಬೇಡ. ಬೆಂಗಳೂರು ನಗರಾಭಿವೃದ್ಧಿ ಸಚಿವನಾಗಿ, ಈ ನಗರದ ಅಭಿವೃದ್ಧಿಗೆ ನಾನು ಕಟಿಬದ್ಧನಾಗಿದ್ದೇನೆ. ನೀರು,ವಿದ್ಯುತ್, ರಸ್ತೆ ಸೇರಿದಂತೆ ಎಲ್ಲಾ ಮೂಲ ಸೌಕರ್ಯವನ್ನು ಜನರಿಗೆ ಹಾಗೂ ಕೈಗಾರಿಕೆಗಳಿಗೆ ಒದಗಿಸುವುದು ನಮ್ಮ ಆದ್ಯತೆ" ಎಂದರು.

"ಎರಡು ದಿನಗಳ ಹಿಂದೆ ಕರ್ನಾಟಕದ ಮೊಟ್ಟ ಮೊದಲ ನೈಸರ್ಗಿಕ ಅನಿಲ ವಿದ್ಯುತ್ ಉತ್ಪಾದನಾ ಸ್ಥಾವರವನ್ನು ಯಲಹಂಕದಲ್ಲಿ ಉದ್ಘಾಟನೆ ಮಾಡಲಾಯಿತು. ಈ ರೀತಿಯ ಭವಿಷ್ಯವನ್ನು ಮುಂದಿಟ್ಟುಕೊಂಡ ಅನೇಕ ಯೋಜನೆಗಳನ್ನು ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಈ ರಾಜ್ಯಕ್ಕೆ ನೀಡಿದೆ" ಎಂದರು.

"ಇನ್ನೇನು ಕೆಲವೇ ದಿನಗಳಲ್ಲಿ ಕಾವೇರಿ ಕುಡಿಯುವ ನೀರಿನ ಐದನೇ ಹಂತ ಕಾಮಗಾರಿ ಮುಗಿಯಲಿದೆ. ಈ ಹಿಂದಿನ ನಾಲ್ಕು ಹಂತಗಳಿಂದ 1,450 ಎಂಎಲ್ ಡಿ ನೀರನ್ನು ಬೆಂಗಳೂರಿಗೆ ಸರಬರಾಜು ಮಾಡಲಾಗುತ್ತಿದೆ. ಈ ಐದನೇ ಹಂತದ ಯೋಜನೆಯಲ್ಲಿ 775 ಎಂಎಲ್‌ಡಿ ನೀರನ್ನು ಬೆಂಗಳೂರಿಗೆ ನಾವು ನೀಡುತ್ತಿದ್ದೇವೆ. ಮುಂದಿನ 10 ವರ್ಷ ಬೆಂಗಳೂರು ಹಾಗೂ ನಗರದ ಸುತ್ತಮುತ್ತ ನೀರಿನ ತೊಂದರೆ ಇರುವುದಿಲ್ಲ" ಎಂದು ತಿಳಿಸಿದರು.

ದೇಶಕ್ಕೆ ಒಂದೇ ಗಿಫ್ಟ್ ಸಿಟಿಯೆಂದ ಪ್ರಧಾನಿ ಮೋದಿ :

"ನಾನು ಮತ್ತು ಸಿದ್ದರಾಮಯ್ಯ ಅವರು ದಿಲ್ಲಿ ಭೇಟಿ ವೇಳೆ ಪ್ರಧಾನಿ ಮೋದಿ ಅವರ ಬಳಿ ಗುಜರಾತಿಗೆ ಗಿಫ್ಟ್ ಸಿಟಿ ಯೋಜನೆ ನೀಡಿದಂತೆ ನಮಗೂ ನೀಡಬೇಕೆಂದು ಮನವಿ ಮಾಡಿದ್ದೆವು. ಈ ದೇಶಕ್ಕೆ ಒಂದೇ ಗಿಫ್ಟ್ ಸಿಟಿ ಇರಬೇಕು ಎಂದು ಅವರು ಮನವಿಯನ್ನು ತಿರಸ್ಕರಿಸಿದ್ದರು. ನಾವು ಈ ಯೋಜನೆಯನ್ನು ಆ ಮಟ್ಟಕ್ಕೆ ತೆಗೆದುಕೊಂಡು ಹೋಗಿ ಸಾಧಿಸಿ ತೋರಿಸಬೇಕು" ಎಂದು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News